ಮೈಸೂರಲ್ಲಿ ಸೋತರೆ ನಾವು ಹೊಣೆಯಲ್ಲ: ಜಿಟಿ ದೇವೇಗೌಡ

ಡಿಜಿಟಲ್ ಕನ್ನಡ ಟೀಮ್:

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸೋತರೆ ಅದಕ್ಕೆ ಜೆಡಿಎಸ್ ಹೊಣೆಯಲ್ಲ ಎಂಬ ಪ್ರೌಢ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರ ಹೇಳಿಕೆ ಮೈಸೂರಿನಲ್ಲಿ ಮೈತ್ರಿ ಇನ್ನು ಗಟ್ಟಿಯಾಗಿಲ್ಲ ಎಂಬುದನ್ನು ಬಹಿರಂಗ ಪಡಿಸಿದೆ.

ಮೈಸೂರಿನಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು. ಮುಖಂಡರು ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದರೂ ಕಾರ್ಯಕರ್ತರು ಸುಮ್ಮನಾಗಿಲ್ಲ. ಈ ವೇಳೆ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ ಹೇಳಿದ್ದಿಷ್ಟು..,

‘ಮೈಸೂರು -ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಅದಕ್ಕೆ ನಾವು ಹೊಣೆಯಲ್ಲ, ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿಶ್ವನಾಥ್ ಸೋತಿದ್ದರು. ಆಗ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತರಾ?’

ಈ ಮಧ್ಯೆ ಜಿಟಿ ದೇವೇಗೌಡ ಅವರ ಸಭೆಯಲ್ಲಿ ಮೋದಿ ಪರ ಘೋಷಣೆ ಕೂಗಲಾಗಿದೆ ಎಂಬ ವರದಿಗಳು ಬಂದಿವೆ.

ಈ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ಏಪ್ರಿಲ್ 7ರಂದು ಕಾಂಗ್ರೆಸ್ ಜೆಡಿಎಸ್ ನಾಯಕರು ಜಂಟಿ ಪತ್ರಿಕಾಗೋಷ್ಠಿ ಮಾಡುತ್ತೇವೆ. ಮೈಸೂರಿನಲ್ಲಿ ಇಬ್ಬರು ಒಟ್ಟಾಗಿ ಪ್ರಚಾರ ಮಾಡುತ್ತೇವೆ. ಈ ವಿಚಾರವಾಗಿ ಜಿಟಿ ದೇವೇಗೌಡ ಅವರ ಜೊತೆ ಚರ್ಚಿಸುತ್ತೇನೆ’ ಎಂದರು.

ಇನ್ನು ಶುಕ್ರವಾರ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದು, ಈ ಸಭೆ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ.

Leave a Reply