ಮೋದಿ ಮಹಾನ್ ಸುಳ್ಳುಗಾರ: ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಪ್ರಧನಿ ನರೇಂದ್ರ ಮೋದಿ ವೇದಿಕೆ ಮೇಲೆ ಆಡುವ ಮಾತುಗಳೆಲ್ಲಾ ಸುಳ್ಳುಗಳು. ಅವರ ಬಣ್ಣದ ಮಾತಿಗೆ ಯಾರೂ ಮರುಳಾಗಬೇಡಿ. ದೇಶದ ಅಭಿವೃದ್ಧಿಗೆ ರಾಷ್ಟ್ರೀಯ ಪಕ್ಷದ ನಾಯಕತ್ವದಲ್ಲಿ ಪ್ರಾದೇಶಿಕ ಪಕ್ಷಗಳ ಮೈತ್ರಿ ಅನಿವಾರ್ಯವಾಗಿದೆ ಇದಕ್ಕೆ ರಾಜ್ಯದ ಜನರು ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿದರು.

ಮಾದವಾರದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಕುಮಾರಸ್ವಾಮಿ ಅವರ ಭಾಷಣದ ಸಾರಾಂಶ ಹೀಗಿದೆ…

‘ದೇಶದ ಮುಂದಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿದೆ. ಈ ಸಂದೇಶವನ್ನು ರಾಷ್ಟ್ರಕ್ಕೆ ತಲುಪಿಸಿ ಮೈತ್ರಿ ಸರ್ಕಾರದ ಮಹತ್ವವನ್ನು ತಿಳಿಸಲು ಈ ಸಾಮಾವೇಶ ಮಾಡುತ್ತಿದ್ದೇವೆ.

ನರೇಂದ್ರ ಮೋದಿ ಅವರ ಬಣ್ಣದ ಮಾತುಗಳಿಗೆ ಯಾರೂ ಮಾರು ಹೋಗಬಾರದು ಎಂದು ರಾಜ್ಯದ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಕಳೆದ ಐದು ವರ್ಷಗಳಲ್ಲಿ ಅನೇಕ ಭರವಸೆಗಳನ್ನು ನೀಡಿದ ಮೋದಿ ಒಬ್ಬ ಸುಳ್ಳುಗಾರ. ಮೋದಿ ವೇದಿಕೆ ಮೇಲೆ ಮಾತನಾಡುವ ಮಾತುಗಳು ಸುಳ್ಳು. ಅದಕ್ಕೆ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ರಾಜ್ಯದಲ್ಲಿ ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ 45 ಸಾವಿರ ಕೋಟಿ ಸಾಲಮನ್ನಾ ನಿರ್ಧಾರವನ್ನು ಮಾಡಿದ್ದೇವೆ. ಇದರಿಂದ ರಾಜ್ಯದ ಲಕ್ಷಾಂತರ ರೈತ ಕುಟುಂಬಗಳು ಫಲಾನುಭವಿಗಳಾಗಿವೆ. ಈಗಾಗಲೇ 18 ಸಾವಿರ ಕುಟುಂಬಗಳ ರೈತರ ಸಾಲಮನ್ನಾ ಆಗಿದೆ. ಆದರೆ ಮೋದಿ ಅನೇಕ ಸಮಾರಂಭಗಳಲ್ಲಿ ನಮ್ಮ ಸಾಲಮನ್ನಾದಿಂದ ಯಾರಿಗೂ ಲಾಭವಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.

ಕೇವಲ ಸಾಲಮನ್ನಾ ಮಾತ್ರವಲ್ಲ. ರೈತರು ಮತ್ತೆ ಸಾಲಗಾರರಾಗಬಾರದು. ಇದಕ್ಕಾಗಿ ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ. ನೆರೆಯ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡಿದಾಗ ಯಾವೊಬ್ಬ ರೈತರನ್ನು ಮೋದಿ ಭೇಟಿ ಮಾಡಲಿಲ್ಲ. ಆ ಮೂಲಕ ಅವರಿಗೆ ಅಪಮಾನ ಮಾಡಿದರು. ಆದರೆ ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಿಸಾನ್ ಸಮ್ಮಾನ್ ಎಂಬ ಯೋಜನೆ ಮೂಕ ರೈತರಿಗೆ ವರ್ಷಕ್ಕೆ ಆರು ಸಾವಿರ ನೀಡಲು ಮುಂದಾಗಿದ್ದಾರೆ.

ಈ ಯೋಜನೆಯಲ್ಲಿ ರಾಜ್ಯದ 10 ಲಕ್ಷ ರೈತರ ಪಟ್ಟಿಯನ್ನು ನಾವು ಕಳುಹಿಸಿದ್ದೇವೆ. ಅದರಲ್ಲಿ 17 ಕುಟುಂಬಗಳನ್ನು ಗರುತಿಸಿರುವ ಕೇಂದ್ರ ಸರ್ಕಾರ ಕೇವಲ 6 ಕುಟುಂಬಗಳಿಗ ಮಾತ್ರ ಹಣ ನೀಡಿದೆ. ಈ ಮೂಲಕ ಕೇಂದ್ರದ ಮೋದಿ ಸರ್ಕಾರ ರೈತರಿಗೆ ಟೋಪಿ ಹಾಕುತ್ತಿದೆ. ಮೋದಿ ಅಧಿಕಾರಕ್ಕೆ ಬಂದಾಗ ಯುಪಿಎ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಹಾಳುಮಾಡಿದ್ದಾರೆ.

ಇನ್ನು ಮಹದಾಯಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧಿಕರಣ ನೀಡಿರುವ ತೀರ್ಪಿನ ಆಧಾರದ ಮೇಲೆ ನೀರು ಬಳಸಿಕೊಳ್ಳು ಗೆಜೆಟ್ ನೋಟಿಫಿಕೇಷನ್ ಮಾಡಿ ಎಂದು ಮನವಿ ಮಾಡಿದರೂ ಅದನ್ನು ಮಾಡದೇ ಉತ್ತರ ಕರ್ನಾಟಕದ ರೈತರಿಗೆ ದ್ರೋಹ ಬಗೆಯುತ್ತಿದೆ. ಎರಡು ಬಾರಿ ಭೇಟಿ ಮಾಡಿ ಕೃಷ್ಣಾ ನದಿ ನೀರು ಬಳಕೆ ಮಾಡಲು ತೀರ್ಮಾನ ಮಾಡಿ ಎಂದು ಮನವಿ ಮಾಡಿದರೂ ಅದನ್ನು ಮಾಡಿಲ್ಲ. ಈ ಎಲ್ಲ ಅಂಶಗಳನ್ನು ನನ್ನ ರೈತ ಬಾಂದವರು ಅರ್ಥ ಮಾಡಿಕೊಳ್ಳಬೇಕು.

ಇನ್ನು ಆಯುಷ್ಮಾನ್ ಭಾರತ ಯೋಜನೆಯಲ್ಲಿ ರಾಜ್ಯ ಸರ್ಕಾರ ಇದುವರೆಗೂ 130 ಕೋಟಿ ರು.ಗಳನ್ನು ನೀಡಿದರೆ ಕೇಂದ್ರ ಸರ್ಕಾರ ನೀಡಿರುವುದು ಕೇವಲ 22 ಕೋಟಿ ಅಷ್ಟೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನು ತಪ್ಪಿಸಲು ನಮ್ಮ ಸಚಿವರಾದ ಕೃಷ್ಣಭೈರೆಗೌಡ ಅವರ ನೇತೃತ್ವದಲ್ಲಿ ರಾಜ್ಯದ ಗ್ರಾಮೀಣ ಭಾಗದ ಜನರಿಗೆ0 ನರೇಂಗಾ ಯೋಜನಯಲ್ಲಿ ಉದ್ಯೋಗ ನೀಡಿದ್ದೇವೆ. ಆದರೆ ಇವರಿಗೆ ನೀಡಬೇಕಾದ 2 ಸಾವಿರ ಕೋಟಿ ಹಣವನ್ನು ಕೇಂದ್ರ ಇದುವರೆಗೂ ನೀಡಿಲ್ಲ. ಅದನ್ನು ರಾಜ್ಯ ಸರ್ಕಾರವೇ ನೀಡಿದೆ. ಇನ್ನು ಈ ಸರ್ಕಾರ ಬಡವರ ಬಂದು ಯೋಜನೆ ಮೂಲಕ ಬೀದಿ ವ್ಯಾಪಾರಿಗಳಿಗೆ ನಿತ್ಯ 1- 10 ಸಾವಿರ ಬಡ್ಡಿ ರಹಿತ ಸಾಲ ನೀಡಲು ಮುಂದಾಗಿದೆ.

ಬೆಂಗಳೂರಿನ ಅಭಿವೃದ್ಧಿಗಾಗಿ ಉಪಮುಖ್ಯಮಂತ್ರಿ ಪರಮೇಶ್ವರ ಅವರ ಜತೆ ಸೇರಿ 1 ಲಕ್ಷ ಕೋಟಿ ಅನುದಾನ ನೀಡಿದ್ದೇವೆ. ಹೀಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಭಿವೃದ್ಧಿಯತ್ತ ಸಾಗುವ ಪ್ರಯತ್ನದಲ್ಲಿರುವ ನಮಗೆ ಶಕ್ತಿ ತುಂಬಬೇಕು. ಇದಕ್ಕಾಗಿ ರಾಜ್ಯದ ಎರಡು ಮೂರು ಕ್ಷೇತ್ರದಲ್ಲಿರುವ ಭಿನ್ನಾಭಿಪ್ರಾಯ ಮರೆತು ಎರಡೂ ಪಕ್ಷಗಳ ನಾಯಕರು ಹೋರಾಟ ಮಾಡಬೇಕು. 21 ಕ್ಷೇತ್ರದಲ್ಲಿ ಕಾಂಗ್ರೆಸ್, 7 ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಈ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಪತ್ರಿಕೆ ವರದಿಗಳ ಪ್ರಕಾರ ಬಿಜೆಪಿಗೆ ಬಾಂಡ್ ಗಳ ಮೂಲಕ ಸಾವಿರ ಕೋಟಿ ಹಣ ಸಂದಾಯವಾಗಿದೆ. ಅದರಲ್ಲಿ 500 ಕೋಟಿಗೂ ಹೆಚ್ಚು ಮೌಲ್ಯದ ಬಾಂಡ್ ಗಳನ್ನು ಯಾರು ಕೊಟ್ಟಿದ್ದು ಎಂಬ ಲೆಕ್ಕ ಇಲ್ಲ. ಕಾರ್ಪೋರೇಟ್ ಸಂಸ್ಥೆಗಳಿಂದ ಕಪ್ಪುಹಣವನ್ನು ಈ ರೀತಿ ತಮ್ಮ ಪಕ್ಷಕ್ಕೆ ಪಡೆದಿದ್ದಾರೆ.

ಹೀಗೆ ಕನ್ನಡ ನಾಡಿಗೆ ಮೋದಿ ಸರ್ಕಾರ ದ್ರೋಹ ಬಗೆದಿಗೆ. ಆದರೂ ನಮ್ಮ ಮಾಧ್ಯಮಗಳು ಮೋದಿ ಅದನ್ನು ಮಾಡಿದ್ದಾರೆ ಇದನ್ನು ಮಾಡಿದ್ದಾರೆ ಎಂದು ಹೇಳಿ ಅವರು ಮಾಡಿರುವ ದ್ರೋಹವನ್ನು ಮರೆಮಾಚಿ ಮೋದಿಯನ್ನು ವೈಭವೀಕರಿಸಬೇಡಿ ಎಂದು ಮನವಿ ಮಾಡುತ್ತೇನೆ. ಮೋದಿ ವ್ಯಾಮೋಹ ಬಿಡಿ. ದೇಶವನ್ನು ಹಾಳು ಮಾಡಲು ಹೊರಟಿರುವ ಪ್ರಯತ್ನವನ್ನು ತಡೆಯಬೇಕಿದೆ. ಹೀಗಾಗಿ ನಮ್ಮನ್ನು 28 ಕ್ಷೇತ್ರಗಳಲ್ಲಿ ಗೆಲ್ಲಿಸಿ ದೇಶಕ್ಕೆ ಕರ್ನಾಟಕದ ಮೂಲಕ ಹೊಸ ಸಂದೇಶ ರವಾನೆ ಮಾಡಿ.’

Leave a Reply