ಬಿಜೆಪಿ 22 ಸ್ಥಾನ ಗೆದ್ದ ಮರುದಿನ ಕುಮಾರಸ್ವಾಮಿ ಮನೆಗೆ ಹೋಗ್ತಾರೆ! ಮೊಯ್ಲಿ ಹೇಳಿಕೆ ಹಿಂದಿನ ಮರ್ಮವೇನು?

ಡಿಜಿಟಲ್ ಕನ್ನಡ ಟೀಮ್:

‘ಪ್ರತಿಷ್ಠಿತ ಲೋಕಸಭೆ ಚುನಾವಣೆಯಲ್ಲಿ ಒಂದುವೇಳೆ ಬಿಜೆಪಿ 22 ಸ್ಥಾನ ಗೆದ್ದರೆ ಮರುದಿನವೇ ಜೆಡಿಎಸ್ ನಾಯಕ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಹೋಗ್ತಾರೆ…’ ಇದು ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ಡಾ. ಎಂ ವೀರಪ್ಪಮೊಯ್ಲಿ ನುಡಿದಿರುವ ಭವಿಷ್ಯ.

ಹೌದು, ಬಾಗೇಪಲ್ಲಿಯ ತಿಮ್ಮಂಪಲ್ಲಿಯಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ವೀರಪ್ಪಮೊಯ್ಲಿ ಹೇಳಿದ್ದಿಷ್ಟು…

‘ಯಡಿಯೂರಪ್ಪ ಅವರು ಮುಂಚೆಯಿಂದಲೂ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಅವರು ಒಂದಲ್ಲಾ ಒಂದು ರೀತಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸುವ ಶತಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು. ಕೋಮುವಾದಿ ಬಿಜೆಪಿಯನ್ನು ದೂರವಿಡಲು ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎಂಬ ಕನಸು ನನಸಾಗದಂತೆ ಮಾಡಲು ಕಾಂಗ್ರೆಸ್ ಗೆ ಮತ ನೀಡಬೇಕು.’

ಮೊಯ್ಲಿ ಅವರ ಈ ಮಾತು ಮೇಲ್ನೋಟಕ್ಕೆ ಸಿಎಂ ವಿರುದ್ಧದ ಹೇಳಿಕೆಯಂತೆ ಕಂಡುಬರುತ್ತದೆ. ಆದರೆ ಇದರ ಹಿಂದಿನ ಲೆಕ್ಕಾಚಾರವೇ ಬೇರೆ ಇದೆ. ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದರೂ ಅವರಿಗೆ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಹಾಗೂ ಮತದಾರರಿಂದ ಪೂರ್ಣ ಪ್ರಮಾಣದ ಬೆಂಬಲ ಸಿಗುವ ನಂಬಿಕೆ ಇಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಕ್ಕರೆ ಕುಮಾರಸ್ವಾಮಿ ಸಿಎಂ ಖುರ್ಚಿ ಅಲುಗಾಡುತ್ತದೆ ಎಂದು ಹೇಳುವ ಮೂಲಕ ಜೆಡಿಎಸ್ ಕಾರ್ಯಕರ್ತರು ಹಾಗೂ ಮತದಾರರು ತಮಗೆ ಮತಗಳನ್ನು ಹಾಕುತ್ತಾರೆ ಎಂಬುದು ಮೊಯ್ಲಿ ಲೆಕ್ಕಾಚಾರ.

Leave a Reply