ರಾಮನಗರದಲ್ಲಿ ದೋಸ್ತಿಗಳ ಅಬ್ಬರ, ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ

ಡಿಜಿಟಲ್ ಕನ್ನಡ ಟೀಮ್:

ಜನಪದ ಕಲಾವಿದರ ತಂಡಗಳ ಪ್ರದರ್ಶನ, ಪಟಾಕಿ ಅಬ್ಬರ, ಡಿಕೆ… ಡಿಕೆ… ಎಂಬ ಬೆಂಬಲಿಗರ ಘೋಷಣೆಗಳೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿದ ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಡಿಕೆ ಸುರೇಶ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ನಿನ್ನೆ ಮಂಡ್ಯದಲ್ಲಿ ಅಬ್ಬರಿಸಿದ್ದ ದೋಸ್ತಿಗಳು ಇಂದು ರಾಮನಗರದಲ್ಲಿ ತಮ್ಮ ಹವಾ ಸೃಷ್ಠಸಿದರು. ಸತತ ಎರಡನೇ ಬಾರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಲು ಹೋರಟಿರುವ ಡಿಕೆ ಸುರೇಶ್ ಅವರಿಗೆ ಸಹೋದರ ಹಾಗೂ ರಾಜ್ಯ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಜೆಡಿಎಸ್ ಶಾಸಕ ಮಂಜು, ಮಾಜಿ ಶಾಸಕ ಬಾಲಕೃಷ್ಣ ಅವರು ಸಾಥ್ ನೀಡಿದರು.

ಮಂಗಳವಾರ ಬೆಳಗ್ಗೆ ತಾಯಿಯ ಆಶಿರ್ವಾದ ಪಡೆದ ಡಿಕೆ ಸುರೇಶ್,ನಂತರ ರಾಮನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದರು. ನಂತರ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಸುರೇಶ್ ಮುಸ್ಲಿಂ ಮುಖಂಡರ ಜತೆ ಚರ್ಚೆ ಮಾಡಿದರು. ಆನಂತರ ಚರ್ಚ್ ಗೂ ಭೇಟಿ ನೀಡಿ ಪ್ರಾರ್ಥನೆ ಮಾಡಿದ ಸುರೇಶ್ ನಂತರ ತೆರೆದ ವಾಹನದಲ್ಲಿ ಸಾವಿರಾರು ಬೆಂಬಲಿಗರ ಜತೆ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ಸುರೇಶ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಅಶ್ವಥ್ ನಾರಾಯಣ್ ಅವರನ್ನು ಕಣಕ್ಕಿಳಿಸಲಾಗಿದೆ. ಆರಂಭದಲ್ಲಿ ಸಿಪಿ ಯೋಗೇಶ್ವರ್ ಸ್ಪರ್ಧೆ ಚರ್ಚೆಯಾಗಿತ್ತಾದರೂ ನಂತರ ಯೋಗೇಶ್ವರ್ ಪುತ್ರಿ ನಿಶಾ ಅವರು ಕಣಕ್ಕಿಳಿಯುವ ಸುದ್ದಿ ಹರಡಿತ್ತು. ಆದರೆ ಸ್ಥಳೀಯ ಬಿಜೆಪಿ ನಾಯಕರೇ ನಿಶಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಕೈಬಿಟ್ಟು ಅಂತಿಮ ಕ್ಷಣದಲ್ಲಿ ಅಶ್ವತ್ ನಾರಾಯಣ್ ಅವರನ್ನು ಕಣಕ್ಕಿಳಿಸಲಾಗಿದೆ.

Leave a Reply