ಪಕ್ಷನಿಷ್ಠೆಯನ್ನು ತೇಜಸ್ವಿನಿ ಅನಂತಕುಮಾರ್ ನೋಡಿ ಕಲಿಯಬೇಕು!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯ ಸುರಕ್ಷಿತ ಕ್ಷೇತ್ರ ಎಂದೇ ಪರಿಗಣಿಸಲಾದ ಬೆಂಗಳೂರು ದಕ್ಷಿಣದಲ್ಲಿ ಕಳೆದ 24 ತಾಸುಗಳಲ್ಲಿ ನಡೆದ ಅಚ್ಚರಿ ಅಭ್ಯರ್ಥಿ ಆಯ್ಕೆಯಿಂದ ಕಾರ್ಯಕರ್ತರು, ಅಭಿಮಾನಿಗಳಿಂದ ಹೋರಾಟ, ವಿರೋಧದ ಧ್ವನಿಗಳು ಮೊಳಗುತ್ತಿವೆ. ತೋಕಸಭೆ ಚುನಾವಣೆಯಲ್ಲಿ ಅನಂತಕುಮಾರ್ ಅವರ ನಿಧನದಿಂದ ತೆರವಾದ ಜಾಗವನ್ನು ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ತುಂಬುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಯುವ ಕಾರ್ಯಕರ್ತ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿರುವುದು ಸಹಜವಾಗಿಯೇ ಸ್ಥಳೀಯ ಕಾರ್ಯಕರ್ತರು ಕುದಿಯುವಂತೆ ಮಾಡಿದೆ. ಆದರೆ, ತಮಗೆ ಟಿಕೆಟ್ ವಂಚನೆಯಿಂದ ನಿರಾಸೆಯಾಗಿದ್ದರೂ ಪಕ್ಷದ ನಿರ್ಧಾರವನ್ನು ಗೌರವಿಸುವ ಮೂಲಕ ತೇಜಸ್ವಿನಿ ಅನಂತಕುಮಾರ್ ಪಕ್ಷನಿಷ್ಠೆ ಅಂದರೆ ಏನು ಎಂಬುದನ್ನು ಇತರರಿಗೆ ಹೇಳಿಕೊಡುತ್ತಿದ್ದಾರೆ.

ಹೌದು, ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದು ಅದಮ್ಯ ಚೇತನದ ಮೂಲಕ ತಮ್ಮ ಸಾಮಾಜಿಕ ಕಾರ್ಯಗಳಲ್ಲಿದ್ದ ತೇಜಸ್ವಿನಿ ಅವರನ್ನು ಬಿಜೆಪಿ ನಾಯಕರೆ ದುಂಬಾಲು ಬಿದ್ದು ಚುನಾವಣೆಗೆ ಸ್ಪರ್ಧಿಸಲು ಒಪ್ಪಿಸಿದ್ದರು. ಅಲ್ಲದೆ ದೆಹಲಿಗೆ ಅಭ್ಯರ್ಥಿಗಳ ಪಟ್ಟಿಯಲ್ಲೂ ಅವರ ಹೆಸರನ್ನೇ ಕಳುಹಿಸಲಾಗಿತ್ತು. ಇತ್ತ ತಮಗೆ ಟಿಕೆಟ್ ಸಿಗುತ್ತೇ ಎಂದು ನಂಬಿದ್ದ ತೇಜಸ್ವಿನಿ ಅವರು ಕಚೇರಿಯನ್ನು ಆರಂಭಿಸಿದ್ದಲ್ಲದೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದರು. ಆದರೆ ದೆಯಲಿಯಲ್ಲಿ ನಡೆದ ಲಾಭಿಯಿಂದ ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿದೆ. ಈ ಅಚ್ಚರಿ ಘೋಷಣೆಯಾಗುತ್ತಿದ್ದಂತೆ ಅನಂತಕುಮಾರ್ ಅಭಿಮಾನಿಗಳು ಹಾಗೂ ಅದಮ್ಯ ಚೇತನ ಕಾರ್ಯಕರ್ತೆಯರು ಪ್ರತಿಭಟನೆ ಆರಂಭಿಸಿದರು. ಅಲ್ಲದೆ ತೇಜಸ್ವಿ ಸೂರ್ಯ ಗೋ ಬ್ಯಾಕ್ ಎಂಬ ಘೋಷೆಗಳನ್ನು ಕೂಗಿದರು. ತೇಜಸ್ವಿನಿ ಅವರ ಪಕ್ಷಿತರರಾಗಿ ನಿಲ್ಲಬೇಕು ಎಂದು ಬೆಂಬಲಿಗರು ಒತ್ತಡ ಹಾಕಿದರು.

ಈ ಎಲ್ಲ ಬೆಳವಣಿಗೆಗಳಿಂದ ಈಗಾಗಲೇ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಬಂಡಾಯದ ಉದಾಹರಣೆಗಳು ಹೆಚ್ಚಾಗುತ್ತಿರುವ ಹೊತ್ತಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟುತ್ತಾ ಎಂಬ ಪ್ರಶ್ನೆಯೂ ಮೂಡಿತು. ಆದರೆ ಮಂಗಳವಾರ ಪ್ರತಿಭಟನೆ ಮೂಲಕ ಆಕ್ರೇಶ ವ್ಯಕ್ತಪಡಿಸುತ್ತಿದ್ದ ಬೆಂಬಲಿಗರೊಂದಿಗೆ ಮಾತನಾಡಿದ ತೇಜಸ್ವಿನಿ ಅವರು, ‘ಸದ್ಯ ನಾವು ಮುಂಬರುವ ಲೋಕಸಭೆ ಚುನಾವಣೆ ವಿಚಾರವಾಗಿ ಗಮನಹರಿಸಬೇಕು. ಈ ಚುನಾವಣೆಯಲ್ಲಿ ಪಕ್ಷ ಗೆದ್ದು, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು. ಅದೇ ನಮ್ಮ ಪ್ರಮುಖ ಗುರಿ, ಇದಕ್ಕಾಗಿ ನಾವು ಇಂತಹ ಸಣ್ಣಪುಟ್ಟ ನಿರಾಸೆಗಳನ್ನು ಅನುಭವಿಸಬೇಕು’ ಎಂದು ಸಮಾಧಾನ ಮಾಡಿದ್ದು, ಪಕ್ಷದ ಮೇಲೆ ಅವರು ಇಟ್ಟಿರುವ ನಿಷ್ಠೆಗೆ ಸಾಕ್ಷಿಯಾಗಿದೆ.

ಬೆಂಬಲಿಗರನ್ನು ಸಮಾಧಾನಪಡಿಸಿ ಮಾಧ್ಯಮಗಳ ಜತೆ ಮಾತನಾಡಿದ ತೇಜಸ್ವಿನಿ ಅವರು ಎಲ್ಲೂ ತಮ್ಮ ನಿರಾಸೆಯನ್ನು ತೋರಿಸದೇ ಪಕ್ಷವೇ ಮುಖ್ಯ ಎಂಬ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಈ ವೇಳೆ ಮಾಧ್ಯಮದವರು ಎಷ್ಟೇ ಪ್ರಶ್ನೆಗಳ ಒತ್ತಡ ಹಾಕಿದರೂ ಎಲ್ಲಿಯೂ ಅವರು ತಮ್ಮ ಪಕ್ಷದ ವಿರುದ್ಧ ಒಂದೇ ಒಂದು ಮಾತನ್ನು ಆಡದೇ, ಪಕ್ಷವನ್ನು ವಹಿಸಿಕೊಡು ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ನಿನ್ನೆ ರಾತ್ರಿಯಿಂದಲೂ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡುತ್ತಿದ್ದೇನೆ. ಈ ಸಂದರ್ಭದಲ್ಲಿ ನಾನು ಕಾರ್ಯಕರ್ತರಿಗೆ ಹೇಳಲು ಬಯಸುವುದೇನೆಂದರೆ, ಸದ್ಯ ನಮ್ಮ ಮುಖ್ಯ ಗುರಿ ತೋಕಸಭೆ ನಾವಣೆ ಮೇಲಿರಬೇಕು. ಚುನಾವಣೆಯಲ್ಲಿ ಪಕ್ಷ ಗೆದ್ದು, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು. ಅನಂತಕುಮಾರ್ ಅವರು ದೇಶ ಮೊದಲು, ಪಕ್ಷ ನಂತರ, ಆಮೇಲೆ ವೈಯಕ್ತಿಕ ವಿಚಾರ ಎಂಬ ತತ್ವವನ್ನು ನೂಬಿದ್ದವು. ನಾವು ಕೂಡ ಅವರ ತತ್ವವನ್ನು ಪಾಲಿಸೋಣ.

ಪ್ರಸ್ತುತ ಸಂದರ್ಭದಲ್ಲಿ ಟಿಕೆಟ್ ಕೈತಪ್ಪಲು ಕಾರಣದ ಕುರಿತು ಅನೇಕ ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದು ಬೇಡ. ರಾಜಕೀಯದಲ್ಲಿ ನಾವು ನಿರೀಕ್ಷಿಸಿದ್ದು ನಡೆಯದಿದ್ದಾಗ ನಿರಾಸೆ ಆಗುವುದು ಸಹಜ. ದೊಡ್ಡ ಉದ್ದೇಶ ಈಡೇರಿಸಲು ಇಂತಹ ಸಣ್ಣ ನಿರಾಸೆಗಳನ್ನು ನಾವು ಎದುರಿಸಬೇಕು. ದೇಶದಲ್ಲಿ ಬಿಜೆಪಿ ಗೆದ್ದು, ಮೋದಿ ಅವರು ಪ್ರಧಾನಿಯಾಗಲು ಕೆಲಸ ಮಾಡುತ್ತೇನೆ, ಪ್ರಚಾರ ಮಾಡುತ್ತೇನೆ.

ನಾನು ಮದುವೆಯಾಗಿ 30 ವರ್ಷಗಳಾಗಿದ್ದು, ಆಗಿನಿಂದಲೂ ಪಕ್ಷದ ಪರವಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ. ನನಗೆ ಯಾಕೆ ಟಿಕೆಟ್ ತಪ್ಪಿದೆ ಎಂಬುದನ್ನು  ನೀವು ಹೈಕಮಾಂಡ್ ನಾಯಕರನ್ನು ಕೇಳಬೇಕು. ಅನಂತಕುಮಾರ್ ಅವರು ಹೇಳುತ್ತಿದ್ದ ಹಾಗೆ ನಿಮ್ಮ ಪ್ರಶ್ನೆ ಸರಿ ಇರಬಹುದು ಆದರೆ ಆ ಪ್ರಶ್ನೆಯ ವಿಳಾಸ ಸರಿಯಾಗಿಲ್ಲ. ನಾನು ಪಕ್ಷದ ಚೌಕಟ್ಟಿನಲ್ಲಿದ್ದು, ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಿಲ್ಲ.’

Leave a Reply