ಮೈಸೂರಲ್ಲಿ ಬಗೆಹರಿದ ದೋಸ್ತಿಗಳ ಬಿಕ್ಕಟ್ಟು! ಬದಲಾಗಲಿದೆಯೇ ಪ್ರಚಾರದ ಚಿತ್ರಣ?

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಮಂಡ್ಯ ಹಾಗೂ ಮೈಸೂರು ಕ್ಷೇತ್ರಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರನ್ನು ಒಂದುಗೂಡಿಸುವುದೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೆ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಎರಡೂ ಪಕ್ಷಗಳ ಮುಖಂಡರಿಗೆ ಹಿರಿಯ ನಾಯಕರು, ಮೈತ್ರಿ ಅನಿವಾರ್ಯತೆ ಹಾಗೂ ಬಿಜೆಪಿ ಮಣಿಸುವ ಉದ್ದೇಶದ ಬಗ್ಗೆ ಬುದ್ಧಿವಾದ ಹೇಳಿದ ಪರಿಣಾಮ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒಂದಾಗಿ ಕೆಲಸ ಮಾಡಲು ಒಪ್ಪಿದ್ದಾರೆ.

ಪರಿಣಾಮ ದೋಸ್ತಿ ನಾಯಕರಿಗೆ ಎದುರಾಗಿದ್ದ ಭಿನ್ನಮತದ ಸಮಸ್ಯೆ ಬಗೆಹರಿದಿದೆ. ಇದು ಸಹಜವಾಗಿ ಈ ಎರಡೂ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಹಾದಿ ಸುಗಮವಾಗಲಿದೆ.

ಇಷ್ಟು ದಿನಗಳ ಕಾಲ ಕಾಂಗ್ರೆಸ್ ಜೆಡಿಎಸ್ ಪರಸ್ಪರ ಕಾದಾಟದಿಂದ ಮತಗಳು ವಿಭಜನೆಯಾಗಿ ಆದರ ಲಾಭ ಬಿಜೆಪಿಗೆ ಸಿಗುತ್ತಿತ್ತು. ಇದನ್ನು ಅರಿತಿರುವ ಕಾರಣ ದೋಸ್ತಿ ನಾಯಕರುಗಳು ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ‌ ಕಣಕ್ಕೆ ಇಳಿದಿರುವ ಸುಮಲತಾಗೆ ಬಿಜೆಪಿ ಬೆಂಬಲ ಘೋಷಣೆ ಮಾಡಿದ್ದು, ಕಾಂಗ್ರೆಸ್, ಜೆಡಿಎಸ್ ಒಡಕಿನಿಂದ ಸುಮಲತಾ ಬಲ ಹೆಚ್ಚಾಗುವ ಲಕ್ಷಣಗಳು ಗೋಚರಿಸಿತ್ತು. ಅದೇ ರೀತಿ ಮೈಸೂರು ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಪರ ಜೆಡಿಎಸ್ ಭಿನ್ನಾಭಿಪ್ರಾಯ ಬಿಜೆಪಿ‌ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಹಾದಿ ಸುಗಮವಾಗುತ್ತಿತ್ತು. ಈ ಎಲ್ಲ ಮುನ್ಸೂಚನೆ ಅರಿತ ಕಾಂಗ್ರೆಸ್ ಜೆಡಿಎಸ್ ನಾಯಕರು ತಮ್ಮ ಸ್ಥಳೀಯ ನಾಯಕರಿಗೆ ಕಿವಿಮಾತು ಹೇಳಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿನ್ನೆಯ ಸಭೆ ನಂತರ ಮೈಸೂರಿನಲ್ಲಿ ಪ್ರಚಾರಕ್ಕೆ ತೆರಳಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಮನಸ್ಸು ಮಾಡಿದ್ದಾರೆ. ನಿನ್ನೆ ಮಂಡ್ಯದಲ್ಲಿ ಪ್ರಚಾರ ನಡೆಸಿದ ಜಿ.ಟಿ ದೇವೇಗೌಡ, ಮೈತ್ರಿಯಲ್ಲಿ ಕೆಲವೊಂದು ಗೊಂದಲಗಳು ಇದ್ದವು. ಅವುಗಳನ್ನು ಸುಧಾರಿಸಿಕೊಂಡು ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಂದೆ ಹೋಗಲು ನಿರ್ಧರಿಸಿದ್ದೇವೆ. ಆದ್ರೆ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಹಳೆಯ ಕಹಿ ಘಟನೆ ಮರೆತು ನಿಖಿಲ್ ಬೆಂಬಲಿಸಲು ಸಿದ್ಧರಿಲ್ಲ. ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಜೊತೆ ಸ್ವತಃ ತಾನೇ ಮಾತನಾಡಿದ್ದು, ನಾವು ಈಗಾಗಲೇ ತುಂಬಾ ದೂರ ಸಾಗಿದ್ದೇವೆ ಹಾಗಾಗಿ ಬೆಂಬಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಮಂಡ್ಯದಲ್ಲಿ ಎಂಟು ಕ್ಷೇತ್ರಗಳ ಪೈಕಿ ಎಂಟರಲ್ಲೂ ಜೆಡಿಎಸ್‌ಗೆ ಕಾಂಗ್ರೆಸ್ ನಿಂದ ಬೆಂಬಲ ಸಿಗುತ್ತಿಲ್ಲ’ ಎಂದಿದ್ದಾರೆ.

ಮೈಸೂರಿನಲ್ಲಿ ಜೆಡಿಎಸ್ ನಾಯಕರು ಬೆಂಬಲ ನೀಡುವ ಹೇಳಿಕೆ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಕೂಡ ಅಲರ್ಟ್ ಆಗಿದ್ದು, ಮಂಡ್ಯದಲ್ಲಿ ನಾಯಕರ ನಡುವೆ ಇರುವ ಅಸಮಾಧಾನ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ಹೈಕಮಾಂಡ್ ಸ್ವತಃ ಬಂಡಾಯ ಶಮನಕ್ಕೆ ಮುಂದಾಗಿದ್ದು, ಮಂಡ್ಯದಲ್ಲಿ ಎಲ್ಲಾ ನಾಯಕರನ್ನು ಕರೆದು ಮಾತನಾಡುವಂತೆ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಿದೆ.

ಹೀಗಾಗಿ ಸಿದ್ದರಾಮಯ್ಯ ಮಂಡ್ಯದಲ್ಲಿ ಕಳೆದ ಬಾರಿ ಸೋಲನ್ನಪ್ಪಿದ ಎಲ್ಲಾ ಎಂಟು ಕ್ಷೇತ್ರಗಳ ಅಭ್ಯರ್ಥಿಗಳನ್ನು ಸಭೆಗೆ ಆಹ್ವಾನ ಮಾಡಿದ್ದು, ಇಂದಿನಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಪ್ರವಾರ ಸಭೆಗಳು ನಡೆಯುವ ಸಾಧ್ಯತೆಗಳಿವೆ.

Leave a Reply