ದಾವಣಗೆರೆ ಕಾಂಗ್ರೆಸ್‌ನಲ್ಲಿ ಜಾತಿ ರಾಜಕೀಯ..!?

ಡಿಜಿಟಲ್ ಕನ್ನಡ ಟೀಮ್:

ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಿ.ಎಂ ಸಿದ್ದೇಶ್ವರ್ ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ ಮಾತ್ರ ಇನ್ನೂ ಕೂಡ ಅಭ್ಯರ್ಥಿ ಗೊಂದಲ ಬಗೆಹರಿಸುವ ಪ್ರಯತ್ನ ನಡೆಸುತ್ತಲೇ ಇದೆ. ಈಗಾಗಲೇ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪಗೆ ಟಿಕೆಟ್ ಘೋಷಣೆಯಾಗಿತ್ತು. ಆದರೆ ಕಳೆದ ಬಾರಿ‌ ಸಚಿವನಾಗಿದ್ದಾಗ ವಯಸ್ಸಾಗಿದೆ ಅನ್ನೋ ಕಾರಣಕ್ಕೆ ಸಚಿವ ಸ್ಥಾನ ಕಿತ್ತುಕೊಂಡಿದ್ದವರು, ಇದೀಗ ಲೋಕಸಭೆಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ವ್ಯಂಗ್ಯ ಮಾಡುವ ಮೂಲಕ ಶಾಮನೂರು‌ ಶಿವಶಂಕರಪ್ಪ ಟಿಕೆಟ್ ನಿರಾಕರಿಸಿದ್ರು. ಆ ಬಳಿಕ ಟಿಕೆಟ್ ಯಾರಿಗೆ ಕೊಡಬೇಕು ಅನ್ನೋ ಗೊಂದಲಕ್ಕೆ‌ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್, ವೀರಶೈವ ಸಮುದಾಯಕ್ಕೆ ಸೇರಿದ ಪಕ್ಷೇತರ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿ, ಮಾತುಕತೆಯನ್ನು ನಡೆಸಿದ್ರು. ಆದ್ರೆ ತೇಜಸ್ವಿ ಪಟೇಲ್‌ಗೆ ಟಿಕೆಟ್ ನೀಡಲು ಶಾಮನೂರು ಕುಟುಂಬ ಅಡ್ಡಗಾಲು ಹಾಕಿದೆ.

ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಕಾಂಗ್ರೆಸ್ ಮೇಲೆ‌ ಕೋಪವಿದೆ. ವೀರಶೈವ ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದ ಶಾಮನೂರು, ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸದಂತೆ ಆಗ್ರಹಿಸಿತ್ತು. ಆದ್ರೆ ಶಾಮನೂರು ಪ್ರಸ್ತಾಪ ನಿರಾಕರಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರ ಪ್ರಸ್ತಾವನೆಗೆ ಒಪ್ಪಿಗೆಯ ಮುದ್ರೆ ಒತ್ತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಇದರಿಂದ ಕುಪಿತಗೊಂಡ ಶಾಮನೂರು ಅಂಡ್ ಸನ್ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡರು. ಇದೀಗ ಟಿಕೆಟ್ ಕೊಟ್ಟರೂ ಸ್ಪರ್ಧೆ ಮಾಡಲು ಮುಂದಾಗ್ತಿಲ್ಲ. ಶಾಮನೂರು ವಯಸ್ಸಾಗಿದೆ ಅನ್ನೋ ಕಾಂಗ್ರೆಸ್ ಮಾತನ್ನೇ ತಿರುಗಿಸಿ ಕೊಟ್ಟಿದ್ದು, ಎಸ್ ಮಲ್ಲಿಕಾರ್ಜುನ್ ತನ್ನ ಮಾವನ ಎದುರು ಸ್ಪರ್ಧೆ ಮಾಡಲು ಮನಸ್ಸು ಮಾಡುತ್ತಿಲ್ಲ. ಶಾಮನೂರಿಗೂ ಅಳಿಯನೇ ಗೆಲ್ಲಲಿ ಅನ್ನೋ ಭಾವನೆ ಇದೆ ಅನ್ನೋ ಮಾತುಗಳು ಹರಿದಾಡ್ತಿವೆ.

ಶಾಮನೂರು ಕುಟುಂಬ ಮತ್ತೋರ್ವ ಲಿಂಗಾಯತ ನಾಯಕ ತೇಜಸ್ವಿ ಪಟೇಲ್‌ಗೆ ಕಾಂಗ್ರೆಸ್ ಟಿಕೆಟ್‌ ನೀಡಲು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣ ಜಾತಿ ರಾಜಕೀಯ. ಈಗ ದಾವಣಗೆರೆಯಲ್ಲಿ‌ಎಲ್ಲಿ ನೋಡಿದರೂ ಶಾಮನೂರು ಕುಟುಂಬವೇ ಹಿಡಿತ ಹೊಂದಿದೆ. ಲಿಂಗಾಯತರ ವಿಚಾರದಲ್ಲೂ ಶಾಮನೂರು‌ ಶಿವಶಂಕರಪ್ಪ ಹೇಳಿದ್ದೇ ಫೈನಲ್. ಹಾಗಾಗಿ‌ ವೀರಶೈವ ಲಿಂಗಾಯತ ಸಮುದಾಯದಲ್ಲಿ ಮತ್ತೋರ್ವ ನಾಯಕರು ಬೆಳೆದುಕೊಂಡರೆ ತಮ್ಮ ಮಾತಿಗೆ ಬೆಲೆ ಕಡಿಮೆ ಆಗಲಿದೆ ಅನ್ನೋ ಭಯವೂ ಇದೆ ಅನ್ನೋದು ರಾಜಕೀಯ ಮುಖಂಡರ ಅಭಿಪ್ರಾಯವಾಗಿದೆ. ಇದೇ‌ ಕಾರಣಕ್ಕಾಗಿ ಶಾಮನೂರು ಶಿವಶಂಕರಪ್ಪ, ಕುರುಬ ಸಮುದಾಯದ ಮಂಜಪ್ಪ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದೆ. ಆದ್ರೆ ಕೆಪಿಸಿಸಿ ಹಾಗೂ ಹೈಕಮಾಂಡ್ ನಾಯಕರು, ಸ್ಪರ್ಧಿಸುವುದಾದರೆ ನಿಮ್ಮ ಕುಟುಂಬದಿಂದ ಸ್ಪರ್ಧಿಸಿ, ಇಲ್ಲದಿದ್ದರೆ ಟಿಕೆಟ್ ಕೊಡುವುದು ನಮಗೆ ಬಿಟ್ಟುಬಿಡಿ, ನಿಮಗೆ ಅದರ ಉಸಾಬರಿ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದೆ. ಇದ್ರಿಂದ ಕಂಗಾಲಾಗಿರುವ ಶಾಮನೂರು ಕುಟುಂಬ ಸ್ಪರ್ಧೆ ಮಾಡಲು ಮುಂದಾಗಿದ್ದು, ನಾಮಕಾವಸ್ತೆಗೆ ನಾಮಪತ್ರ ಸಲ್ಲಿಸಿ‌ ಸೈಲೆಂಟ್ ಆಗಲು ಯೋಜನೆ ರೂಪಿಸುತ್ತಿದೆ ಎನ್ನಲಾಗ್ತಿದೆ. ಇವತ್ತು ಎಲ್ಲದಕ್ಕೂ ಉತ್ತರ ಸಿಗಲಿದ್ದು, ಮಲ್ಲಿಕಾರ್ಜುನ್ ಸ್ಪರ್ಧೆ ಮಾಡ್ತಾರಾ ಅನ್ನೋದು ಗೊತ್ತಾಗಬೇಕಿದೆ.

Leave a Reply