ಈಶ್ವರಪ್ಪ ಪಂಚಾಯಿತಿ ಸದಸ್ಯ ಆಗಲೂ ನಾಲಾಯಕ್! ಸಚಿವ ಡಿಕೆಶಿ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

‘ಎಲುಬಿಲ್ಲದ ನಾಲಿಗೆ ಅಂತಾ ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈಶ್ವರಪ್ಪನವರ ಕೊಳಚೆ ನಾಲಿಗೆಗೆ ಯಡಿಯೂರಪ್ಪನವರೇ ಬ್ರೇಕ್​ ಹಾಕುತ್ತಾರೆ…’ ಇದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರ ವಿರುದ್ಧ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್​ ಕಿಡಿಕಾರಿದ ಪರಿ.

ನಿನ್ನೆ ಸಿಎಂ ಕುಮಾರಸ್ವಾಮಿಯವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಕೆ.ಎಸ್​. ಈಶ್ವರಪ್ಪ, ಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ನೆಗೆದು ಬೀಳುತ್ತಾರೆ. ಮೈತ್ರಿ ಸರ್ಕಾರವೂ ಉರುಳಿ ಬೀಳಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಬುಧವಾರ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್​ ಹೇಳಿದ್ದಿಷ್ಟು…

‘ಈಶ್ವರಪ್ಪನವರ ಹೇಳಿಕೆ ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ಸಂಸ್ಕೃತಿಯನ್ನು ನಾಲಿಗೆಯೇ ಹೇಳುತ್ತದೆ. ಕೆ.ಎಸ್​. ಈಶ್ವರಪ್ಪ ಪಂಚಾಯಿತಿ ಸದಸ್ಯ ಆಗಲೂ ನಾಲಾಯಕ್. ನೀಚ ನಾಲಿಗೆ ಇರುವವರು ಎಂದೂ ಗೆಲ್ಲಲು ಸಾಧ್ಯವಿಲ್ಲ.

ದೇಶವನ್ನು ಕಾಯುವುದು ಕಾಂಗ್ರೆಸ್ಸಿಗರ ರಕ್ತದಲ್ಲೇ ಬಂದಿದೆ. ಕಾಂಗ್ರೆಸ್ ಪಕ್ಷ ದೇಶವನ್ನು 60 ವರ್ಷ ಆಳಿದೆ. ನಮಗೆ ಆಡಳಿತ ನಡೆಸುವುದು ಗೊತ್ತು. ಇದುವರೆಗೂ ಸಾಕಷ್ಟು ಯೋಜನೆ ರೂಪಿಸಿ ಜನರ ಬದುಕನ್ನು ಹಸಿರಾಗಿಸಿದ್ದೇವೆ. ಈ ಬಾರಿ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಆರ್ಥ ಸಚಿವ ಪಿ. ಚಿದಂಬರಂ ಸೇರಿ ಚರ್ಚಿಸಿ ಪ್ರಣಾಳಿಕೆ ರಚಿಸಿದ್ದಾರೆ. ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಲಾಗಿದೆ.

ಬಿಜೆಪಿಯವರು ಅಚ್ಚೇ ದಿನ್ ಎನ್ನುತ್ತಾರೆ. ಆ ಅಚ್ಚೇ ದಿನ್ ಯಾರಿಗೆ ಬಂದಿದೆ? ಜನರನ್ನು ಪಕೋಡ ಮಾರಿ ಎನ್ನುತ್ತಾರೆ. ಜನರು ಸ್ವಾಭಿಮಾನದಿಂದ ಬದುಕುವಂತಾಗಬೇಕು. ಬಿಜೆಪಿ ಸರ್ಕಾರ ಬಂದ ಮೇಲೆ ರೈತರು, ಉದ್ಯಮಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಡವರು ಬದುಕಲು ಆಗದ ಸ್ಥಿತಿ ನಿರ್ಮಾಣವಾಗಿದೆ. ದೇಶ ದಿವಾಳಿಯಾಗುವ ಸ್ಥಿತಿಗೆ ತಲುಪಿದೆ. ರಾಜಕಾರಣಕ್ಕಾಗಿ ದೇಶದ ಭದ್ರತೆಯನ್ನು ಬಿಟ್ಟುಕೊಡುವ ಮಾತೇ ಇಲ್ಲ.’

Leave a Reply