ಶಾಮನೂರಿಗೆ‌ ಸುಸ್ತಾಯ್ತಾ ಚುನಾವಣಾ ರಾಜಕೀಯ..?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್‌ನಲ್ಲಿ ಪ್ರಮುಖ ವೀರಶೈವ ಲಿಂಗಾಯತ ನಾಯಕ ಎಂದರೆ ಶಾಮನೂರು ಶಿವಶಂಕರಪ್ಪ. ದಾವಣಗೆರೆಯಲ್ಲಿ ಎಲ್ಲಿ ನಿಂತು ನೋಡಿದರೂ‌ ಕಣ್ಣಿಗೆ ಕಾಣೋದು‌ ಶಾಮನೂರು‌ ಸಾಮ್ರಾಜ್ಯ ಮಾತ್ರ. ಅಪ್ಪ ಮಕ್ಕಳು ಅಷ್ಟೇ ಅಲ್ಲದೆ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್, ಶಾಮನೂರು ಶಿವಶಂಕರಪ್ಪ ಜಿಲ್ಲೆಯಲ್ಲಿ ಎದುರಾಳಿಗಳು. ಈ ಬಾರಿ‌ ಶಾಮನೂರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಶಾಮನೂರಿಗೆ ಚುನಾವಣಾ ರಾಜಕೀಯ ಸಾಕಾಯ್ತೋ ಅಥವಾ ಸೋಲಿನ ಭೀತಿಯೋ ಎಂದು ಗುಸುಗುಸು ಎನ್ನುತ್ತಿದೆ ದಾವಣಗೆರೆ ಬೆಣ್ಣೆದೋಸೆ ಹೋಟೆಲ್‌ಗಳು.

ಲೋಕಸಭಾ ಚುನಾವಣೆ ಟಿಕೆಟ್ ಘೋಷಣೆ ಆಗ್ತಿದ್ದ ಹಾಗೆ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ್, ಈ ಬಾರಿ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ತೇನೆ ಎಂದು ಆರ್ಭಟಿಸಿದ್ರು. ಇದಕ್ಕೆ ಕೌಂಟರ್ ಎಂಬಂತೆ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ, ಅವನೇನು ಒಂದು ಲಕ್ಷ ಲೀಡ್‌ನಲ್ಲಿ ಗೆಲ್ತೇನೆ ಎಂದು ಹೇಳುವುದು..! ನಾನು ಅವನ ಠೇವಣಿ ಕಳೆಯುತ್ತೇನೆ ಎಂದು ಮಾತಲ್ಲೇ ಮಂಡಕ್ಕಿ ತಿನ್ನಿಸುವ ಕೆಲಸ ಮಾಡಿದ್ರು. ಇದೀಗ ಚುನಾವಣಾ ಕಣದಿಂದಲೇ ಪಲಾಯನ ಮಾಡ್ತಾರೆ ಅನ್ನೋ ಮಾತುಗಳೂ ಕೇಳಿ ಬಂದಿವೆ. ಇದಕ್ಕೆ‌ ಕಾರಣ ಕೂಡ ಇದೆ.

ಕಾಂಗ್ರೆಸ್ ಪಕ್ಷ ದಾವಣಗೆರೆ ಲೋಕಸಭಾ‌ ಕ್ಷೇತ್ರದ ಟಿಕೆಟ್‌ ಅನ್ನು ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಿ ಘೋಷಣೆ ಮಾಡಿತ್ತು. ಆದ್ರೆ ಟಿಕೆಟ್ ಖಚಿತವಾದ ಬಳಿಕ ವ್ಯಂಗ್ಯವಾಗಿ ಮಾತನಾಡಿದ್ದ ಶಾಮನೂರು, ಕಳೆದ ವಿಧಾಸಭಾ ಅವಧಿಯಲ್ಲಿ‌ ಮಂತ್ರಿ ಆಗಿದ್ದ ನನ್ನನ್ನು ವಯಸ್ಸಿನ ಕಾರಣಕೊಟ್ಟು ಹೊರಗೆ ಹಾಕಲಾಯ್ತು. ಆದ್ರೆ‌ ಕಾಂಗ್ರೆಸ್ ನಾಯಕರಿಗೆ ಈಗ ವಯಸ್ಸಾಗಿದೆ ಎಂದು ಅನ್ನಿಸುತ್ತಿಲ್ಲವೇ ಎಂದು ಚಾಟಿ ಬೀಸಿದ್ರು. ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಚರ್ಚಿಸಿ ನಿರ್ಧಾರ ಮಾಡ್ತೇನೆ, ನನ್ನ ಮಗನಿಗೆ ನಾನು ಟಿಕೆಟ್ ಕೇಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ರು. ಇದೀಗ ದಾವಣಗೆರೆ ಲೋಕಸಭಾ ಚುನಾವಣೆ ಟಿಕೆಟ್ ಅನ್ನು ಶಾಮನೂರು ನಿರಾಕರಿಸಿದ್ದು, ಜೆ.ಎಚ್.ಪಟೇಲ್ ಸಂಬಂಧಿ ತೇಜಸ್ವಿ ಪಟೇಲ್ ಅವರನ್ನು ಅಭ್ಯರ್ಥಿ ಮಾಡಲು ಕೈ ನಿರ್ಧರಿಸಿದೆ ಎನ್ನಲಾಗಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಯ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ನೇತೃದಲ್ಲಿ ಸಭೆಯಲ್ಲಿ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಬಿ.ಶಾಂತನಗೌಡರ, ಎಚ್.ಪಿ.ರಾಜೇಶ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸೇರಿದಂತೆ ಬಹುತೇಕ ನಾಯಕರು ಹಾಜರಾಗಿದ್ರು. ಈ ವೇಳೆ ಟಿಕೆಟ್‌ಗಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಾಗೂ ಮಾಜಿ ಸಿಎಂ ದಿವಂಗತ ಜೆ.ಎಚ್.ಪಟೇಲ್ ಸಂಬಂಧಿ ತೇಜಸ್ವಿ ಪಟೇಲ್ ಹೆಸರನ್ನು ಜಿಲ್ಲೆಯ ನಾಯಕರು ಪ್ರಸ್ತಾಪಿಸಿದರು. ಆದ್ರೆ ಕೆಪಿಸಿಸಿ ಸಭೆಯಿಂದ ಶಾಸಕ ಶಾಮನೂರ ಶಿವಶಂಕರಪ್ಪ ಮತ್ತು ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದೂರ ಉಳಿದ.

ಸಭೆ ಬಳಿಕ ತೇಜಸ್ವಿ ಪಟೇಲ್‌ಗೆ ಕೆಪಿಸಿಸಿ ಆದ್ಯಕ್ಷ ದಿನೇಶ ಗುಂಡೂರಾವ್ ಕರೆ ಮಾಡಿದ್ದಾರೆ‌ ಎನ್ನಲಾಗಿದ್ದು, ಈಗಾಗಲೇ ತೇಜಸ್ವಿ ಪಟೇಲ್ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದಾರೆ. ತೇಜಸ್ವಿ ಪಟೇಲ್, ಮಾಜಿ ಸಿಎಂ ದಿವಂಗತ ಜೆ.ಎಚ್.ಪಟೇಲ್ ಸಹೋದರನ ಪುತ್ರನಾಗಿದ್ದಾರೆ. ಹಾಲಿ ಜಿಲ್ಲಾ ಪಂಚಾಯತ ಸದಸ್ಯ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಒಟ್ಟಾರೆ ಮಂಡ್ಯ, ತುಮಕೂರು ಲೋಕಸಭಾ ಕೂತುಹಲದ ಬಳಿಕ ಶಾಮನೂರು ಅಖಾಡ ರಂಗೇರುತ್ತಿದೆ.

ವಯಸ್ಸಾಯ್ತು ಅನ್ನೋ ಕಾರಣಕ್ಕೆ ಕಣದಿಂದ ಹಿಂದೆ ಸರಿದರೋ ಅಥವಾ ಕೊನೆಗಾಲದಲ್ಲಿ ಯಾಕೆ ಸೋಲಬೇಕು ಅನ್ನೋ ನಿರ್ಧಾರಕ್ಕೆ ಬಂದರೋ ಅನ್ನೋದನ್ನು ಟಿಕೆಟ್ ಗೊಂದಲ ಮುಗಿದ ಬಳಿಕ ಬಹಿರಂಗ ಮಾಡ್ಬೇಕಿದೆ.

Leave a Reply