ತುಮಕೂರಿನಲ್ಲಿ ದೇವೇಗೌಡರ ಹಾದಿ ಕ್ಲಿಯರ್​ ಆಗಿದ್ದು ಹೇಗೆ..?

ಡಿಜಿಟಲ್ ಕನ್ನಡ ಟೀಮ್:

ಮೈತ್ರಿ ಸರ್ಕಾರದಲ್ಲಿ ಸೀಟು ಹಂಚಿಕೆ ಬಳಿಕ ಸಾಕಷ್ಟು ಕ್ಷೇತ್ರಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರಲ್ಲಿ ಮೈತ್ರಿ ಅಭ್ಯರ್ಥಿ ಬಂಡಾವಾಗಿ ಸ್ಪರ್ಧೆ ಮಾಡಿದ್ದು ತುಮಕೂರಿನಲ್ಲಿ ಮಾತ್ರ. ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್​ ಟಿಕೆಟ್​ ಕೊಡದೆ ಮೈತ್ರಿ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟುಕೊಡುವ ನಿರ್ಧಾರ ಮಾಡಿತ್ತು. ಅದರಿಂದ ಬೇಸತ್ತ ಮುದ್ದಹನುಮೇಗೌಡ, ಬಂಡಾಯವಾಗಿ ಸ್ಪರ್ಧೆ ಮಾಡಿದ್ರು. ಮುದ್ದಹನುಮೇಗೌಡ ಜೊತೆಗೆ ಕಾಂಗ್ರೆಸ್​​ನ ಮಾಜಿ ಶಾಸಕ ಕೆ.ಎನ್​ ರಾಜಣ್ಣ ಕೂಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ರು. ಇದೀಗ ಎಲ್ಲಾ ಗೊಂದಲಗಳು ಅಂತ್ಯ ಕಂಡಿದ್ದು, ಮಾಜಿ ಪ್ರಧಾನಿ ದೇವೇಗೌಡರ ಹಾದಿ ಸುಗಮವಾಗಿದೆ.

ತುಮಕೂರಿನಲ್ಲಿ ಬಿಜೆಪಿ ಜಿ.ಎಸ್​ ಬಸವರಾಜು ಅವರಿಗೆ ಟಿಕೆಟ್​ ನೀಡಿದ್ದು, ಬಿಜೆಪಿ ಒಳಗೆ ಬಿಸಿ ಏರಿದೆ. ಸಾಕಷ್ಟು ವಿರೋಧವಿದ್ದರೂ ಲಿಂಗಾಯತ ಸಮಯದಾಯಕ್ಕೆ ಸೇರಿದವರು ಅನ್ನೋ ಕಾರಣಕ್ಕೆ ಬಿಜೆಪಿ ಮಣೆ ಹಾಕಿದೆ. ಆದ್ರೆ ಸಾಕಷ್ಟು ಬೇಗುದಿ ಕಾಣುತ್ತಿದ್ದು ದೇವೇಗೌಡರಿಗೆ ಗೆಲುವು ಸುಗಮವಾಗುವ ಸಾಧ್ಯತೆಯಿದೆ. ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್​ ರಾಜಣ್ಣ ಸ್ಪರ್ಧೆಯಿಂದ ಪರೀಕ್ಷೆ ಎದುರಾಗಿದ್ದ ದೇವೇಗೌಡರಿಗೆ ಇದೀಗ ಸಮಾಧಾನ ಆಗಿದ್ದು, ಬಂಡಾಯವೆದ್ದರು ಇದೀಗ ಸಮಾಧಾನದಿಂದ ನಾಮಪತ್ರ ವಾಪಸ್​ ಪಡೆದುಕೊಂಡು ಇಬ್ಬರು ನಾಯಕರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಪರಮೇಶ್ವರ್​ ಶಕ್ತಿಯನ್ನು ಕುಂದಿಸುವ ಉದ್ದೇಶದಿಂದಲೇ ಸಿದ್ದರಾಮಯ್ಯ ಮುದ್ದಹನುಮೇಗೌಡರಿಗೆ ಟಿಕೆಟ್​ ತಪ್ಪಿಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಪರಮೇಶ್ವರ್​ ಕೂಡ ಮುದ್ದಹನುಮೇಗೌಡರಿಗೆ ಟಿಕೆಟ್​ ದೊರಕಿಸಿಕೊಟ್ಟು, ಹೈಕಮಾಂಡ್​ ಮಟ್ಟದಲ್ಲಿ ತಾನೂ ಕೂಡ ಪ್ರಭಾವಿ ಎಂದು ತೋರಿಸಲು ಸರ್ಕಸ್​ ಮಾಡಿದ್ರು. ಆದ್ರೆ ಯಾವಾಗ ಸಾಧ್ಯವಾಗದ ಮಾತು ಅನ್ನೋದು ಕನ್ಫರ್ಮ್​ ಆದ ಬಳಿಕ ಮುದ್ದಹನುಮೇಗೌಡರ ಮನವೊಲಿಕೆಗೆ ಮುಂದಾಗಿದ್ದರು. ಆದ್ರೆ ಸಫಲವಾಗಿರಲಿಲ್ಲ.

ಬಂಡಾಯವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಕೊನೆಗೆ ಕಾಂಗ್ರೆಸ್​ ಮುಖಂಡರ ಸಂಪರ್ಕಕ್ಕೆ ಸಿಗದೆ ಓಡಾಡುತ್ತಿದ್ದರು. ನಂತರ ಸಿದ್ದರಾಮಯ್ಯ ಫೋನ್​ಗೆ ಸಿಕ್ಕಿದ ಸಂಸದ ಮುದ್ದಹನುಮೇಗೌಡ, ಒಲ್ಲದ ಮನಸ್ಸಿನಲ್ಲೇ ನಾಮಪತ್ರ ವಾಪಸ್​ಗೆ ಒಪ್ಪಿಕೊಂಡ್ರು. ನಂತ್ರ ನಿನ್ನೆ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಮುದ್ದಹನುಮೇಗೌಡರ ಮನೆಗ ಭೇಟಿ ನೀಡಿ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಬಗ್ಗೆ ತಿಳಿಸಿದ್ರು.

Leave a Reply