ಮಂಡ್ಯ ಬಂಡಾಯ ಶಮನಕ್ಕೆ ರೆಡಿಯಾಗಿದೆ ಮಾಸ್ಟರ್ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸದೆ ಪಕ್ಷೇತರ ಅಭ್ಯರ್ಥಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದಾರೆ.

ಜೆಡಿಎಸ್ ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವುದನ್ನು ತಪ್ಪಿಸಬೇಕು‌ ಅನ್ನೋ ಕಾರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ತಡ ರಾತ್ರಿ ಸಭೆ ನಡೆಸಿದ್ರು. ನಾಗಮಂಗಲ ಮಾಜಿ ಶಾಸಕ ಚಲುವರಾಸ್ವಾಮಿ ಸೇರಿದಂತೆ ಮಂಡ್ಯ ಜಿಲ್ಲೆಯ ಮಾಜಿ ಶಾಸಕರು ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳು ಭಾಗಿಯಾಗಿದ್ರು. ಸಿದ್ದರಾಮಯ್ಯ ಎಷ್ಟೇ ಪರಿಪರಿಯಾಗಿ ಮನವೊಲಿಸಲು ಯತ್ನಿಸಿದರೂ ಮಂಡ್ಯ ಜಿಲ್ಲೆಯ ನಾಯಕರು ಸರಿದಾರಿಗೆ ಬರಲಿಲ್ಲ ಎನ್ನಲಾಗಿದೆ.

ಸಿದ್ದರಾಮಯ್ಯ ಸಂಧಾನದ ವೇಳೆ ಹಲವಾರು ವಿಚಾರಗಳು ಚರ್ಚೆಗೆ ಬಂದಿದ್ದು, ಮಂಡ್ಯದಲ್ಲಿ ಸ್ವಾಭಿಮಾನ ಬಿಟ್ಟು ಬೇರೆಯವರ ಬಳಿ ಹೋಗಿ ಗೆಲುವಿಗೆ ಮನವಿ ಮಾಡಲ್ಲ ಎಂದು ಸಿಎಂ ಹೇಳಿದ್ದಾರೆ. ಇಲ್ಲಿವರೆಗೂ ಸಿಎಂ ಕಾಂಗ್ರೆಸ್ ಮುಖಂಡರಾದ ನಮ್ಮನ್ನು ಕರೆದೇ ಇಲ್ಲ. ಹೀಗಿರುವಾಗ ಪ್ರಚಾರಕ್ಕೆ ಬರೋದು ಹೇಗೆ ಸಾರ್ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಪಕ್ಷ ಮಂಡ್ಯದಲ್ಲಿ ನಡೆಯುವ ಜಂಟಿ ಪ್ರಚಾರಕ್ಕಾದ್ರೂ ಬನ್ನಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಕೆಲವೊಂದು ಕಿವಿಮಾತುಗಳನ್ನೂ ಹೇಳಿದ್ದಾರಂತೆ.

ಒಂದು ವೇಳೆ ಮೈತ್ರಿ ಅಭ್ಯರ್ಥಿ ಗೆಲ್ಲಿಸದಿದ್ದರೆ ತಪ್ಪು ಸಂದೇಶ ಹೋಗುತ್ತೆ ಹಾಗಾಗಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಿ, ಜೆಡಿಎಸ್ ಅಭ್ಯರ್ಥಿನ್ನು ಬೆಂಬಲಿಸಿ ಎಂದ ತಾಕೀತು ಮಾಡಿದ್ದಾರೆ. ಸಿದ್ದರಾಮಯ್ಯ ಮಾತಿಗೆ ಚಲುವರಾಯಸ್ವಾಮಿ ಮತ್ತು ತಂಡ ಅಸಮಾಧಾನಗೊಂಡಿದೆ. ನಂತರ ಒಂದು ಬಾರಿಯಾದ್ರೂ ಸಿಎಂ ಕರೆದು ಮಾತಾಡಿದ್ರಾ? ಅವರಿಗೇ ಬೇಕಿಲ್ಲದ ಮೇಲೆ ಅದು ಏನಾಗುತ್ತೋ ಆಗಲಿ ಬಿಡಿ ಸಾರ್ ಎಂದು ದಬಾಯಿಸಿದ್ದಾರಂತೆ. ಈ ವೇಳೆ ಹಾಸನ, ಮೈಸೂರು, ಮಂಡ್ಯ, ತುಮಕೂರಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕಿದೆ. ಚುನಾವಣೆ ಮುಗಿಯುವರೆಗೂ ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದಿರಿ. ಆ ಬಳಿಕ ಎಲ್ಲವನ್ನೂ ಸರಿ ಮಾಡೋಣ ಎಂದಿದ್ದಕ್ಕೆ, ತಲೆಯಾಡಿಸುತ್ತ ಅಸಮಾಧಾನದಿಂದಲೇ ರೆಬೆಲ್ ಲೀಡರ್ಸ್ ಹೊರ ನಡೆದಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಮ್ಮೆ ಸಂಧಾನ..?
ಮೊದಲ ಸಂಧಾನದಲ್ಲಿ ಯಶಸ್ಸು ಕಾಣದ ಸಿದ್ದರಾಮಯ್ಯ ಮತ್ತೊಂದು ಸಂಧಾನ ಸಭೆ ನಡೆಸಲು ನಿರ್ಧಾರ ಮಾಡಲಾಗಿದ್ದು, ಆ ಸಭೆಗೂ ಮುನ್ನ ಸಿಎಂ ಕುಮಾರಸ್ವಾಮಿ ಜೊತೆ ಮಾತನಾಡಲಿದ್ದಾರೆ ಎನ್ನಲಾಗಿದೆ. ಸಾಧ್ಯವಾದರೆ ಮತ್ತೊಂದು ಸಂಧಾನ ಸಭೆಗೆ ಸಿಎಂ ಕುಮಾರಸ್ವಾಮಿ ಅವರನ್ನೇ ಕರೆಸಲು ಚಿಂತನೆ ನಡೆಸಲಾಗಿದೆ. ಒಮ್ಮೆ ಸಿಎಂ ಕುಮಾರಸ್ವಾಮಿ ಹಾಗೂ ಹಳೇ ಸ್ನೇಹಿತ ಚಲುವರಾಸ್ವಾಮಿ ಒಟ್ಟಿಗೆ ಕುಳಿತು ಮಾತನಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದ್ದು, ಕುಮಾರಸ್ವಾಮಿ ಕೂಡ ಈ ಸಂಧಾನದ ಪ್ರಸ್ತಾಪವನ್ನು ಒಪ್ಪಲಿದ್ದಾರೆ ಎನ್ನುತ್ತಿವೆ ಮೂಲಗಳು. ಅದೇನೆ ಆಗಲಿ ಬಿಜೆಪಿಯನ್ನು ರಾಜ್ಯ ಹಾಗೂ ದೇಶದಲ್ಲಿ ಕಟ್ಟಿಹಾಕುವ ಸಂಕಲ್ಪದೊಂದಿಗೆ ರಚನೆಯಾಗಿರುವ ಈ ಮೈತ್ರಿ ಎದುರಾಗಿರುವ ಸಮಸ್ಯೆಗಳಿಗೆ ಸಂಧಾನ ಸೂತ್ರವನ್ನು ಹೇಗೆ ಅಳವಡಿಸಿಕೊಳ್ಳುತ್ತೆ ಅನ್ನೋದು ಈಗ ಉಳಿದಿರುವ ಕತೂಹಲ.

Leave a Reply