ಬೇಹುಗಾರಿಕೆ ಉಪಗ್ರಹ ಯಶಸ್ವಿ ಉಡಾವಣೆ ಮಾಡಿದ ಇಸ್ರೋ!

ಡಿಜಿಟಲ್ ಕನ್ನಡ ಟೀಮ್:

ಡಿಆರ್‌ಡಿಓ ಅಭಿವೃದ್ಧಿಪಡಿಸಿದ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್‌ ಉಪಗ್ರಹ (ಬೇಹುಗಾರಿಕೆ ಉಪಗ್ರಹ) ಎಮಿಸ್ಯಾಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸೋಮವಾರ ಬೆಳಗ್ಗೆ ಯಶಸ್ವಿಯಾಗಿ ಕಕ್ಷೆ ಸೇರಿಸಿದೆ.

436 ಕೆ.ಜಿ ತೂಕದ ಎಮಿಸ್ಯಾಟ್ ಉಪಗ್ರಹ, ಶತ್ರುಗಳ ರಾಡಾರ್‌ಗಳನ್ನು ಗುರುತಿಸುವುದೂ ಸೇರಿದಂತೆ ಮಿಲಿಟರಿ ಉದ್ದೇಶಗಳಿಗೆ ಬಳಕೆಯಾಗಲಿದೆ. ಇದರೊಂದಿಗೆ ದೇಶದ ಭದ್ರತಾ ವ್ಯವಸ್ಥೆಗೆ ಮತ್ತೊಂದು ಕವಚ ಸಿಕ್ಕಂತಾಗಿದೆ.

ಪಿಎಸ್‌ಎಲ್‌ವಿ-ಸಿ45 ರಾಕೆಟ್ ವಿದೇಶದ 28 ಉಪಗ್ರಹಗಳು ಮತ್ತು 3 ವೈಜ್ಞಾನಿಕ ಉಪಕರಣಗಳನ್ನು ಹೊತ್ತುಕೊಂಡು ಯಶಸ್ವಿಯಾಗಿ ಕಕ್ಷೆ ಸೇರಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡ್ಡಯನ ತಾಣದಿಂದ ಬೆಳಗ್ಗೆ 9:27ಕ್ಕೆ ಪಿಎಸ್‌ಎಲ್‌ವಿ-ಸಿ45 ರಾಕೆಟ್ ನಭಕ್ಕೆ ಚಿಮ್ಕಿತು. ನಂತರ 17 ನಿಮಿಷಗಳಲ್ಲಿ ಎಮಿಸ್ಯಾಟ್ ಅನ್ನು 753.6 ಕಿ.ಮೀ ಎತ್ತರದ ಕಕ್ಷೆಯನ್ನು ಸೇರಿಸಿತು.

ಪಿಎಸ್‌4 ಕಾರ್ಯಾಚರಣೆ ಅಮೆರಿಕ, ಲಿಥುವೇನಿಯಾ, ಸ್ಪೇನ್ ಮತ್ತು ಸ್ವಿಜರ್ಲೆಂಡ್‌ ಗೆ ಸೇರಿದ್ದಾಗಿವೆ. ಪಿಎಸ್‌ಎಲ್‌ವಿ ಉಡಾವಣಾ ರಾಕೆಟ್‌ನ 47ನೇ ಉಡ್ಡಯನ ಇದಾಗಿದ್ದು, ಅತಿ ದೀರ್ಘಾವಧಿಯ ಯಾನವಾಗಿದೆ. ಈ ಉಡಾವಣೆ ವೇಳೆ ಪಿಎಸ್‌ಎಲ್‌ವಿ ಬಹುತೇಕ ಭೂಮಿಯನ್ನು ಒಂದು ಸುತ್ತು ಹಾಕಿದೆ. ಹಿಂದಿನ ಸುದೀರ್ಘ ಅವಧಿಯ ಉಡ್ಡಯನ- ಪಿಎಸ್‌ಎಲ್‌ವಿ ಸಿ40ಯನ್ನು ಜನವರಿ 2018ರಂದು ಹಾರಿಸಲಾಗಿತ್ತು. ಅದರ ಯಾನ 2 ಗಂಟೆ 21 ನಿಮಿಷಗಳ ಅವಧಿಯದ್ದಾಗಿತ್ತು.

Leave a Reply