ಮತ ಕೇಳಲು ಹೋದ ಸಂಸದೆ ಶೋಭಾಗೆ ತೀವ್ರ ಮುಜುಗರ!

ಡಿಜಿಟಲ್ ಕನ್ನಡ ಟೀಮ್:

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದೆ ಶೋಭಾ ಕರಂದ್ಲಾಜೆಗೆ ಮತ್ತೊಮ್ಮೆ ಮಜುಗರವಾಗಿದೆ.

ಮತ ಕೇಳಲು ಹೋದ ಕಡೆಯಲ್ಲೇಲ್ಲಾ ಗ್ರಾಮದ ನಿವಾಸಿಗಳು ಹಾಲಿ ಸಂಸದೆಗೆ ಘೇರಾವ್​ ಹಾಕುತ್ತಿದ್ದಾರೆ. ಇದು ಸಹಜವಾಗಿಯೇ ಬಿಜೆಪಿ ಅಭ್ಯರ್ಥಿಗೆ ಇರಿಸು ಮರಿಸು ತಂದಿದೆ.

ಬುಧವಾರ ಕಡೂರಿನ ಬಿದರೆ ಗ್ರಾಮಸ್ಥರು ಶೋಭಾ ಅವರಿಗೆ ಘೇರಾವ್​ ಹಾಕಿದ್ದರು. ಇದರ ಬೆನ್ನಲ್ಲೆ ಗುರುವಾರ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮಸ್ಥರು ಘೇರಾವ್​ ಹಾಕಿದ್ದಾರೆ.

ಪ್ರಚಾರಕ್ಕಾಗಿ ಬೆಂಬಲಿಗರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಹಿರೇಗೌಜ ಗ್ರಾಮಕ್ಕೆ ಆಗಮಿಸಿದರು. ಆಗ ಗ್ರಾಮಸ್ಥರು, ‘ನಮಗೆ ಮೊದಲು ನೀರು ಕೊಟ್ಟು ಗ್ರಾಮಕ್ಕೆ ಕಾಲಿಡಿ’ ಎಂದು ತರಾಟೆಗೆ ತೆಗೆದುಕೊಂಡರು.

ಅಷ್ಟೇ ಅಲ್ಲ… “ಇಷ್ಟು ದಿನ ಎಲ್ಲಿದ್ರಿ ಶೋಭಾ, ಮತ ಕೇಳಲು ನಿಮಗೆ ಯಾವ ನೈತಿಕತೆ ಇದೆ. ನೀರು ಕೊಡದಿದ್ದರೆ ಯಾರಿಗೂ ವೋಟ್ ಹಾಕಲ್ಲ,” ಎಂದು ಸ್ಥಳೀಯರು ಶೋಭಾ ಕರಂದ್ಲಾಜೆ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ವೇಳೆ ಬಿಜೆಪಿ ನಾಯಕರು ಸಂಸದೆ ಪರ ವಕಾಲತ್ತು ವಹಿಸಿಕೊಳ್ಳಲು ಮುಂದಾದ ಪರಿಣಾಮ ಗ್ರಾಮಸ್ಥರು ಹಾಗೂ ಬಿಜೆಪಿ ಮುಖಂಡರೊಂದಿಗೆ ವಾಗ್ವಾದ ಕೂಡ ನಡೆಯಿತು. ಶೋಭಾ ಅವರ ಜೊತೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಬಿಜೆಪಿ ಮಾಜಿ ಸದಸ್ಯ ಕಲ್ಮರುಡಪ್ಪಗೆ ಗ್ರಾಮದ ಜನರು ತರಾಟೆಗೆ ತೆಗೆದುಕೊಂಡರು.

ಗ್ರಾಮಸ್ಥರ ಆಕ್ರೋಶ ಕಂಡು ಕಾರಿನಿಂದ ಕೆಳಗೆ ಇಳಿಯದ ಶೋಭಾ ಕರಂದ್ಲಾಜೆ, ಮುಜುಗರ ತಪ್ಪಿಸಿಕೊಳ್ಳಲು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

Leave a Reply