ಕಾಳಧನ ಸಂಪೂರ್ಣ ನಿಯಂತ್ರಣ ಸಾಧ್ಯ! ಮತ್ತೇ ಅಸ್ತ್ರ ಪ್ರಯೋಗಿಸಿದ ಮೋದಿ

ಡಿಜಿಟಲ್ ಕನ್ನಡ ಟೀಮ್:

2014ರ ಲೋಕಸಭೆ ಚುನಾವಣೆ ವೇಳೆ ಕಪ್ಪುಹಣ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಮ್ಮೆ ಕಾಳಧನದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ‘ದೇಶದಲ್ಲಿ ಕಾಳಧನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಕಪ್ಪು ಹಣ ಲಭ್ಯತೆ ಬಗ್ಗೆ ಮಾಹಿತಿಯನ್ನು ನಾವು ಹೆಚ್ಚಿಸಿಕೊಂಡಿದ್ದೇವೆ’ ಎಂದಿದ್ದಾರೆ.

ದೆಹಲಿಯಲ್ಲಿ ಖಾಸಗಿ ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ‘ನಮ್ಮ ದೇಶದ ಹಣವನ್ನು ವಿದೇಶಗಳ ಖಾತೆಗಳಲ್ಲಿ ಠೇವಣಿ ಇಡುವ ಕಾಳಧನಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ಈಗಾಗಲೇ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಿದ್ದೇವೆ.

ಈಗಾಗಲೇ ಕಾಳಧನದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಿದ್ದು, ಈ ಸಂಬಂಧ ದ್ವೀಪರಾಷ್ಟ್ರ ಮಾರಿಷಸ್ ಸೇರಿದಂತೆ ಅನೇಕ ರಾಷ್ಟ್ರಗಳೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಬ್ಲಾಕ್‍ಮನಿಯನ್ನು ಸಂಪೂರ್ಣ ನಿರ್ಮೂಲ ಮಾಡಲು ಸಹಕಾರಿಯಾಗಲಿದೆ.

ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳು ತಾಂಡವವಾಡುತ್ತಿತ್ತು. ನಮ್ಮ ಸರ್ಕಾರ ಅವುಗಳನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದೆ. ಐದು ವರ್ಷಗಳ ಹಿಂದೆ ನಾವು ಅಧಿಕಾರಕ್ಕೆ ಬಂದಾಗ ನಮ್ಮ ಸರ್ಕಾರದ ಕಾರ್ಯವೈಖರಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿದವು. ಅನೇಕ ರಾಷ್ಟ್ರಗಳು ಕೂಡ ಚಕಾರವೆತ್ತಿದ್ದವು. ಆದರೆ, ನಾವು ಮಹತ್ವದ ಸಾಧನೆಗಳ ಮೂಲಕ ಈಗ ನಿಯಮ ರೂಪಿಸುವ ಉತ್ತಮ ಸ್ಥಿತಿಯಲ್ಲಿದ್ದೇವೆ.

ಹಿಂದೆ ಆಡಳಿತ ನಡೆಸಿದ ಯುಪಿಎ ಸರ್ಕಾರ ಮನಸೋಇಚ್ಚೆ ಸಾಲಗಳನ್ನು ನೀಡಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಕುಂಟಿತಗೊಳಿಸಿತ್ತು. ಕೆಲವು ಕಂಪೆನಿಗಳು ಒಂದು ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಿ, ಉಳಿದ ಸಂಸ್ಥೆಗಳಿಂದ ಲಭಿಸುತ್ತಿದ್ದ ಲಾಭವನ್ನು ಅಕ್ರಮವಾಗಿ ಅನುಭವಿಸುತ್ತಿತ್ತು. ಈಗ ನಾವು ಇವುಗಳಿಗೆ ಕಡಿವಾಣ ಹಾಕಿದ್ದೇವೆ’ ಎಂದು ಹೇಳಿದ್ದಾರೆ.

Leave a Reply