ಸುರೇಶ್ ರನ್ನು 5 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿ: ಮತದಾರರಲ್ಲಿ ಸಿಎಂ ಕುಮಾರಸ್ವಾಮಿ ಮನವಿ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿಕೆ ಸುರೇಶ್ ಅವರು ಕನಿಷ್ಠ 5ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಮಂಗಳವಾರ ಬೃಹತ್ ಮೆರವಣಿಗೆ ಮೂಲಕ ಡಿಕೆ ಸುರೇಶ್ ಅವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಸಹೋದರ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಥ್ ನೀಡಿದರು. ಅಲ್ಲದೆ ನಾಮಪತ್ರ ಸಲ್ಲಿಕೆ ನೆತರ ನಡೆದ ಸಮಾವೇಷದಲ್ಲಿ ರಾಜರಾಜೇಶ್ವರಿ ನಗರದ ಶಾಕ ಮುನಿರತ್ನ,ಜೆಡಿಎಸ್ ಶಾಸಕ ಮಂಜು, ಮಾಜಿ ಶಾಸಕ ಬಾಲಕೃಷ್ಣ, ಮಂಡ್ಯ ಸಂಸದ ಶಿವರಾಮೇಗೌಡ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಹೇಳಿದ್ದಿಷ್ಟು… ‘ಡಿಕೆ ಸುರೇಶ್ ಕ್ರಿಯಾಶೀಲ ಸಂಸದ. ಈ ಕ್ಷೇತ್ರದ ಜನರಿಗಾಗಿ ಶ್ರಮವಹಿಸಿ ದುಡಿದಿದ್ದಾರೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲೂ ಅವರಿಗೆ ನಾವು ನಮ್ಮ ಬೆಂಬಲ ನೀಡಬೇಕಿದೆ.

ನಿಮಗೆ ಶಾಶ್ವತ ನೀರಾವರಿ ಸೌಲಭ್ಯ ತರಲು, ಕೆರೆ ಕಟ್ಟೆ, ಕುಡಿಯಲು ಜಲಧಾರೆ ಕಾರ್ಯಕ್ರಮ ಅನುಷ್ಠಾನಕ್ಕೆ ತರಲು ನಾನು ಹಾಗೂ ಶಿವಕುಮಾರ್ ಹೋರಾಡಿದ್ದೇವೆ. ಈ ಸರಕಾರವನ್ನು ಹಲವು ರೀತಿ ಅಸ್ಥಿರಗೊಳಿಸಲು ಪ್ರತ್ನಿಸುತ್ತಿದ್ದು, ನಾವಿಬ್ಬರು ಅದನ್ನು ಮೆಟ್ಟಿ ನಿಂತಿದ್ದೇವೆ. ನಮ್ಮಿಬ್ಬರ ಈ ಹೋರಾಟಕ್ಕೆ ನಿಮ್ಮ ಬೆಂಬಲ ಅಗತ್ಯವಿದೆ. ನಿಮ್ಮ ಬೆಂಬಲದಿಂದ ಈ ಸರ್ಕಾರ ಗಟ್ಟಿಯಾಗಿ ನಿಂತಿದೆ. ಈ ಸರ್ಕಾರ ಉಳಿಸಲು ಮತ್ತೆ ನೀವು ನಮಗೆ ಶಕ್ತಿ ತುಂಬಬೇಕು. ನಿಮ್ಮ ಸಣ್ಣ ಪುಟ್ಟ ಸಂಘರ್ಷ, ಮನಸ್ತಾಪಗಳನ್ನು ಬದಿಗಿಟ್ಟು ಒಟ್ಟಾಗಿ ಹೋರಾಟ ಮಾಡಿ.

ನಿಮ್ಮ ಆಶಿರ್ವಾದದಿಂದ ಇಂದು ನಾನು ಹಾಗೂ ಶಿವಕುಮಾರ್ ಅಣ್ಣ ತಮ್ಮದಿರಾಗಿ ನಿಮ್ಮ ಮುಂದೆ ಬಂದಿದ್ದೇವೆ. ಇಷ್ಟು ದಿನಗಳ ಕಾಲ ನೀಡಿದ ಸಹಕಾರವನ್ನು ಮುಂದೂ ನೀಬೇಕು. ಡಿಕೆ ಸುರೇಶ್ ಕೂಡ ನನಗೆ ಮತ್ತೊಬ್ಬ ಸಹೋದರ. ರಾಮನಗರ ಉಪಚುನಾವಣೆಯಲ್ಲಿ ನನ್ನ ಪತ್ನಿಯನ್ನು ಗೆಲ್ಲಿಸಲು ಸುರೇಶ್ ಹಗಲಿರುಳು ಶ್ರಮಿಸಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರು ಶ್ರಮಿಸಿದ್ದಾರೆ. ಅವರ ಋಣ ನನ್ನ ಮೇಲಿದೆ. ಹೀಗಾಗಿ ನನ್ನ ಪತ್ನಿಗೆ ನೀಡಿದ ಬಹುಮತವನ್ನು ಸುರೇಶ್ ಗೂ ನೀಡಿ. ಸುರೇಶ್ ಅವರನ್ನು ಭಾರಿ ಮತಗಳ ಅಂತರದಿಂದ ಗೆಲ್ಲಿಸಬೇಕು. ಇದಕ್ಕಾಗಿ ನಿಮ್ಮ ಅಸಮಾಧಾನಗಳನ್ನು ಬದಿಗಿಟ್ಟು ಕೈಜೋಡಿಸಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಾದರೆ ನಮ್ಮ ಅಭ್ಯರ್ಥಿಗೆ ಮಾಗಡಿಯಲ್ಲೇ 1 ಲಕ್ಷಕ್ಕೂ ಹೆಚ್ಚು ಮುನ್ನಡೆ ಸಿಗಲಿದೆ. ಚನ್ನಪಟ್ಟಣದಲ್ಲೂ 80- 1 ಲಕ್ಷ ಮುನ್ನಡೆ ಸಿಗಲಿದೆ. ಹೀಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಭಾರಿ ಮುನ್ನಡ ಪಡೆದರೆ ಡಿಕೆ ಸುರೇಶ್ ಅವರಿಗೆ 5 ಲಕ್ಷ ಮತಗಳ ಮುನ್ನಡೆ ಸಿಗಲಿದೆ.

ರಾಮನಗರ ನನಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರ. ಇದನ್ನು ಅನೇಕ ಸಂದರ್ಭಗಳಲ್ಲಿ ನಾನು ಹೇಳಿದ್ದೇನೆ. ಇಷ್ಟು ದಿನಗಳ ಕಾಲ ಈ ಕ್ಷೇತ್ರದ ಜನರು ನನ್ನನ್ನು ಹಾಗೂ ಡಿಕೆ ಶಿವಕುಮಾರ್ ಅವರನ್ನು ಒಂದು ಶಕ್ತಿಯನ್ನಾಗಿ ಬೆಳೆಸಿಕೊಂಡು ಬಂದಿದ್ದೀರಿ. ಈಗ ನಾಡಿನ ಅಭಿವೃದ್ಧಿ ಉದ್ದೇಶದಿಂದ ಈ ಎರಡೂ ಶಕ್ತಿಗಳು ಒಂದಾಗಿವೆ. ಈ ಕ್ಷೇತ್ರದ ಅಭಿವೃದ್ಧಿಗೆ ಇಬ್ಬರೂ ಒಟ್ಟಾಗಿ ಶ್ರಮಿಸುತ್ತಿದ್ದೇವೆ.

ನಾವು ಕೇವಲ ಮಂಡ್ಯ ಹಾಗೂ ರಾಮನಗರಕ್ಕೆ ಮಾತ್ರ ಸೀತಿವಾಗಿಲ್ಲ. ಶಿವಮೊಗ್ಗ ಹಾಗೂ ಶಿಕಾರಿಪುರಕ್ಕೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇವೆ. ನೀರಾವರಿ ಕ್ಷೇತ್ರದಲ್ಲಿ ನಾನು ಹಾಗೂ ಶಿವಕುಮಾರ್ ಮಾಡಿರುವ ಕಾರ್ಯವನ್ನು ಶಿವಮೊಗ್ಗ ಜನರೇ ಹೊಗಳುತ್ತಿದ್ದಾರೆ. ಯಡಿಯೂರಪ್ಪನವರ ಕೈಯಲ್ಲಿ ಮಾಡಲು ಸಾಧ್ಯವಾಗದ್ದನ್ನು ಇವರು ಮಾಡಿದ್ದಾರೆ ಎಂದು ಅಲ್ಲಿನ ಜನರೇ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಶಿವಮೊಗ್ಗಕ್ಕೆ ಹೋದಾಗ ಅಲ್ಲಿನ ಬಂಗಾರಪ್ಪನವರ ಅಭಿಮಾನಿಯೊಬ್ಬರು ಸೊರಬ ತಾಲೂಕಿನ ಹಳ್ಳಿಗಳಿಗೆ ನೀರು ಪೂರೈಸುವ ನೀರಾವರಿ ಯೋಜನೆಯನ್ನು 1991ರಲ್ಲಿ ಬಂಗಾರಪ್ಪನವರು ಹಾಕಿದ್ದ ಯೋಜನೆಯನ್ನು ವಿವರಿಸಿದರು. ಅಲ್ಲಿಂದ ಇಲ್ಲಿವರೆಗೂ ಅದಕ್ಕೆ ಜೀವ ಬಂದಿರಲಿಲ್ಲ. ಅದು ನನ್ನ ಗಮನಕ್ಕೆ ಬಂದ ತಕ್ಷಣವೇ ನಾನು ಹಾಗೂ ಶಿವಕುಮಾರ್ ಈ ಯೋಜನೆಗೆ ಚಾಲನೆ ಹಣ ಬಿಡುಗಡೆ ಮಾಡಿದ್ದೇವೆ. ಬಂಗಾರಪ್ಪನವರು ಯೋಜನೆ ಮಾಡಲು ಮುಂದಾದಾಗ ಅದರ ವೇಚ್ಚ 30 ಕೋಟಿ ಇತ್ತು. ಈಗ ಅದು 195 ಕೋಟಿಯಷ್ಟಾಗಲಿದೆ.

ಇನ್ನು ಚುನಾವಣೆಗೂ ಮುನ್ನ ಸಾಲಮನ್ನಾ ಮಾಡುವುದಾಗಿ ನಿಮಗೆ ಮಾತು ಕೊಟ್ಟಿದ್ದೆ. ಅದನ್ನು ಈಗ ಹಂತಹಂತವಾಗಿ ಕಾರ್ಯಗತ ಮಾಡುತ್ತಿದ್ದೇನೆ. ಚುನಾವಣ ನೀತಿ ಸಂಹಿತೆ ಜರಿಯಾದ ಹಿನ್ನೆಲೆಯಲ್ಲಿ ಸಾಲಮನ್ನಾ ಮಾಡಲು ಹಣ ಬಿಡುಗಡೆ ಮಾಡದಂತೆ ಆಯೋಗ ಪತ್ರ ಬರೆದಿದೆ. ಆದರೆ ನಾಲ್ಕೂವರೆ ವರ್ಷಗಳಿಂದ ರೈತರ ಬಗ್ಗೆ ಚಿಂತಿಸದ ಮೋದಿ ಚುನಾವಣೆ ಸಮೀಪಿಸುತ್ತಿದ್ದಂತೆ ರೈತರ ಕುಟುಂಬಕ್ಕೆ ಆರು ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅದಕ್ಕಾಗಿ ಈಗ ಹಣ ಬಿಡಗಡೆ ಮಾಡಲು ಚುನಾವಣೆ ಆಯೋಗ ಅನುಮತಿ ನೀಡಿದೆ ಎಂಬ ವರದಿ ಬಂದಿದೆ. ಹೀಗಾಗಿ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಲು ಅನುಮತಿ ನೀಡುವುದಾದರೆ ನಮಗೂ ಅನುಮತಿ ನೀಡಬೇಕು ಎಂದು ಆಯೋಗಕ್ಕೆ ಮನವಿ ಮಾಡುತ್ತೇನೆ.

ಇಂದು ರೈತರು ನೆಮ್ಮದಿಯ ಜೀವನ ನಡೆಸುತ್ತಿಲ್ಲ. ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಿದೆ. ಇದಕ್ಕಾಗಿ ನಮ್ಮಲ್ಲಿ ಕೃಷಿ ದ್ಧತಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು. ಇನ್ನು ನಮ್ಮ ಸರ್ಕಾರ ವೃದ್ಧರಿಗೆ 1 ಸಾವಿರ ಮಾಸಾಶನ ನೀಡುತ್ತಿದ್ದು, ಇದನ್ನು ಮುಂದಿನ ವರ್ಷ 2 ಸಾವಿರಕ್ಕೆ ಏರಿಸಲು ನಿರ್ಧರಿಸಲಾಗಿದೆ. ಗರ್ಭಿಣಿ ತಾಯಂದರಿಗೆ 6 ರಿಂದ 9 ತಿಂಗಳವರೆಗೆ 2 ಸಾವಿರ ರು. ನಂತೆ 12 ಸಾವಿರ ಭತ್ಯೆ ನೀಡಲಾಗುತ್ತಿದೆ. ಇದನ್ನು 24 ಸಾವಿರಕ್ಕೆ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ.

ಮಾರ್ಚ್ 31ರಂದು ರಾಹುಲ್ ಗಾಂಧಿ ಹಾಗೂ ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆ ಜಕ್ಷನ್ ಸಮೀಪ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶ ಇಡೀ ದೇಶಕ್ಕೆ ಸಂದೇಶವನ್ನು ರವಾನಿಸುವಂತಾಗಬೇಕು. ದೇಶದಲ್ಲಿ ಮೈತ್ರಿ ಸರಕಾರದ ಅಗತ್ಯತೆ ಏನು ಎಂಬುದನ್ನು ಈ ಸಮಾವೇಶ ಸಾರಲಿದೆ.’

Leave a Reply