ಚುನಾವಣೆ ಸಮಯದಲ್ಲಿ ಐಟಿ ರಾಜಕಾರಣ!?

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ರಣಾಂಗಣದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಕರ್ನಾಟಕದಲ್ಲಿ ಮೊದಲನೇ ಹಂತದ ಚುನಾವಣೆಯ ನಾಮಪತ್ರ ವಾಪಸ್ ತೆಗೆದುಕೊಳ್ಳುವ ಸಮಯ ಬಂದಿದೆ. ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಯಾರು ಅನ್ನೋದು ಖಚಿತ ಆಗ್ತಿದ್ದ ಹಾಗೆ ಅಖಾಡ ಮತ್ತಷ್ಟೂ ರಂಗೇರಲಿದೆ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಐಟಿ ಅಸ್ತ್ರ ಪ್ರಯೋಗವಾಗಿದೆ.

ನಿನ್ನೆ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಐಟಿ ದಾಳಿ ನಡೆಸಲಿದೆ ಎಂಬ ಭವಿಷ್ಯ ನುಡಿದ ಬೆನ್ನಲ್ಲೇ ಇಂದು ಏಕ ಕಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 15 ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿದ್ದು, ಉದ್ಯಮಿಗಳ ಮನೆ, ಕಚೇರಿಗಳಲ್ಲಿ ಐಟಿ ಅಧಿಕಾರಿಗಳ ತಪಾಸಣೆ ನಡೆಸುತ್ತಿದ್ದಾರೆ. ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯಲ್ಲಿರುವ ಉದ್ಯಮಿ ಸಿದ್ದಿಕ್ ಶೇಠ್ ಮನೆ ಮೇಲೆ ದಾಳಿ ನಡೆದಿದೆ. ಐಟಿ ಅಧಿಕಾರಿಗಳು ಒಟ್ಟು ನಾಲ್ಕು ವಾಹನಗಳಲ್ಲಿ ಬಂದಿದ್ದು, ಸಿದ್ದಿಕ್ ಶೇಠ್ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಜೋಳ ಹಾಗೂ ಪಾಪ್ ಕಾರ್ನ್ ವ್ಯಾಪಾರ ಮಾಡುವ ಉದ್ಯಮಿ ಸಿದ್ದೀಕ್ ಶೇಠ್ ಸೇರಿದಂತೆ 10 ಕ್ಕೂ ಹೆಚ್ಚು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಜೋಳ ಖರೀದಿ ಮತ್ತು ಮಾರಾಟ ಮಾಡುವ ಉದ್ಯಮಿ ಆಗಿದ್ದಾರೆ. ನಗರದ ಹೆಚ್ ಎಸ್ ಆರ್ ಲೇಔಟ್, ಜಯನಗರ, ಬಸವನಗುಡಿ, ಸೌತ್ ಎಂಡ್ ಸರ್ಕಲ್ ಸೇರಿದಂತೆ ಹಲವು ಕಡೆ ಉದ್ಯಮಿಗಳ ಮನೆ ಮೇಲೆ ದಾಳಿ ನಡೆದಿದೆ. ಈ ಉದ್ಯಮಿಗಳು ಕೋಟ್ಯಾಂತರ ರೂಪಾಯಿ ತೆರಿಗೆ ವಂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಮಂಡ್ಯ ಹಾಗೂ ಮೈಸೂರುಗಳಲ್ಲಿ ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಅವರ ಹಾಗೂ ಸಂಬಂಧಿಕರ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನದಲ್ಲಿ ರೇವಣ್ಣ ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆದಿದೆ. ಇನ್ನು ಶಿವಮೊಗ್ಗದಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ವರದಿಗಳು ಬಂದಿವೆ.

ಉದ್ಯಮಿ ಸಿದ್ಧಿಕ್ ಶೇಠ್ ಮನೆ ಮೇಲೆ ದಾಳಿ ನಡೆದಿರುವುದನ್ನು ಸಿಎಂ ಕುಮಾರಸ್ವಾಮಿ ಖಂಡಿಸಿದ್ದಾರೆ. ದಾಳಿಯ ವಿಚಾರ ತಿಳಿಯುತ್ತಿದ್ದ ಹಾಗೆ ನೇರವಾಗಿ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿರುವ ಸಿಎಂ ಕುಮಾರಸ್ವಾಮಿ, ‘ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೇ, ಇಂಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಅನ್ನು ಬಳಸಿಕೊಂಡು ಕರ್ನಾಟಕದಲ್ಲಿ‌ ಜೆಡಿಎಸ್, ಕಾಂಗ್ರೆಸ್‌ ನಾಯಕರನ್ನು ಬೆದರಿಸಲು ಮುಂದಾಗಿದ್ದೀರಿ. ಇದು ರಾಜಕೀಯ ದುರುದ್ದೇಶದ ದಾಳಿಯಾಗಿದ್ದು, ಇದಕ್ಕೆ ನಾವು ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರಾಜ್ಯದಲ್ಲಿ ಮತ್ತಷ್ಟು ಅಧಿಕಾರಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಸ್ವತಃ ಸಿಎಂ ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ.

Leave a Reply