ಅಭಿವೃದ್ಧಿಗಾಗಿ ನಾನು ಕುಮಾರಸ್ವಾಮಿ ಒಂದಾಗಿದ್ದೇವೆ: ಸಚಿವ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಕಳೆದ 35 ವರ್ಷಗಳಿಂದ ನಾನು ಗೌಡರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇನ್ನು ಎಷ್ಟು ದಿನಾ ಅಂತಾ ಯುದ್ಧ ಮಾಡಕ್ಕೆ ಆಗುತ್ತೆ. ನಮ್ಮಲ್ಲೂ ಬಿಸಿ ರಕ್ತ ಎಷ್ಟು ದಿನಾ ಇರುತ್ತೆ. ನಮಗೆ ಯುದ್ಧ ಬೇಡ, ಅಭಿವೃದ್ಧಿ ಬೇಕು ಅಂತಾ ಈಗ ನಾವಿಬ್ಬರೂ ಒಂದಾಗಿದ್ದೇವೆ…’ ಎಂದು ಜಲಸಂಪನ್ಮೂಲ, ಕನ್ನಡ ಮ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ಕಾರ್ಯಕರ್ತರಿಗೆ ಒಗ್ಗಟ್ಟಿನ ಮಂತ್ರ ಹೇಳಿದ್ದಾರೆ.

ಮಂಗಳವಾರ ರಾಮನಗರದಲ್ಲಿ ಬೆಂಗಳೂರು ಗ್ರಾಮಾಂತರದ ಮೈತ್ರಿ ಅಭ್ಯರ್ಥಿ ಹಾಗೂ ಸಹೋದರ ಡಿಕೆ ಸುರೇಶ್ ಅವರ ನಾಮಪತ್ರ ಸಲ್ಲಿಕೆ ವೇಳೆ ಸಾಥ್ ನೀಡಿದ ,ಚಿವು ನಂತರನಡೆದ ಸಾರ್ವಜನಿಕ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದೇ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜತೆಗೂಡಿರುವುದು ಆರಂಭ. ಮುಂದಿನ ದಿನಗಳಲ್ಲಿ ಪ್ರಗತಿ ಹಾಗೂ ಯಶಸ್ಸು ಬರಲಿದೆ.

ಸುದೀರ್ಘವಾಗಿ ನಾನು ಹಾಗೂ ಕುಮಾರಸ್ವಾಮಿ ಯುದ್ಧ ಮಾಡಿಕೊಂಡು ಬಂದಿದ್ದೇವೆ. ಈಗ ನಮಗೆ ಯುದ್ಧ ಬೇಡ ಅಭಿವೃದ್ಧಿ ಬೇಕು ಎಂದು ಅರಿವಾಗಿದೆ. ಅದಕ್ಕಾಗಿ ಒಂದಾಗಿದ್ದೇವೆ. ರಾಜ್ಯ ಹಾಗೂದೇಶದ ಹಿತದೃಷ್ಟಿಯಿಂದ ಇದು ಅನಿವಾರ್ಯ. ದೇಶದ ವಿಚಾರ ಬಂದಾಗ ಕೆಲವು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಈಗ ನಾವು ಅದನ್ನೇ ಮಾಡಿದ್ದೇನೆ.

ಅಕ್ಕಿ ಹಾಗೂ ಹರಿಶಿಣ ಬೇರೆ ಅವು ಒಂದಾದರೆ ಮಾತ್ರಾಕ್ಷತೆ. ಅದೇ ರೀತಿ ಕಾಂಗ್ರೆಸ್ ಜೆಡಿಎಸ್ ಒಂದಾಗಿದೆ. ಗಂಡು ಮತ್ತು ಹೆಣ್ಣು ಮದುವೆಯಾದ ಬಳಿಕ ವಧು ವರರಾಗುತ್ತಾರೆ. ನಾನು ಕುಮಾರಣ್ಣ ಈಗ ಒಟ್ಟಾಗಿದ್ದೇವೆ.

ಬಿಜೆಪಿಯವರು ಹಿಂದುತ್ವ, ಹಿಂದುಗಳು ಮುಂದು ಎಂದು ಹೇಳಿಕೊಂಡು ತಿರುಗುತ್ತಾರೆ. ನಾವುಗಳೂ ಕೂಡ ಹಿಂದುಗಳೆ. ಆದರೆ ನಾವು ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನರು, ಬೌದ್ಧರು, ಅಲ್ಪಸಂಖ್ಯಾತರು, ರೈತರು ಎಲ್ಲರೂ ಒಂದೇ ಎಂಬ ತತ್ವವನ್ನು ಪಾಲಿಸಿಕೊಂಡು ಬಂದಿದ್ದೇವೆ. ನಾವು ಹಿಂದೆ ಬಿದ್ದಿಲ್ಲ. ನಾವೂ ಕೂಡ ಮುಂದೆ ಇದ್ದೇವೆ. ಇದೇ ನಮಗೂ ಹಾಗೂ ಬಿಜೆಪಿಯವರಿಗೂ ಇರುವ ವ್ಯತ್ಯಾಸ. ಈ ಚುನಾವಣೆ ಡಿಕೆ ಸುರೇಶ್ ಮತ್ತು ಅಶ್ವತ್ ನಾರಾಯಣ ಅವರ ನಡುವೆ ಅಲ್ಲ. ದೇವೇಗೌಡರು ಹಾಗೂ ಮೋದಿ, ರಾಹುಲ್ ಗಾಂಧಿ ಹಾಗೂ ಮೋದಿ, ಕುಮಾರಸ್ವಾಮಿ ಹಾಗೂ ಮೋದಿ ವಿರುದ್ಧದ ಸ್ಪರ್ಧೆ.

ಅಮೆರಿಕದವರದು ಬಿಳಿ ಹಾಗೂ ನಿಗ್ರೋ ಅವರದು ಕಪ್ಪು ಮೈಬಣ್ಣ. ಆದರೆ ಅವರಿಬ್ಬರ ರಕ್ತ ಬಣ್ಣ ಕೆಂಪು. ಅವರಿಬ್ಬರ ಬೆವರು ಕೂಡ ಉಪ್ಪು. ಹೀಗಾಗಿ ಬೇಧ ಭಾವ ಇಟ್ಟುಕೊಳ್ಳದೆ ನಾವು ಸಮಾಜದಲ್ಲಿ ಬದುಕಬೇಕು. ಹಗೆತನ ಹಾಗೂ ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅದು ನಮ್ಮನ್ನೇ ಸುಟ್ಟಿಹಾಕುತ್ತದೆ. ಪ್ರೀತಿಯಿಂದ ಎಲ್ಲವನ್ನು ಗೆಲ್ಲಬಹುದು. ಅದನ್ನು ನೀವೂ ನೋಡುತ್ತಿದ್ದೀರಿ ನಾವು ಅನುಭವಿಸುತ್ತಿದ್ದೀರಿ.

ಈ ಹಿಂದೆ ಯಾವುದೇ ಸರಕಾರಗಳು ಮಾಡದೇ ಇರುವಂತರ ಕಾರ್ಯಗಳನ್ನು ನಾವು ಮಾಡಿದ್ದೇವೆ. ಇದನ್ನು ನಾವು ಹೇಳಿಕೊಳ್ಳಬಾರದು ಆದರೂ ಹೇಳುತ್ತಿದ್ದೇನೆ. ಜಲಸಂಪನ್ಮೂಲ ಅಥವಾ ಇಂಧನ ಸಚಿವರಾಗಿದ್ದಾಗ ಮಂಡ್ಯ ರಾಮನಗರ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ಹಾಗಂತ ಬೇರೆ ಜಿಲ್ಲೆಗಳನ್ನು ನಾವು ಕಡೆಗಣಿಸಿಲ್ಲ. ಕಾವೇರಿ ಭಾಗದ ಪ್ರದೇಶದ ಜಿಲ್ಲೆಗಳಿಗೆ 6 ಸಾವಿರ ಕೋಟಿಯಷ್ಟು ನೀರಾವರಿ ಯೋಜನೆ ಜಾರಿ ಮಾಡದ್ದೇವೆ. ಉತ್ತರ ಕರ್ನಾಟಕ ಜಿಲ್ಲೆಗಳಿಗೂ ಸಾಕಷ್ಟು ಯೋಜನೆ ರೂಪಿಸಿದ್ದೇವೆ. ಕುಮಾರಸ್ವಾಮಿ ಅವರು ಜಿಲ್ಲೆಗೆ ಅನುದಾನ ನೀಡಲು ಮುಂದಾದರು. ನಾನು ವೈದ್ಯಕೀಯ ಕಾಲೇಜು ಬೇಕು ಎಂದು ಕೇಳಿದೆ. ಅದನ್ನು ಕೊಟ್ಟರು. 750 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಮಾಡಲಾಗಿದೆ. ಇನ್ನು ಬೆಂಗಳೂರಿನ ಸುತ್ತಮುತ್ತ ಹೈವೇ ರಸ್ತೆ ನಿರ್ಮಾಣದಿಂದ ನಿಮ್ಮ ಜಮೀನಿನ ಬೆಲೆ ದುಪ್ಪಟ್ಟಾಗುತ್ತಿದೆ. ಇವೆಲ್ಲವೂ ನಿಮಗೆ ಅನುಕೂಲ ಮಾಡಿಕೊಡುತ್ತಿವೆ.

ಈ ಕ್ಷೇತ್ರದಲ್ಲಿ ಡಿಕೆ ಸುರೇಶ್ ಉತ್ತಮ ಕೆಲಸ ಮಾಡಿದ್ದಾರೆ.ಹಗಲಿರುಳು ಅವರು ಶ್ರಮಿಸಿರುವುದು ನಿಮಗೇ ಗೊತ್ತಿದೆ. ಅವರು ಸದಾ ಕ್ರಿಯಾಶೀಲರಾಗಿ ಅಭಿವೃದ್ಧಿ ಕಾರ್ಯಗಳನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಇದೆ. ಆದರೆ ಈಗ ನಾವುಗಳೇ ಒಂದಾಗಿದ್ದೇವೆ. ಇದರ ಉದ್ದೇಶವನ್ನು ನೀವುಗಳೂ ಕೂಡ ಅರ್ಥ ಮಾಡಿಕೊಂಡು ಒಟ್ಟಾಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಮುಂದಕ್ಕೆ ಹೋಗೋಣ. ಆಗ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ಸಕಾರವಾಗುತದೆ.’

ಸಹೋದರಿ ತೇಜಸ್ವಿನಿಗೆ ಅನ್ಯಾಯ!

ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿರುವುದರ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, ‘ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಗೊಂದಲ ಇದೆ. ಅವರು ನಮ್ಮ ಕಾರ್ಯಕರ್ತರನ್ನು ಕೆರೆದುಕೊಂಡು ಹೋಗಿ ಕಣಕ್ಕಿಳಿಸುತ್ತಿದ್ದಾರೆ. ಸಹೋದರಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಅನ್ಯಾಯವಾಗಿದೆ. ಕಾರ್ಯಕರ್ತನ್ನು ಬಳಸಿಕೊಂಡು ಕೈಬಿಡುವುದು ಬಿಜೆಪಿ ಸಂಪ್ರದಾಯ’ ಎಂದು ಟೀಕಿಸಿದ್ದಾರೆ.

Leave a Reply