‘ಮಿಷನ್ ಶಕ್ತಿ’ ಯಶಸ್ವಿ! ಬಾಹ್ಯಾಕಾಶದಲ್ಲಿ ಭಾರತ ಸೂಪರ್ ಪವರ್!

ಡಿಜಿಟಲ್ ಕನ್ನಡ ಟೀಮ್:

ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿ ದೇಶವಾಗಲು ಹೊರಟಿರುವ ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ. ಬುಧವಾರ ಭಾರತ ನಡೆಸಿದ ಯಶಸ್ವಿ ಪರೀಕ್ಷೆಯಲ್ಲಿ ಬಾಹ್ಯಾಕಾಶದಲ್ಲಿದ್ದ ಜೀವಂತ ಉಪಗ್ರಹವನ್ನು ಭಾರತ ಹೊಡೆದು ಹಾಕಿದೆ. ಇದರೊಂದಿಗೆ ಈ ಸಾಮರ್ಥ್ಯ ಹೊಂದಿದ ವಿಶ್ವದ ನಾಲ್ಕನೇ ದೇಶವಾಗಿ ಹೊರಹೊಮ್ಮಿದೆ.

ಬುಧವಾರ ಭದ್ರತಾ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ದೇಶವನ್ನು ಉದ್ದೇಶಿಸಿ ಐದು ನಿಮಿಷಗಳ ಕಾಲ ಮಾತನಾಡಿದರು. ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ದೇಶದ ಗಮನ ಸೆಳೆಯಿತು. ಪರಿಣಾಮವಾಗಿ ವಿವಿಧ ರಾಜಕೀಯ ಪಕ್ಷಗಳ ಪತ್ರಿಕಾಗೋಷ್ಠಿಗಳು ಮುಂದೂಡಲ್ಪಟ್ಟವು.

ಸಭೆ ನಂತರ ದೇಹವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದಿಷ್ಟು…

ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ. ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ 3,000 ಕಿ.ಮೀ ದೂರ (ಎಲ್‌ಇಓ) (ಲೋ ಅರ್ಥ್ ಆರ್ಬಿಟ್)ದಲ್ಲಿರುವ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ್ದಾರೆ. ‘ಮಿಷನ್ ಶಕ್ತಿ’ ಹೆಸರಿನ ಈ ಯೋಜನೆಯಲ್ಲಿ ಭಾರತದ ವಿಜ್ಞಾನಿಗಳು ಕೇವಲ 3 ನಿಮಿಷಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ. ಇದು ಅತ್ಯಂತ ಕಠಿಣ ಕಾರ್ಯಾಚರಣೆಯಾಗಿತ್ತು. ಅತ್ಯಂತ ಹೆಚ್ಚು ವೆಚ್ಚ ಬಯಸುವ ಈ ಕಾರ್ಯಾಚರಣೆಯನ್ನು ಅತಿ ಕಡಿಮೆ ವೆಚ್ದದಲ್ಲಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಉಪಗ್ರಹ ನಿಗ್ರಹ (Anti satellite )- (ಎ ಸ್ಯಾಟ್‌) ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿದ್ದು ಭಾರತದ ಭದ್ರತೆ ವಿಷಯದಲ್ಲಿ ಇದೊಂದು ಮಹತ್ವದ ಸಾಧನೆಯಾಗಿದೆ.

ಶತ್ರುದೇಶದ ಉಪಗ್ರಹಗಳನ್ನು ನಾಶಪಡಿಸುವ ಮಹತ್ವದ ಶಕ್ತಿ ಭಾರತಕ್ಕೀಗ ಪ್ರಾಪ್ತವಾಗಿದೆ. ಇದುವರೆಗೂ ಅಮೆರಿಕ, ರಷ್ಯಾ ಹಾಗೂ ಚೀನಾ ಮಾತ್ರ ಈ ಸಾಧನೆ ಮಾಡಿದ್ದವು. ಈಗ ಭಾರತ ಈ ಶಕ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಾಧನೆಗೆ ಶ್ರಮಿಸಿದ ಡಿಆರ್‌ಡಿಓ ವಿಜ್ಞಾನಿಗಳಿಗೆ ಅಭಿನಂದನೆಗಳು.

ಈ ಸಾಧನೆ ಬೇರೆ ಯಾವುದೇ ದೇಶದ ವಿರುದ್ಧವಲ್ಲ, ಬದಲಿಗೆ ನಮ್ಮ ರಕ್ಷಣೆಗಾಗಿ ಅಷ್ಟೆ ಎಂದು ಹೇಳಲು ಬಯಸುತ್ತೇನೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂದು ನಡೆಸಿದ ಈ ಪರೀಕ್ಷೆಯಿಂದ ಯಾವುದೇ ರೀತಿಯಲ್ಲಿ ಅಂತಾರಾಷ್ಟ್ರೀಯ ಕಾನೂನು ಅಥವಾ ಒಪ್ಪಂದಗಳ ಉಲ್ಲಂಘನೆಯಾಗಿಲ್ಲ. ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ.’

Leave a Reply