ಮೈತ್ರಿಧರ್ಮ ಪಾಲಿಸಿ ಇಲ್ಲ ಪಕ್ಷ ಬಿಡಿ: ಮಂಡ್ಯ ನಾಯಕರಿಗೆ ಸಿದ್ದು ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್:

ಮೊದಲ ಹಂತದ ಚುನಾವಣೆಗೆ ಉಳಿದಿರುವುದು ಇನ್ನು 10 ದಿನ ಮಾತ್ರ. ಆದರೂ ಮಂಡ್ಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡುತ್ತಿಲ್ಲ. ಹೀಗಾಗಿ ನಿಖಿಲ್ ಪರ ಪ್ರಚಾರ ಮಾಡಿ ಮೈತ್ರಿ ಧರ್ಮ ಪಾಲಿಸಿ ಇಲ್ಲವೇ ಪಕ್ಷ ಬಿಟ್ಟು ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ತಲೆದೋರಿರುವ ಬಂಡಾಯ ಶಮನ ಮಾಡುವಲ್ಲಿ ಕೈ ನಾಯಕರು ಹೈರಾಣಾಗಿದ್ದು, ಸ್ಥಳೀಯ ಕಾಂಗ್ರೆಸ್ ನಾಯಕರು ನಿಖಿಲ್ ಬದಲಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ವರಿಷ್ಠರ ಕಣ್ಣು ಕೆಂಪಾಗಿಸಿದೆ.

ಈ ಬಂಡಾಯ ಶಮನ ಜವಾಬ್ದಾರಿಯನ್ನು ಹೈಕಮಾಂಡ್ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಿದ್ದು, ಈ ವರೆಗೂ ಎರಡು ಮೂರು ಸುತ್ತಿನ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇಂದು ಕೂಡ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ.

ಹಳೆ ದ್ವೇಷ ಮರೆತು ಮೈತ್ರಿ ಅಭ್ಯರ್ಥಿ ನಿಖಿಲ್​​ ಪರವಾಗಿ ಕೆಲಸ ಮಾಡುವಂತೆ ನಿನ್ನೆಯ ಸಭೆಯಲ್ಲಿ ಸಿದ್ದರಾಮಯ್ಯನವರು ಮಂಡ್ಯ ಜಿಲ್ಲೆಯ ಮುಖಂಡರಿಗೆ ಸಭೆ ನಿರ್ದೇಶನ ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು… ‘ನಾವು ಮೈತ್ರಿ ಅಭ್ಯರ್ಥಿಯನ್ನು ಒಮ್ಮತದಿಂದ ಬೆಂಬಲಿಸಬೇಕಿದೆ. ಯಾವುದೇ ಕಾರಣಕ್ಕೂ ನೀವು ಸುಮಲತಾ ಪರವಾಗಿ ಪ್ರಚಾರ ಮಾಡಬಾರದು. ಮಂಡ್ಯದಲ್ಲಿ ನೀವು ಜೆಡಿಎಸ್​​ ನೊಂದಿಗೆ ಸೇರಿ ಮೈತ್ರಿ ಅಭ್ಯರ್ಥಿಗೆ ಪ್ರಚಾರ ಮಾಡಬೇಕು.

ಸುಮಲತಾ ಪ್ರಚಾರದ ವೇಳೆ ಕಾಂಗ್ರೆಸ್​ ಬಾವುಟ ಪ್ರದರ್ಶಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಮೈತ್ರಿಗೆ ಪೆಟ್ಟು ಬೀಳಲಿದೆ. ನಾವು ಎಷ್ಟು ಬಾರಿ ನಿಮಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಇನ್ನೊಮ್ಮೆ ಹೀಗಾದರೇ ನಾವು ಪಕ್ಷದಿಂದ ನಿಮ್ಮನ್ನು ಕಿತ್ತೊಗೆಯಲಾಗುವುದು.’

Leave a Reply