ನಾಮಪತ್ರ ಹಿಂಪಡೆಯಲು ಮುದ್ದಹನುಮೆಗೌಡ ಒಪ್ಪಿಗೆ! ಬಗೆಹರಿತು ದೇವೇಗೌಡರಿಗೆ ಎದುರಾಗಿದ್ದ ವಿಘ್ನ!

ಡಿಜಿಟಲ್ ಕನ್ನಡ ಟೀಮ್:

ತುಮಕೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಒತ್ತಡಕ್ಕೆ ಮಣಿದು ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದರೊಂದಿಗೆ ದೇವೇಗೌಡರಿಗೆ ಎದುರಾಗಿದ್ದ ವಿಘ್ನ ಬಗೆಹರಿದಂತಾಗಿದ್ದು, ದೋಸ್ತಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ ಸಂಜಯನಗರದಲ್ಲಿರುವ ಮುದ್ದಹನುಮೇಗೌಡ ಅವರ ನಿವಾಸಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಡಿಸಿಎಂ ಪರಮೇಶ್ವರ್ ಚರ್ಚಿಸಿ ಮನವೊಲಿಸಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗದಂತ ಯಾವ ನಿರ್ಧಾರವನ್ನು ಕೈಗೊಳ್ಳದಂತೆ ಮುದ್ದಹನುಮೇಗೌಡರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುದ್ದ ಹನುಮೇಗೌಡರು ನಾಮಪತ್ರ ಹಿಂಪಡೆಯಲು ನಿರ್ಧರಿಸಿದ್ದಾರೆ.

ಹಾಲಿ ಸಂಸದರಾಗಿದ್ದರೂ ತಮಗೆ ಟಿಕೆಟ್ ನೀಡದ ಕಾರಣಕ್ಕೆ ಬೇಸರಗೊಂಡಿರುವ ಮುದ್ದಹನುಮೇಗೌಡ ಈ ಸಂಬಂಧ ತಮ್ಮ ಆಪ್ತ ರಾಯಸಂದ್ರ ರವಿಕುಮಾರ್ ಅವರಿಗೆ ಸೂಚನೆ ನೀಡಿದ್ದು, ಡಿಸಿ ಕಚೇರಿಗೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಹೇಳಿದ್ದಾರೆ ಎಂದು ವರದಿಗಳು ಬಂದಿದೆ. ಕಳೆದ ಒಂದು ವಾರದಿಂದ ದೇವೇಗೌಡರ ಸ್ಫರ್ಧೆಗೆ ಪ್ರತಿಯಾಗಿ ಬಂಡಾಯ ಎದ್ದಿದ್ದ ಮುದ್ದಹನುಮೇಗೌಡರನ್ನು ಸಮಾಧಾನ ಪಡಿಸುವಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ.

ತಮ್ಮ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುವುದಾಗಿ ಕಳೆದ ವಾರ ಅಧಿಕೃತ ಘೋಷಣೆ ಮಾಡಿದರು. ಗೌಡರ ಘೋಷಣೆ ಬೆನ್ನಲ್ಲೇ ಬಂಡಾಯ ಧ್ವನಿ ಎತ್ತಿದ ಮುದ್ದಹನುಮೇಗೌಡ ನಾಮಪತ್ರ ಸಲ್ಲಿಸಿದರು. ಇದರಿಂದ ತುಮಕೂರಿನಲ್ಲಿ ಒಕ್ಕಲಿಗರ ಮಠಗಳು ಇಬ್ಭಾಗವಾಗಿ ಇದರ ಲಾಭ ಬಿಜೆಪಿ ಪಾಲಾಗುವ ಆತಂಕ ಎದುರಾಗಿತ್ತು. ಆದರೆ ಈಗ ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ನಿರ್ಧರಿಸಿರೋದು ಗೌಡರ ಗೆಲುವಿನ ಹಾದಿ ಸುಗಮವಾಗಲಿದೆ.

Leave a Reply