ಸಾಕಷ್ಟು ವಿಷಯ ಹೇಳಬೇಕು, ಸಮಯ ಬಂದಾಗ ಎಲ್ಲವನ್ನೂ ಹೇಳ್ತೇನೆ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

‘ಐಟಿ ಇಲಾಖೆ ದಾಳಿಗಳ ಕುರಿತು ನಾನು ಜನತೆ ಮುಂದೆ ಸಾಕಷ್ಟು ಸತ್ಯಾಂಶ ಹೇಳಬೇಕಿದೆ. ಸರಿಯಾದ ಸಮಯದಲ್ಲಿ ಎಲ್ಲವನ್ನು ನಿಮ್ಮ ಮುಂದೆ ಇಡುತ್ತೇನೆ’ ಇದು ತೆರಿಗೆ ಇಲಾಖೆ ದಾಳಿಯ ಕುರಿತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ ಮಾತು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಚಿವರು, ಶಾಸಕರು ಹಾಗೂ ಅವರ ಬೆಂಬಲಿಗರನ್ನು ಗುರಿಯಾಗಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕ ದಾಳಿಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿ ಮುಂದೆ ಮೈತ್ರಿ ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

‘ನಾನು ಬಹಳ ವಿಚಾರ ಹಂಚಿಕೊಳ್ಳಬೇಕಿದೆ. ಸದ್ಯ ನಾನು ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದರಿಂದ ನ್ಯಾಯಾಂಗಕ್ಕೆ ನಾನು ಗೌರವ ನೀಡುತ್ತೇನೆ.

ಇಂದು ನಡೆದಿರುವ ಐಟಿ ದಾಳಿ ರಾಜ್ಯದಲ್ಲಿ ನಡೆದ ಎರಡನೇ ರಾಜಕೀಯ ಉದ್ದೇಶಪೂರ್ವಕ ದಾಳಿ. ಮೊದಲು ನನ್ನ, ನನ್ನ ಸ್ನೇಹಿತರು ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿತ್ತು. ಈಗ ಎರಡನೇ ಬಾರಿ ಇಂತಹ ದಾಳಿ ನಡೆದಿದೆ.

ಇತ್ತೀಚೆಗೆ ಕೇಂದ್ರ ಸಚಿವರು ಮಾಧ್ಯಮಗಳ ಮುಂದೆ ಮಾತನಾಡಿದ್ದನ್ನು ನೋಡಿದೆ. ನಾನು ಹೇಳಬೇಕಿರುವ ವಿಚಾರ ತುಂಬಾ ಇವೆ. ಅವುಗಳನ್ನು ಹೇಳುವ ಸಮಯ ಶೀಘ್ರದಲ್ಲೇ ಬರುತ್ತದೆ. ಆಗ ನಿಮ್ಮ ಮುಂದೆ ಸಾಕಷ್ಟು ಸತ್ಯಾಂಶಗಳನ್ನು ನಿಮ್ಮ ಮುಂದೆ ಇಡುತ್ತೇನೆ.

ಕೇಂದ್ರದಲ್ಲಿ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಹೋಗುತ್ತವೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಆದರೆ ಸಾಂವಿಧಾನಿಕ ಸಂಸ್ಥೆಗಳು ಶಾಶ್ವತವಾಗಿ ಇರುತ್ತವೆ. ಅವುಗಳ ಕಾರ್ಯವೈಖರಿ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಆದರೆ ಈ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ.’

 

Leave a Reply