ಮಂಡ್ಯದಲ್ಲಿ ಜೆಡಿಎಸ್​ ವಿರುದ್ಧ ಸೇಡಿನ​ ರಾಜಕೀಯ..!?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಜಿದ್ದಾಜಿದ್ದಿನ ರಾಜಕಾರಣ ನಡೆಯುತ್ತಿದ್ದು, ಜೆಡಿಎಸ್ ವರ್ಸಸ್ ಸುಮಲತಾ, ಸ್ಥಳೀಯ ಕಾಂಗ್ರೆಸ್ ಅತೃಪ್ತ ನಾಯಕರು, ಬಿಜೆಪಿ ನಡುವಣ ಕದನವಾಗಿ ಮಾರ್ಪಟ್ಟಿದೆ.

ಮಂಡ್ಯ ಹಾಗೂ ಹಾಸನದಲ್ಲಿ ಜೆಡಿಎಸ್​, ಕಾಂಗ್ರೆಸ್​ ಕಾರ್ಯಕರ್ತರನ್ನು ಬೆದರಿಸಲು ತಂತ್ರ ಹೆಣೆಯಲಾಗಿದ್ದು ಮೈಸೂರಿನ ಸಿಎಫ್​ಟಿಆರ್​ನಲ್ಲಿ ಐಟಿ ಅಧಿಕಾರಿಗಳು ತಂಗಿದ್ದಾರೆ. ‘ಕೇಂದ್ರ ಸರ್ಕಾರದ ನೇರ ಮಾರ್ಗದರ್ಶನದಂತೆ ತಂತ್ರಗಾರಿಕೆ ನಡೆಯುತ್ತಿದೆ ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೇಂದ್ರ ಸರ್ಕಾರ ಐಟಿ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ದಾಳಿ ಮುಂದುವರೆಸಿದ್ದಾರೆ. ಮಂಡ್ಯ ಭಾಗದ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಅಕ್ಕಿ ಗಿರಣಿಗಳ ಮೇಲೆ ಇವತ್ತು ಬೆಳಗಿನ ಜಾವ 4 ಗಂಟೆತನಕ ದಾಳಿ ನಡೆದಿದ್ದು, ಸ್ಪೈ ಕ್ಯಾಮರಾ ಅಳವಡಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಕೂಡಲೇ ಮಧ್ಯ ಪ್ರವೇಶಿಸುವ ಅಗತ್ಯ ಇದೆ’ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಂಡ್ಯದಲ್ಲಿ ಐಟಿ ಅಧಿಕಾರಿಗಳ ದಾಳಿಯಿಂದ ಕಂಗಾಲಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು, ಐಟಿ ದಾಳಿ ಬಗ್ಗೆ ಸಿಎಂ ಕುಮಾರಸ್ವಾಮಿಗೆ ಫೋನ್​ ಮೂಲಕ ದೂರು ನೀಡ್ತಿದ್ದಾರೆ. ಐಟಿ ಅಧಿಕಾರಿಗಳ ದಬ್ಬಾಳಿಕೆ ಹೆಚ್ಚಾಗಿದ್ದು, ನಮ್ಮ ಅಕ್ಕಿ ಗಿರಣಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸ್ತಿದ್ದಾರೆ. ನಮ್ಮ ಮನೆ, ಕಚೇರಿಗಳ ಮೇಲೂ ಕೂಡ ದಾಳಿಯಾಗ್ತಿದೆ. ಇವರ ದಾಳಿಯಿಂದ ನಾವು ಚುನಾವಣೆ ಮಾಡೋಕೆ ಆಗ್ತಿಲ್ಲ. ದಯಮಾಡಿ ಇದಕ್ಕೆ ಏನಾದ್ರು ಪರಿಹಾರ ಮಾಡಬೇಕು ಎಂದು ಕುಮಾರಸ್ವಾಮಿ ಬಳಿ ಅಳಲು ತೋಡಿಕೊಳ್ತಿದ್ದಾರೆ ಎನ್ನಲಾಗಿದೆ. ಇದ್ರಿಂದ ಕೋಪಗೊಂಡಿರುವ ಸಿಎಂ ಕುಮಾರಸ್ವಾಮಿ, ಟ್ವಿಟರ್​ನಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಜೆಡಿಎಸ್​ ಅಭ್ಯರ್ಥಿಯನ್ನು ಮಂಡ್ಯದಲ್ಲಿ ಶತಾಯಗತಾಯ ಸೋಲಿಸಲೇಬೇಕು, ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಗೆಲ್ಲಿಸುವ ಮೂಲಕ ಭದ್ರಕೋಟೆ ಎಂದು ಮೆರೆಯುತ್ತಿರುವ ಜೆಡಿಎಸ್​ಗೆ ಮಣ್ಣು ಮುಕ್ಕಿಸಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್​, ಸುಮಲತಾಗೆ ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅದರ ಭಾಗವಾಗಿಯೇ ಐಟಿ ದಾಳಿ ನಡೆಯುತ್ತಿದೆ ಅನ್ನೋ ಮಾತುಗಳು ಜೆಡಿಎಸ್​ ವಲಯದಲ್ಲಿ ಹರಿದಾಡ್ತಿದೆ. ಐಟಿ ಅಧಿಕಾರಿಗಳ ದಾಳಿಯಲ್ಲಿ ಏನೂ ಸಿಗದಿದ್ದರೂ ಪರವಾಗಿಲ್ಲ, ಚುನಾವಣೆಯಲ್ಲಿ ಹಣ ಖರ್ಚು ಮಾಡಲು ಧೈರ್ಯ ಬರದಂತೆ ಕಂಗಾಲಾಗಿಸಬೇಕು ಅನ್ನೋ ನಿರ್ಧಾರ ಮಾಡಿದ್ದಾರೆ ಎನ್ನುತ್ತಿದ್ದಾರೆ ಬೆಂಬಲಿಗರು.

Leave a Reply