ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ! ಕೈ ಪಡೆ ನೀಡುತ್ತಿರುವ ಭರವಸೆ ಏನು?

ಡಿಜಿಟಲ್ ಕನ್ನಡ ಟೀಮ್:

ಕನಿಷ್ಠ ಆದಾಯ ಖಾತ್ರಿ, ರೈತರಿಗೆ ಪ್ರತ್ಯೇಕ ಬಜೆಟ್, ಸಾಲಮನ್ನಾ, ಬೆಂಬಲ ಬೆಲೆ, ಉದ್ಯೋಗ ಸೃಷ್ಟಿ, ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ… ಇವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಮೂಲಕ ದೇಶದ ಜನರಿಗೆ ನೀಡುತ್ತಿರುವ ಭರವಸೆಗಳ ಪ್ರಮುಖ ಅಂಶಗಳು.

ಲೋಕಸಭಾ ಚುನಾವಣೆಗೆ ಬೆರಳೆಣಿಕೆ ದಿನಗಳು ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಪಕ್ಷಗಳ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ನಡುವೆ ಇಂದು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ​ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮತದಾರರನ್ನು ಸೆಳೆಯಲು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

ರಾಜ್ಯಸಭಾ ಸದಸ್ಯ, ಕಾಂಗ್ರೆಸ್​ ವಕ್ತಾರ ಮತ್ತು ಕನ್ನಡಿಗ ರಾಜೀವ್​ ಗೌಡರಿಂದ ಕಾಂಗ್ರೆಸ್​ ಪ್ರಣಾಳಿಕೆಯ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿ ಇದನ್ನು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಬಿಡುಗಡೆ ಮಾಡಿದರು. ಈ ವೇಳೆ ಸೋನಿಯಾ ಗಾಂಧಿ, ಮನಮೋಹನ್​ ಸಿಂಗ್ ಸೇರಿದಂತೆ ಪಕ್ಷದ ಅನೇಕ ಗಣ್ಯರ ಉಪಸ್ಥಿತರಿದ್ದರು.

ಪ್ರಣಾಳಿಕೆ ಕುರಿತು ಕೈ ನಾಯಕರು ಹೇಳಿದ್ದಿಷ್ಟು…

ರಾಹುಲ್ ಗಾಂಧಿ:
1 ವರ್ಷದ ಹಿಂದೆ ನಾವು ಪ್ರಣಾಳಿಕೆಯ ಸಿದ್ಧತೆ ನಡೆಸಿದಾಗ ರಾಜೀವ್ ಗೌಡ, ಪಿ. ಚಿದಂಬರಂ ಅವರಿಗೆ ಮೊದಲೇ ತಿಳಿಸಿದ್ದೆ.
ರೂಮಿನೊಳಗೆ ಕುಳಿತು ಪ್ರಣಾಳಿಕೆ ಸಿದ್ಧಪಡಿಸುವುದು ಬೇಡ, ಜನರ ಮಧ್ಯೆ ಹೋಗಿ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಪ್ರಣಾಳಿಕೆ ಸಿದ್ಧಪಡಿಸೋಣ ಎಂದಿದ್ದೆ.
ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದೆ. ಆ ನಂಬಿಕೆಯನ್ನು ನಾವು ಉಳಿಸಿಕೊಳ್ಳುತ್ತೇವೆ.

ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಾಕುವುದಾಗಿ ಸುಳ್ಳು ಹೇಳಿದರು. ಆದರೆ, ನಾವು ಸುಳ್ಳು ಹೇಳಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ಆ ಕಾರಣದಿಂದಲೇ 1 ವರ್ಷದಿಂದ ಈ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ನೋಟು ಅಮಾನ್ಯೀಕರಣ, ಜಿಎಸ್​ಟಿ ಮೂಲಕ ಮೋದಿ ಜಾಮ್​ ಮಾಡಿರುವ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವುದು ನಮ್ಮ ಆದ್ಯತೆ.

3 ವರ್ಷದವರೆಗೆ ಭಾರತದ ಯುವಕರು ಉದ್ಯಮ ನಡೆಸುವುದಾದರೆ ಯಾವುದೇ ಅನುಮತಿ ಬೇಕಾಗಿಲ್ಲ.
ಈ ಯೋಜನೆಯನ್ನು ನಾವು ಜಾರಿಗೆ ತರುವ ಮೂಲಕ ಯುವಕರನ್ನು ಉದ್ಯಮದತ್ತ ಸೆಳೆಯಲಿದ್ದೇವೆ.

ರೈಲ್ವೆಗೆ ಹೇಗೆ ಪ್ರತ್ಯೇಕ ಬಜೆಟ್​ ಇರುತ್ತದೋ ಅದೇ ರೀತಿ ರೈತರಿಗೆ ಪ್ರತ್ಯೇಕ ಬಜೆಟ್​ ಮಂಡನೆ ಮಾಡಲಿದ್ದೇವೆ. ಇದು ನಮ್ಮ ಪಕ್ಷದ ಐತಿಹಾಸಿಕ ನಿರ್ಧಾರ
ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್​ಗಢ, ಪಂಜಾಬ್​ನಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿ ಸಾಲಮನ್ನಾ ಮಾಡಲಾಗಿದೆ. ನೀರವ್​ ಮೋದಿ, ಅನಿಲ್ ಅಂಬಾನಿ, ವಿಜಯ್​ ಮಲ್ಯನಂತವರು ಕೋಟ್ಯಂತರ ರೂ. ಸಾಲ ಮಾಡಿ ಶಿಕ್ಷೆಯಿಂದ ಬಚಾವಾಗುತ್ತಾರೆ. ಆದರೆ, ನಮ್ಮ ಬಡ ರೈತರು ಬ್ಯಾಂಕಿಂದ ಪಡೆದ ಸಾಲ ಕಟ್ಟಿಲ್ಲವೆಂದರೆ ಅವರನ್ನು ಅಪರಾಧಿಗಳೆಂದು ಘೋಷಿಸಲಾಗುತ್ತದೆ, ಜೈಲಿಗೆ ಹಾಕಲಾಗುತ್ತದೆ.

ವಿಶ್ವವಿದ್ಯಾಲಯಗಳು, ಐಐಟಿ, ಐಐಎಂನಂತಹ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಎಲ್ಲ ವರ್ಗದವರ ಕೈಗೆಟುಕುವಂತಾಗಬೇಕು
ಆ ನಿಟ್ಟಿನಲ್ಲಿ ಬಜೆಟ್​ನಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಿದ್ದೇವೆ.

ರಾಜೀವ್ ಗೌಡ:
‘ಕಾಂಗ್ರೆಸ್​ ಪಕ್ಷದ ಇತಿಹಾಸದಲ್ಲೇ ಇಂತಾ ಒಂದು ಪ್ರಣಾಳಿಕೆ ಹೊರಬಂದಿಲ್ಲ. ಈ ಬಾರಿಯ ಪ್ರಣಾಳಿಕೆಯನ್ನು ರೂಮಿನಲ್ಲಿ ಕುಳಿತು ಕಾಂಗ್ರೆಸ್​ ನಾಯಕರು ಬರೆದಿದ್ದಲ್ಲ. ರಾಹುಲ್​ ಗಾಂಧಿ ನಮಗೆ, ಜನರ ಬಳಿಗೆ ಹೋಗಿ ಕಷ್ಟಗಳನ್ನು ಆಲಿಸುವಂತೆ ಹೇಳಿದ್ದರು. ಅದರಂತೆ ಪ್ರಣಾಳಿಕೆ ರಚಿಸಿದ್ದೇವೆ.

ಪಿ. ಚಿದಂಬರಂ:
ನಮ್ಮ ದೇಶದ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರ ಸುರಕ್ಷತೆ ಈ ಪ್ರಣಾಳಿಕೆಯ ಮುಖ್ಯ ಅಂಶಗಳು. ಉದ್ಯೋಗ ಸೃಷ್ಟಿಯ ಭರವಸೆ ನೀಡಿ ಆಡಳಿತಕ್ಕೆ ಬಂದ ಎನ್​ಡಿಎ ಸರ್ಕಾರ ವಿಫಲವಾಗಿದೆ

ನರೇಂದ್ರ ಮೋದಿ ಸರ್ಕಾರದಲ್ಲಿ 4.70 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ರೈತರ ಸಂಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ನೀಡುವುದು ನಮ್ಮ ಮುಖ್ಯ ಗುರಿ. ಮಹಿಳೆಯರು ಉದ್ಯೋಗದ ಸ್ಥಳಗಳಲ್ಲಿ, ಮನೆಯಲ್ಲಿಯೂ ಸುರಕ್ಷವಾಗಿರಲು ಸಾಧ್ಯವಾಗದಂತೆ ಪರಿಸ್ಥಿತಿಯಿದೆ. ಈ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್​ ಪಕ್ಷದ ಪ್ರಣಾಳಿಕೆ ಪರಿಹಾರ.

Leave a Reply