ಲೋಕಸಭೆ ಚುನಾವಣೆ ಬಳಿಕ ಬಿಎಸ್‌ವೈ ನಿವೃತ್ತಿ..!?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಬಿಜೆಪಿಯ ಪ್ರಮುಖ ನಾಯಕ ಅಂದ್ರೆ ಅದು ಬಿ.ಎಸ್ ಯಡಿಯೂರಪ್ಪ. ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಕಮಲ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿ ಬೆಳಸಿದವರಲ್ಲಿ ಒಬ್ಬರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಟಾರ್ಗೆಟ್ 22 ಗುರಿ ಇಟ್ಟುಕೊಂಡು ಹೊರಟಿರುವ ಬಿ.ಎಸ್ ಯಡಿಯೂರಪ್ಪ ಅವರಿಗೆ ಲೋಕಸಭಾ ಚುನಾವಣೆ ಅಂತಿಮ ರಾಜಕೀಯ ಘಟ್ಟ ಎನ್ನಲಾಗುತ್ತಿದೆ.

ಇದೊಂದು ಚುನಾವಣೆ ಕಳೆದರೆ ಮುಂದೆ ಬಿ.ಎಸ್ ಯಡಿಯೂರಪ್ಪ ಸ್ವಯಂ ರಾಜಕೀಯ ನಿವೃತ್ತಿ ಪಡೆಯಬೇಕು ಅಥವಾ ಬಿಜೆಪಿ ಪಕ್ಷದ ದೆಹಲಿ ನಾಯಕರೇ ಯಡಿಯೂರಪ್ಪ ಅವರನ್ನು ಮನೆಗೆ ಕಳುಹಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಬಿಜೆಪಿಯಲ್ಲಿ ಯಡಿಯೂರಪ್ಪನದು ಏನು ನಡೆಯುತ್ತಿಲ್ಲ. ಯಡಿಯೂರಪ್ಪನ ಮಾತು ಯಾರು ಕೇಳುತ್ತಿಲ್ಲ. ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ನಾಯಕರು ಬಿ.ಎಸ್ ಯಡಿಯೂರಪ್ಪ ಅವರನ್ನು ತೋರಿಕೆಗೆ ಮಾತ್ರ ಇಟ್ಟುಕೊಂಡಿದ್ದಾರೆ. ಬುಟ್ಟಿಯಲ್ಲಿ ಹಾವಿದೆ ಎನ್ನೋದು. ಆದ್ರೆ ಬುಟ್ಟಿಯಲ್ಲಿ ಹಾವೇ ಇಲ್ಲ. ಈ ಚುನಾವಣೆ ಬಳಿಕ ಯಡಿಯೂರಪ್ಪನನ್ನು ಎತ್ತಿ ಬಿಸಾಕಿ ಬಿಡ್ತಾರೆ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ನಾಮಪತ್ರ ಸಲ್ಲಿಕೆಯ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ‘ಉಮೇಶ್ ಕತ್ತಿ ಯಾರ ಪರವಾಗಿರುವ ಮನುಷ್ಯ. ಯಡಿಯೂರಪ್ಪನ  ಮನುಷ್ಯ ಈ ಉಮೇಶ್ ಕತ್ತಿ. ಆದ್ರೆ ಚಿಕ್ಕೋಡಿಯಲ್ಲಿ ಆರ್‌ಎಸ್‌ಎಸ್‌ನ ಸಂತೋಷ್  ಕಡೆಯ ಕ್ಯಾಂಡಿಡೇಟ್ ಹಾಕಿದ್ದಾರೆ. ಅದೇ ರೀತಿ ಬೆಂಗಳೂರು ದಕ್ಷಿಣದಲ್ಲಿ ಅನಂತಕುಮಾರ್ ಪತ್ನಿಗೆ ಕೊಡ್ತೀವಿ ಎಂದು ಬಿಎಸ್‌ವೈ ಬಹಿರಂಗವಾಗಿಯೇ ಹೇಳಿದ್ರು. ಆದ್ರೆ ಕೊನೆಗೆ ಅನಂತಕುಮಾರ್ ಪತ್ನಿಗೆ ಟಿಕೆಟ್ ಕೊಡದೆ ಮೋಸ ಮಾಡಿದರು ಎನ್ನುವ ಮೂಲಕ ಬಿ.ಎಸ್ ಯಡಿಯೂರಪ್ಪ ಆಟ ಬಿಜೆಪಿಯಲ್ಲಿ ಮುಗೀತು ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಮಾತನ್ನ ನಂಬುವುದು ಹೇಗೆ ಅನ್ನೋದನ್ನು ಪರಾಮರ್ಷೆ ನಡೆಸಿದ್ರೆ ಹೌದು ಎನ್ನುತ್ತವೆ ಬಿಜೆಪಿ ಮೂಲಗಳು. ಬಿಜೆಪಿ  ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಬಿಎಸ್ ಯಡಿಯೂರಪ್ಪ ವರ್ಚಸ್ಸು ಕಡಿಮೆಯಾಗುತ್ತಿದ್ದು, ಆರ್‌ಎಸ್‌ಎಸ್ ಪ್ರಾಬಲ್ಯವಿರುವ ಸಂತೋಷ್ ಮಾತಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ಮಿತಭಾಷಿಯಾದ ಸಂತೋಷ್ ಮಾಸ್ ಲೀಡರ್ ಅಲ್ಲದಿದ್ದರೂ ಸಂಘಟನಾ ಚತುರ ಅನ್ನೋದು ಬಿಜೆಪಿ ನಾಯಕರ ನಂಬಿಕೆ. ಅದೂ ಅಲ್ಲದೆ ಬಿ.ಎಸ್ ಯಡಿಯೂರಪ್ಪ ಈಗಾಗಲೇ ಒಮ್ಮೆ ಪಕ್ಷ ಬಿಟ್ಟು ಹೊರಕ್ಕೆ ಹೋಗಿ ಕೆಜೆಪಿ ಕಟ್ಟಿದ್ರಿಂದ ಭಾರೀ ಇರುಸು ಮುರುಸು ಉಂಟಾಗಿತ್ತು. ಭಾರೀ ಬೆಲೆಯನ್ನೂ ತೆರಬೇಕಾಗಿತ್ತು. ಆಗಲೇ ಬಿಎಸ್ ಯಡಿಯೂರಪ್ಪ ವಿರುದ್ಧ ಬಿಜೆಪಿ‌ ಕ್ರಮಕೈಗೊಂಡಿತ್ತು. ಯಾವಾಗ ಇಡೀ ಲಿಂಗಾಯತ ಸಮುದಾಯ ಬಿಎಸ್‌ವೈ ಸ್ಥಾಪಿಸಿದ ಕೆಜೆಪಿ ಪರವಾಗಿ ನಿಲ್ಲುವ ಮೂಲಕ ಬಿಜೆಪಿ ಭಾರೀ ಕುಸಿತಕ್ಕೆ ಕಾರಣವಾಯ್ತು, ಆ ಕಾರಣಕ್ಕಾಗಿ ಬಿಎಸ್‌ವೈ ವಾಪಸ್ಸಾತಿಗೆ ಒಪ್ಪಿಗೆ ಕೊಡಲಾಯ್ತು. ಆದ್ರೀಗ ಬಿಎಸ್ ಯಡಿಯೂರಪ್ಪ ಅವರಿಗೆ 76 ವರ್ಷ ವಯಸ್ಸಾಗಿದ್ದು, ಅವರ ರಾಜಕೀಯ ಶಕ್ತಿಯೂ ದಿನಕಳೆದಂತೆ ಕುಂದುತ್ತಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಾರ್ಗೆಟ್ 120 ಅಂತಾ ಹೋಗಿದ್ದ ಬಿಜೆಪಿ 80 ರ ಆಸುಪಾಸಿನಲ್ಲಿ ನಿಲ್ಲುವ ಸಮೀಕ್ಷೆ ಬಂದಿತ್ತು. ಅದನ್ನರಿತ ಹೈಕಮಾಂಡ್ ಮೋದಿಯನ್ನು ಕರೆತಂದ ಪರಿಣಾಮ 104ಕ್ಕೆ ಬಂದು ನಿಲ್ಲುವಂತಾಯ್ತು. ಇದೀಗ ಲೋಕಸಭೆಯಲ್ಲೂ 22 ರ ಟಾರ್ಗೆಟ್ ಇಟ್ಟುಕೊಂಡು ಹೋಗಲಾಗ್ತಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ನಡುವೆ ಎಷ್ಟರ ಸಂಖ್ಯೆ ಮುಟ್ತಾರೆ ಅನ್ನೋ ಅನುಮಾನಗಳು ಶುರುವಾಗಿವೆ. ಮುಂದಿನ ರಾಜಕೀಯ ದೃಷ್ಟಿಯಿಂದ ವಿಧಾನಸಭೆಗೆ ತಯಾರಿ ನಡೆಸಬೇಕಿದ್ದು, ಯಡಿಯೂರಪ್ಪ ಕೈಯ್ಯಲ್ಲಿ ಆಗೋದಿಲ್ಲ, ಅದಕ್ಕಾಗಿ ಹೊಸ ನಾಯಕತ್ವ ಕೊಡಬೇಕು ಅನ್ನೋ ಸಂಕಲ್ಪ ಬಿಜೆಪಿ‌ ಹೈಕಮಾಂಡ್‌ದು ಎನ್ನಲಾಗಿದೆ.

ಒಟ್ಟಾರೆ ಫಲಿತಾಂಶ ಏನೇ ಬರಲಿ, ಬಿಎಸ್ ಯಡಿಯೂರಪ್ಪ ಅವರಿಗೆ ಗೇಟ್‌ಪಾಸ್ ಕಟ್ಟಿಟ್ಟ ಬುತ್ತಿ, ಬೇರೆ ನಾಯಕನ ಆಯ್ಕೆ ಶತಸಿದ್ಧ ಎನ್ನುತ್ತಿದೆ ಕೇಸರಿ ಪಡೆ.

Leave a Reply