ನ್ಯಾಯ್ ಯೋಜನೆ ಮೂಲಕ ಬಡತನದ ವಿರುದ್ಧ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್: ರಾಹುಲ್ ಗಾಂಧಿ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಐವತ್ತು ಉದ್ಯಮಿಗಳ ಸಾಲಮನ್ನಾ ಮಾಡಲು ಸಾಧ್ಯವಿದೆ ಎಂದರೆ, ನಾವು ನ್ಯಾಯ್ ಯೋಜನೆ ಮೂಲಕ ದೇಶದ ಶೇ.20ರಷ್ಟು ಬಡವರಿಗೆ ಕನಿಷ್ಠ ಆದಾಯ ನೀಡಲು ಸಾಧ್ಯವಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಭಾನುವಾರ ಬೆಂಗಳೂರಿನ ಹೊರವಲಯದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಅಲ್ಲದೆ ಮುಂದಿನ ಚುನಾವಣೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾಡುವ ಯೋಜನೆಗಳ ಭರವಸೆ ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಮೊದಲು ಕಾರ್ಯಕ್ರಮಕ್ಕೆ ನಾನು ತಡವಾಗಿ ಬಂದಿದ್ದರಿಂದ ನಿಮಗಾದ ಅನಾನುಕೂಲಕ್ಕೆ ಕ್ಷಮೆ ಯಾಚಿಸುತ್ತೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಎದುರಿಸುತ್ತಿದೆ. ಮೊದಲಿಗೆ ಕಾಂಗ್ರೆಸ್ ಕಾರ್ಯತರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಎಲ್ಲೆಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೋ ಅವರನ್ನು ಗೆಲ್ಲಿಸಲು ಶ್ರಮಿಸಬೇಕು. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡುವಂತೆ ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿ ಹಾಗೂ ಮೋದಿ ಅವರನ್ನು ಮಣಿಸುವುದು ಎರಡು ಪಕ್ಷಗಳ ಗುರಿಯಾಗಿದೆ.

ಮೋದಿ ಹಾಗೂ ಬಿಜೆಪಿಯನ್ನು ಯಾಕೆ ಸೋಲಿಸಬೇಕು ಎಂಬುದನ್ನು ಹೇಳುತ್ತೇನೆ. ಈ ದೇಶ ಕೋಟ್ಯತರ ರೈತರು, ಬಡವರು, ಕಾರ್ಮಿಕರು, ಶ್ರಮಿಕರಿಗೆ ಸೇರಿದೆ. ಸಹಸ್ರಾರು ಶ್ರಮಿಕರು, ಕಾರ್ಮಿಕರು ದೇಶದ ಏಳಿಗೆಗಾಗಿ ತಮ್ಮ ಬೆವರು ಹಾಗೂ ರಕ್ತ ಬಸಿಯುತ್ತಿದ್ದಾರೆ. ಕಳೆದ ಐದು ವರ್ಷಗಳ ಮೋದಿ ಸರ್ಕಾರದಲ್ಲಿ ಬಡವರು, ಶ್ರಮಿಕರು ಹಾಗೂ ಹಿಂದುಳಿದವರಗಾಗಿ ಏನನ್ನೂ ನೀಡಲಿಲ್ಲ. ಕೇಂದ್ರ ಸರಕಾರ ತನ್ನ ಎಲ್ಲ ಯೋಜನೆಗಳನ್ನು ದೇಶದ ಶ್ರೀಮಂತರಿಗಾಗಿ ನೀಡಿದೆ.

ಕಾವಲುಗಾರ ಎಂದು ಕರೆದುಕೊಳ್ಳುವ ಮೋದಿ ಶ್ರೀಮಂತ ಉದ್ಯಮಿ ಅನೀಲ್ ಅಂಬಾನಿ ಅವರಿಗೆ ಎಲ್ಲಾ ಕಾನೂನು ಮುರಿದು ರಫೇಲ್ ಒಪ್ಪಂದ ನೀಡಿ ಅವರ ಜೇಬಿಗೆ 30 ಸಾವಿರ್ ಕೋಟಿ ಇಟ್ಟಿದ್ದಾರೆ. ಮಧ್ಯರಾತ್ರಿ ಸಿಬಿಐ ನಿರ್ದೇಶಕರ ಬದಲಾವಣೆ ಮಾಡಿದ್ದಾರೆ. ಐದು ವರ್ಷಗಳಲ್ಲಿ ಶ್ರೀಮಂತ ಉದ್ಯಮಿಗಳ 3 ಲಕ್ಷ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡಿದ್ದಾರೆ.

ಆದರೇ ರೈತರ ಸಾಲ ಮನ್ನಾ ಮಾಡಿ ಅಂದ್ರೆ ಅರುಣ್ ಜೇಟ್ಲಿ ಹಾಗೂ ಪ್ರಧಾನಿ ಮೋದಿ ಆಗಲ್ಲ ಅಂತಾರೆ. ಹಣ ಎಲ್ಲಿಂದ ತರೋದು ಅಂತಾ ಕೇಳ್ತಾರೆ. ಕರ್ನಾಟಕದಲ್ಲಿ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಲು ಹಣ ಎಲ್ಲಿಂದ ಬಂತು? ಮಧ್ಯಪ್ರದೇಶ, ರಾಜಸ್ಥಾನ ಛತ್ತೀಸ್ ಗಡಗಳಲ್ಲಿ ಸಾಲಮನ್ನಾ ಮಾಡಲು ಹಣ ಎಲ್ಲಿಂದ ಬಂತು?

ದೇಶದಲ್ಲಿ ಹಣದ ಕೊರತೆ ಇಲ್ಲ. ಆದರೆ ಬಡವರಿಗೆ, ರೈರಿಗೆ ಹಣ ನೀಡಲು ಮನಸ್ಥಿತಿ ಇಲ್ಲ. ಬಿಜೆಪಿಯವರು ದೇಶದ ಸಂಪತ್ತನ್ನು ರೈತರಿಗೆ, ಬಡವರಿಗೆ ನೀಡಲ್ಲ, ಅಂಬಾನಿ, ಮೆಹುಲ್ ಚೋಕ್ಸಿ, ನೀರವ್ ಮೋದಿ, ಮಲ್ಯರಂತಹ ಶ್ರೀಮಂತರಿಗೆ ನೀಡಲು ಇದೆ.

ಸರ್ಕಾರಿ ಶಾಲೆ, ಕಾಲೇಜುಗಳಿಗೆ ನೀಡಲು ಹಣ ಇಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ನೀಡಲು ಹಣ ಇಲ್ಲ. ಆದರೆ 15-20 ಶ್ರೀಮಂತರ ಸಾಲ ಮನ್ನಾ ಮಾಡಲು ಎಲ್ಲಿಂದ ಬಂತು? ಯಡಿಯೂರಪ್ಪನವರ ಡೈರಿಯಲ್ಲಿ 1800 ಕೋಟಿ ನೀಡಿದ್ದ ಹಣ ಎಲ್ಲಿಂದ ಬಂತು? ಅದು ಯರ ಹಣ? ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತೀನ್ ಗಡ್ಕರಿ ಅವರಿಗೆಗೆ ನೀಡಿದ ಹಣ ಯಾರದ್ದು? ಎಲ್ಲಿಂದ ಬಂತು? ಅದು ಕರ್ನಾಟಕ ಜನರ ಜೇಬಿನ ದುಡ್ಡು.

ಕಳೆದ ಆರು ತಿಂಗಳಿನಿಂದ ನಾವು ಒಂದು ಯೋಜನೆ ಕುರಿತು ಚರ್ಚಿಸುತ್ತಿದ್ದೇವೆ. ಮೋದಿ ದೇಶದ ಶ್ರೀಮಂತರಿಗೆ ಹಣ ನೀಡಲು ಸಾಧ್ಯವಾದರೆ, ಕಾಂಗ್ರೆಸ್ ಬಡವರಿಗೆ ಹಣ ನೀಡಲು ಸಾಧ್ಯವಿದೆ. ನೀವು ಏನು ಮಾಡ್ತೀರೋ ಮಾಡಿ, ನಾವು ಏನು ಮಾಡಬೇಕೋ ಮಾಡ್ತೀವಿ.

ಕೆಲವೇ ದಿನಗಳ ಹಿಂದೆ ಬಡವರಿಗಾಗಿ ಹೊಸ ಯೋಜನೆ ‘ನ್ಯಾಯ್’ ಅನ್ನು ನೀಡಲು ನಿರ್ಧರಿಸಿದ್ದೇವೆ. ಮೋದಿ 15 ಲಕ್ಷ ನೀಡುವುದಾಗಿ ಹೇಳಿದ್ದರು. ನಿಮಗೆ ಸಿಕ್ತಾ? ಅದು ಸುಳ್ಳು. ಅದರ ಸತ್ಯ ಏನು ಅಂತಾ ಹೇಳ್ತೀನಿ ಕೇಳಿ. ಸರ್ಕಾರ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಲು ಸಾಧ್ಯಲ್ಲ. ಆದರೆ ಶೇ.20 ಬಡವರ ಖಾತೆಗೆ ವರ್ಷಕ್ಕೆ 72 ಸಾವಿರ ಹಾಕಲು ಸಾಧ್ಯವಿದೆ. ನ್ಯಾಯ ಯೋಜನೆಯಿಂದ ಶೇ.20 ರಷ್ಟು ಬಡವರ ಖಾತೆಗೆ ವಾರ್ಷಿಕ 72 ಸಾವಿರ ರೀತಿ ಐದು ವರ್ಷಗಳಲ್ಲಿ ಮೂರುವರೆ ಲಕ್ಷ ಹಣವನ್ನು ಹಾಕಲು ಸಾಧ್ಯವಿದೆ.

ನ್ಯಾಯ್ ಯೋಜನೆ ಬಡತನದ ವಿರುದ್ಧ ನಾವು ಮಾಡಲಿರುವ ಸರ್ಜಿಕಲ್ ಸ್ಟ್ರೈಕ್. ಇದರಿಂದ  5 ಕೋಟಿ ಕುಟುಂಬದ 25 ಕೋಟಿ ಜನರಿಗೆ ಲಾಭವಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 12 ಸಾವಿರಕ್ಕೂ ಕನಿಷ್ಠ ಆದಾಯ ಇಲ್ಲದ ವ್ಯಕ್ತಿ ಸಿಗಲ್ಲ. ಕನಿಷ್ಠ ಆದಾಯವನ್ನು 12 ಸಾವಿರಕ್ಕೆ ನಿಗದಿ ಮಾಡಿದ್ದೇವೆ. ಯಾರ ಆದಾಯ 12 ಸಾವಿರಕ್ಕಿಂತ ಕಡಿಮೆ ಇದೆಯೋ ಅವರಿಗೆ ಈ ಯೋಜನೆ ಸಿಗುತ್ತೆ.

ಮೋದಿ ನಿಮ್ಮ ಜೇಬಿನಿಂದ ಹಣ ಕಿತ್ತರು. ನೋಟು ಅಮಾನ್ಯೀಕರಣ ಮಾಡಿ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವಂತೆ ಮಾಡಿದರು. ಅದರಿಂದ ಬಚಾವಾದವರಿಗೆ ಜಿಎಸ್ ಟಿ ಮೂಲಕ ದಾಳಿ ಮಾಡಿದರು. ಪ್ರತಿ ದಿನ ಶೋಷಣೆ ಮಾಡಿದರು. ಶೇ. 28 ರಷ್ಟು ಜಿಎಸ್ ಟಿ ಟ್ಯಾಕ್ಸ್ ಹಾಕಿದರು. ಪೆಟ್ರೋಲ್ ಬೆಲ ಏರಿಕೆ, ಆಹಾರ ಪದಾರ್ಥಗಳ ಬೆಲೆ ಏರಿಕೆ ಹೀಗೆ ಒಂದಾದಮೇಲೆ ಒಂದು ಬರೆ ಎಳೆದರು.

ನಾವು ಅಧಿಕಾರಕ್ಕೆ ಬಂದ ನಂತರ ಜಿಎಸ್ ಟಿಯಲ್ಲಿ ಬದಲಾವಣೆ ಮಾಡುತ್ತೇವೆ. ಒಂದೇ ತೆರಿಗೆ, ಕಡಿಮೆ ಹಾಗೂ ಸರಳ ತೆರಿಗೆ ಜಾರಿಗೆ ತರುತ್ತೇವೆ. ನೋಟು ಅಮಾನ್ಯೀಕರಣ, ಜಿಎಸ್ ಟಿಯಿಂದಾಗಿ ನಿರುದ್ಯೋಗ ಹೆಚ್ಚಳವಾಗಿದೆ. ಮೋದಿ ಅವರು ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಜಾರಿ ಮಾಡಿದರೂ 75 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಬ್ಯಾಂಕ್ ಗಳ ಬೀಗವನ್ನು ಮಲ್ಯ, ಅಂಬಾನಿಯಂತಹ ಶ್ರೀಮಂತರಿಗೆ ನೀಡಿದ್ದಾರೆ. ನಾವು ಅದನ್ನು ಅವರಿಂದ ಕಿತ್ತು ಜನಸಾಮಾನ್ಯರ ಕೈಗೆ ನೀಡುತ್ತೇವೆ.

ಕರ್ನಾಟಕ ಭಾರತದ ಸ್ಟಾರ್ಟ್ ಅಪ್ ರಾಜಧಾನಿ. ಮೋದಿ ಅಧಿಕಾರಿದಲ್ಲಿ ಸ್ಟಾರ್ಟ್ ಅಪ್ ಮಾಡಲು ಅನೇಕ ಇಲಾಖೆಗಳ ಪರವಾನಿಗೆ ಬೇಕು. ಲಂಚ ನೀಡಬೇಕು. ಆದರೆ ನಮ್ಮ ಸರ್ಕಾರ ಬಂದರೆ ಯಾವುದೇ ಯುವಕ ಕೈಗಾರಿಕೆ ಮಾಡಲು ನಿರ್ಧರಿಸಿದರೆ ಅವರಿಗೆ ಮೂರು ವರ್ಷ ಯಾವುದೇ ಅನುಮತಿ ಅಥವಾ ಪರವಾನಿಗೆ ಬೇಡ. ದೇಶದ ಯಾವುದೇ ವ್ಯಕ್ತಿ ಉದ್ಯೋಗ ಸೃಷ್ಠಿ ಮಾಡುತ್ತಾನೋ ಆತನಿಗೆ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಹೆಚ್ಚಿನ ಸಹಾಯ ನೀಡಲಾಗುವುದು.

ಮೋದಿ ಹಲವು ಸುಳ್ಳು ಆಶ್ವಾಸನೆ ನೀಡಿ ದೇಶ ವಿಭಜನೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ದೇಶವನ್ನು ಜೋಡಿಸುವ ಕಾರ್ಯಕ್ಕೆ ಕೈಹಾಕಿದೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಮಾಡಿದ ರೀತಿಯಲ್ಲೇ ದೆಹಲಿಯಲ್ಲಿ ಮೈತ್ರಿ ಸರಕಾರ ಮಾಡಿ ಮೋದಿ ಅವರ ಸರ್ಕಾರವನ್ನು ಮಣಿಸುತ್ತೇವೆ. ಕಾಂಗ್ರೆಸಿಗರು ಜೆಡಿಎಸ್ ಅಭ್ಯರ್ಥಿಗೆ ಹಾಗೇ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಲು ಮತ್ತೊಮ್ಮೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ಳುತ್ತೇನೆ.

Leave a Reply