ರಾಹುಲ್ ಗಾಂಧಿ ದಕ್ಷಿಣದ ವಯನಾಡಿಗೆ ಬಂದಿರೋದೇಕೆ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಅಮೇಥಿ ಜತೆಗೆ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದುವರೆಗೂ ಉತ್ತರ ಪ್ರದೇಶದ ಅಮೇಥಿಯಿಂದ ರಾಹುಲ್ ಸ್ಪರ್ಧಿಸಿದ್ರೆ, ತಾಯಿ ಸೋನಿಯಾ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿದ್ರು. ಆದ್ರೆ ಈ ಬಾರಿ ಕರ್ನಾಟಕದಿಂದಲೇ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದರೆ ಅಂತಿಮವಾಗಿ ಕೇರಳದ ವಯನಾಡಿನಿಂದ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ರಾತ್ರಿಯೇ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಕೇರಳಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರನ್ನು ನೂರಾರು ಬೆಂಬಲಿಗರು ಸ್ವಾಗತ ಮಾಡಿದ್ರು. ಮಾಜಿ ಸಿಎಂ ಉಮನ್ ಚಾಂಡಿ ಕೂಡ ಹಾಜರಿದ್ರು.

ಉತ್ತರ ಭಾರತದಿಂದ ದಕ್ಷಿಣ ಭಾರತದತ್ತ ರಾಹುಲ್ ಆಗಮಿಸಲು ಕಾರಣ ಏನು? ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಮೂಡುತ್ತದೆ. ಇದಕ್ಕೆ ರಾಹುಲ್ ಅವರು ಕೊಡುವ ಉತ್ತರ, ‘ದಕ್ಷಿಣ ಭಾರತದ ಜನರ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಗೆತನ ಸಾಧಿಸುತ್ತಿದೆ. ಆ ಕಾರಣಕ್ಕಾಗಿ ನಾನು ದಕ್ಷಿಣ ಭಾರತದ ಜನರಿಗೆ ಬೆಂಬಲವಾಗಿ ಇರುತ್ತೇನೆ ಅನ್ನೋ ಸಂದೇಶ ನೀಡಲು ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದೇನೆ.’

ಆದ್ರೆ ಅಮೇಥಿಯಲ್ಲಿ‌ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಗೆಲುವು ಸಾಧಿಸುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಕೇರಳದ ಬೆಟ್ಟಗುಡ್ಡಗಳ ಕ್ಷೇತ್ರ ವಯನಾಡಿಗೆ ಪಲಾಯನ ಮಾಡಿದ್ದಾರೆ ಎಂದು ಬಿಜೆಪಿಗರು ಲೇವಡಿ ಮಾಡುತ್ತಿದ್ದಾರೆ. ವಯನಾಡಿನಲ್ಲಿ ಬಹುತೇಕ ಬುಡಕಟ್ಟು ಜನಾಂಗ ವಾಸವಿದ್ದು ರಾಹುಲ್ ಗೆಲುವು ಸಲೀಸು ಅನ್ನೋ ಲೆಕ್ಕಾಚಾರ ಇದೆ. ಆದ್ರೆ ಕಾಂಗ್ರೆಸ್ ಮಾತ್ರ ವಯನಾಡು ಕೇರಳದಲ್ಲಿ ಇದ್ದರೂ ತಮಿಳುನಾಡು ಹಾಗೂ ಕರ್ನಾಟಕದ ಜೊತೆ ಗಡಿ ಹಂಚಿಕೊಳ್ಳುತ್ತದೆ. ಹೀಗಾಗಿ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗುವ ಲೆಕ್ಕಾಚಾರ ಇದೆ ಎಂದು ತಿಳಿಸುತ್ತಿದೆ.

ಅತ್ತ ರಾಹುಲ್ ಗಾಂಧಿ ಗೈರು ಹಾಜರಿಯಲ್ಲಿ ಎರಡು ದಿನಗಳ ಅಮೇಥಿ ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಹುಲ್ ಗಾಂಧಿ 2004 ರಿಂದ ಅಮೇಥಿಯಲ್ಲಿ ಆಯ್ಕೆಯಾದರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಈಗ ವಯನಾಡಿನಿಂದ ನಾಮಪತ್ರ ಸಲ್ಲಿಸುವ ಮೂಲಕ ಅಮೇಥಿ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. 2014 ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲನ್ನಪ್ಪಿದ ಬಳಿಕ ಕ್ಷೇತ್ರದೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಸ್ಮೃತಿ ಇರಾನಿ, ಕಳೆದ ತಿಂಗಳಷ್ಟೇ ರೈಫಲ್ ಕಾರ್ಖಾನೆಗೆ ಮೋದಿ ಕೈಯಿಂದ ಅಡಿಗಲ್ಲು ಹಾಕಿಸಿದ್ರು.

ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡುವುದರಲ್ಲಿ ತಪ್ಪಿಲ್ಲ. ಆದ್ರೆ ವಯನಾಡಿನಿಂದ ಸ್ಪರ್ಧೆ ಮಾಡುವ ಮೂಲಕ ಅಮೇಥಿ ಜನರಿಗೆ ಅವಮಾನ ಮಾಡಿದ್ದಾರೆ, ಸೋಲುವ ಭೀತಿಯಿಂದ ಕೇರಳಕ್ಕೆ ಓಡಿಹೋಗಿದ್ದಾರೆ ಎಂದು ಲೇವಡಿ ಮಾಡಿ ರಾಜಕೀಯ ಲಾಭ ಗಳಿಸಲು ಮುಂದಾಗಿರುವುದು ಸರಿಯಲ್ಲ, ದೇಶದ ಪ್ರಜೆಯಾದವರು ದೇಶದ ಯಾವುದೇ ಮೂಲೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಸಂವಿಧಾನ ಕೊಟ್ಟಿದೆ ಎಂಬುದು ವಿಶ್ಲೇಷಕರ ವಾದ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ತುಂಬೆಲ್ಲಾ ಅಡ್ಡಾಡುತ್ತಾ ಬಿಜೆಪಿ ಗೆಲುವಿಗೆ ಶ್ರಮಿದ ಅಂದಿನ ನರೇಂದ್ರ ಮೋದಿ, ಗುಜರಾತ್‌ನ ವಢೋದರ ಹಾಗೂ ಉತ್ತರ ಪ್ರದೇಶದ ವಾರಣಸಿಯಿಂದ ಸ್ಪರ್ಧೆ ಮಾಡಿದ್ರು. ಆ ಬಳಿಕ ವಢೋದರಕ್ಕೆ ರಾಜೀನಾಮೆ ಸಲ್ಲಿಸಿ, ಉತ್ತರ ಪ್ರದೇಶದ ವಾರಣಸಿ ಉಳಿಸಿಕೊಂಡಿದ್ದರು. ಸ್ಮೃತಿ ಇರಾನಿ ಅವರ ವಾದವನ್ನು ಗಂಭೀರವಾಗಿ ಪರಿಗಣಿಸಬೇಕಾದರೆ ಅಂದು ಮೋದಿ ನಡೋದರಾಕ್ಕೆ ರಾಜೀನಾಮೆ ನೀಡಿ ಅಲ್ಲಿನ ಜನರಿಗೆ ಅಪಮಾನ ಮಾಡಿದಂತೆ ಆಗುವುದಿಲ್ಲವೇ? ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಒಟ್ಟಾರೆ ರಾಹುಲ್ ಉತ್ತರ ಹಾಗೂ ದಕ್ಷಿಣದ ಕ್ಷೇತ್ರದಿಂದ ಸ್ಪರ್ಥಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಗೆಲವು ಸೋಲಿನ ಲೆಕ್ಕಾಚಾರವನ್ನು ಮತದಾರ ನಿರ್ಧಾರ ಮಾಡುತ್ತಾನೆ.

Leave a Reply