ಮಂಡ್ಯದಲ್ಲಿ ದಳಪತಿಗಳ ಮಾಸ್ಟರ್ ಪ್ಲಾನ್..!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ದಳಪತಿಗಳಿಗೆ ಸವಾಲಾಗಿರೋದು ಸುಳ್ಳಲ್ಲ. ಹಠಕ್ಕೆ ಬಿದ್ದು ರಾಜಕೀಯ ಮಾಡಲು ಮುಂದಾಗಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ನಾಯಕರು ಮಂಡ್ಯದಲ್ಲಿ ಆರ್ಭಟದ ಪ್ರಚಾರ ನಡೆಸುತ್ತಿದ್ದಾರೆ. ಒಂದೊಂದೇ ಅಸ್ತ್ರಗಳನ್ನು ಸುಮಲತಾ ವಿರುದ್ಧ ಬಳಸುತ್ತಿರುವ ಜೆಡಿಎಸ್ ನಾಯಕರು, ಸುಮಲತಾ ಕಂಗಾಲಾಗುವಂತೆ ಮಾಡುತ್ತಿದ್ದಾರೆ. ಅಂಬರೀಶ್ ಹೆಸರು ಬಳಸದೆ ಚುನಾವಣಾ ಪ್ರಚಾರ ಮಾಡಿ ಎಂದು ಆಗ್ರಹಿಸಿದ್ರು. ಇದೀಗ ಸರಣಿ ಸಂಕಷ್ಟ ತಂದೊಡ್ಡುತ್ತಿರುವ ಮೈತ್ರಿ ನಾಯಕರು, ಸೋಲಿಸಲು ಸ್ಕೆಚ್ ಹಾಕಿದ್ದಾರೆ.

ಹೌದು, ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ ಈಗಾಗಲೇ ಮುಕ್ತಾಯವಾಗಿದ್ದು, ಸುಮಲತಾ ಅಂಬರೀಶ್ ಹೊರತುಪಡಿಸಿ, ಇನ್ನೂ ಮೂವರು ಸುಮಲತಾ ಎಂಬ ಹೆಸರಿನ ಮಹಿಳೆಯರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿರೋದು ಮಾತ್ರವಲ್ಲದೆ, ಸುಮಲತಾ ಅಂಬರೀಶ್ ಕೇಳಿರುವ ಮೂರು ಗುರುತುಗಳನ್ನೇ ನೀಡುವಂತೆ ಇವರೂ ಕೂಡ ಚುನಾವಣಾ ಅಧಿಕಾರಿಗೆ ಕೇಳಿಕೊಂಡಿದ್ದಾರೆ. ಸುಮಲತಾ ಹೆಸರು ಜನರಿಗೆ ಕನ್ಫ್ಯೂಸ್ ಆದ್ರೆ ಬರುವ ಅಭಿಮಾನದ ಮತಗಳು ಹಳ್ಳಕ್ಕೆ ಬೀಳೋದು ಗ್ಯಾರಂಟಿ.

ಇನ್ನು ಇಷ್ಟು ದಿನ ಸುಮಲತಾ ಅವರಿಗೆ ಬ್ಯಾಕ್ಬೋನ್ ರೀತಿ ಕೆಲಸ ಮಾಡ್ತಿದ್ದ ಮಾಜಿ ಸಚಿವ ಚಲುವರಾಯಸ್ವಾಮಿ, ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸುವ ಸಾಧ್ಯತೆಯಿದೆ. ಇವತ್ತು ಸಚಿವ ಸಾ.ರಾ ಮಹೇಶ್ ಹಾಗೂ ಮತ್ತೋರ್ವ ಮಾಜಿ ಸಚಿವ ಹೆಚ್.ಸಿ ಬಾಲಕೃಷ್ಣ ಸೇರಿದಂತೆ ಹಲವು ನಾಯಕರು ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಚಲುವರಾಯಸ್ವಾಮಿ ಕೂಡ ನಿಖಿಲ್ ಬೆಂಬಲಿಸಿ ಎನ್ನುವ ಹೇಳಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಉಳಿದ ನಾಯಕರ ಜೊತೆ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ.

ಇನ್ನು ಇಂದು ರಾತ್ರಿ ಮಂಡ್ಯದಲ್ಲೇ ವಾಸ್ತವ್ಯ ಹೂಡಿರುವ ಸಿಎಂ ಕುಮಾರಸ್ವಾಮಿ, ಜಿಲ್ಲೆಯ ಹಿರಿಯ ನಾಯಕ ಜಿ. ಮಾದೇಗೌಡ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದು, ನಿಖಿಲ್ ಕುಮಾರಸ್ವಾಮಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಜಿ ಮಾದೇಗೌಡರ ಜೊತೆಗಿನ ಭೇಟಿ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸುಮಲತಾ ನೀಡಿದ್ದ ಹೇಳಿಕೆಗೆ ಗರಂ ಆಗಿದ್ದಾರೆ. ನಿನ್ನೆ ಅವರ ಭಾಷಣ ನೋಡಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಟಕೀಯವಾಗಿ ಸಿನಿಮಾ ಶೈಲಿಯಲ್ಲಿ ಡೈಲಾಗ್ ಹೊಡೀತಾರೆ. ಏನ್ ಕೊಡ್ತಾರೆ ನಿಮಗೆ..? ಏನ್ ಕೊಡ್ತಾರೆ ನಿಮಗೆ ಎಂದು ಆಕ್ಷನ್ ಮಾಡ್ತಾರೆ. ಹಣ ತಗೊಂಡು ನನಗೆ ವೋಟ್ ಹಾಕಿ ಅಂತಾರೆ. ಅದು ತಾಯಿ ಹೃದಯಾನಾ? ಎಂದು ಪ್ರಶ್ನಿಸಿದ ಸಿಎಂ 200ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಾಗ ಇಲ್ಲಿನ ಜನರಿಗೆ ನಾನು ವೈಯಕ್ತಿಕವಾಗಿ ಸಹಾಯ ಮಾಡಿದ್ದೆ. ಅವರು ಮಜಾ ಮಾಡೋಕೆ ಹಣ ಕೊಟ್ಟಿರಲಿಲ್ಲ. ಅವರ ಕುಟುಂಬದ ಸಂಕಷ್ಟ ನೋಡಿ ಸಹಾಯ ಮಾಡಿದ್ದೆ ಅಷ್ಟೆ. ಇವರು ಇನ್ನೊಬ್ಬರಿಂದ ಹಣ ಪಡೆದು ಮಜಾ ಮಾಡುವ ಜನ. ಮಂಡ್ಯದ ಜನರಿಗೆ ಅಂತಹ ಬುದ್ಧಿಯಿಲ್ಲ ಎಂದು ಕಿಡಿಕಾರಿದ್ದಾರೆ. ಇನ್ನೂ ಸುಮಲತಾ ಅವರಲ್ಲಿ ಯಾವುದೇ ನೋವಿನ ಛಾಯೆಯೂ ಕಾಣುತ್ತಿಲ್ಲ ಎಂದು ಕುಟುಕಿದ್ದಾರೆ.

ಈಗಾಗಲೇ ಮಂಡ್ಯ ಚುನಾವಣಾ ಅಧಿಕಾರಿ ಆಗಿರುವ ಮಂಜುಶ್ರೀ ಅವರು, ನಾಮಪತ್ರಗಳ ಪರಿಶೀಲನೆ ನಡೆಸಿದ್ದು, ಒಟ್ಟು 37 ನಾಮಪತ್ರ ಸಲ್ಲಿಕೆ ಮಾಡಿದ್ದು ಇದರಲ್ಲಿ 26 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, ಐರಾ ನ್ಯಾಷನಲ್ ಪಾರ್ಟಿಯಿಂದ ಸಲ್ಲಿಕೆಯಾಗಿದ್ದ ಡಿ.ಸಿ ವಿಜಯಶಂಕರ್ ಅವರ ಒಂದು ನಾಮಪತ್ರ ತಿಸ್ಕೃತವಾಗಿದೆ ಎಂದು ತಿಳಿಸಿದ್ದಾರೆ. ಮಾರ್ಚ 29ರ ತನಕ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು, ಆ ಬಳಿಕ ಚುನಾವಣಾ ಅಖಾಡ ರಂಗೇರಲಿದೆ. ಚಲುವರಾಯಸ್ವಾಮಿ ಸೇರಿದಂತೆ ಬಂಡಾಯ ನಾಯಕರು ನಿಖಿಲ್ ಗೆ ಜೈ ಎಂದು ಬಿಟ್ಟರೆ ಸುಮಲತಾ ಸ್ಪರ್ಧೆ ನಾಮಕಾವಸ್ತೆಗೆ ಮಾತ್ರ ಸೀಮಿತವಾಗಲಿದೆ.

Leave a Reply