ಮಂಡ್ಯ ನಾಯಕರ ಜತೆ ಮತ್ತೊಂದು ಸಭೆ! ಸಮಸ್ಯೆ ಬಗೆಹರಿಸುತ್ತಾರಾ ಸಿದ್ದರಾಮಯ್ಯ!?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಭಾರಿ ಸದ್ದು ಮಾಡುತ್ತಿರುವುದು ಮಂಡ್ಯ ಕ್ಷೇತ್ರ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ನ ನಿಖಿಲ್​​ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​​ ನಡುವಣ ಸ್ಪರ್ಧೆ ಎಲ್ಲರ ಗಮನ ಸೆಳೆದಿದೆ. ಈ ಮಧ್ಯೆ ನಿಖಿಲ್ ಪರ ಸ್ಥಳೀಯ ಕಾಂಗ್ರೆಸ್ ನಾಯಕರ ಬಂಡಾಯ ಪಕ್ಷದ ಹಿರಿಯ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಮಂಡ್ಯ ಕಾಂಗ್ರೆಸ್ ನಾಯಕರ ಜತೆ ಇಂದು ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ.

ಮೈತ್ರಿಯಾಗಿದ್ದರೂ ಸ್ಥಳೀಯ ಕಾಂಗ್ರೆಸ್ಸಿಗರು ನಿಖಿಲ್​​​ ಪರ ಕೆಲಸ ಮಾಡದೆ, ಬಹಿರಂಗವಾಗಿಯೇ ಸುಮಲತಾರಿಗೆ ಬೆಂಬಲ ನೀಡುತ್ತಿದ್ದಾರೆ. ಇದು ಮೈತ್ರಿ ಧರ್ಮಕ್ಕೆ ವಿರುದ್ಧವಾಗಿದ್ದು, ಇದರಿಂದ ಭವಿಷ್ಯದಲ್ಲಿ ಪಕ್ಷಕ್ಕೆ ಎದುರಾಗಬಹುದಾದ ತೊಂದರೆಗಳನ್ನು ಕೈ ನಾಯಕರು ಅರಿತಿದ್ದಾರೆ. ಇದೇ ಕಾರಣಕ್ಕಾಗಿ ಮಂಡ್ಯ ಕಾಂಗ್ರೆಸ್ ನಾಯಕರ ಮನವೊಲಿಸುವ ಹೊಣೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ.

ಈಗಾಗಲೇ ಸಾಕಷ್ಟು ಭಾರಿ ಸಿದ್ದರಾಮಯ್ಯ ಸಭೆ ನಡೆಸಿದ್ದರೂ ಮಂಡ್ಯ ನಾಯಕರು ಜಗ್ಗುತ್ತಿಲ್ಲ. ಇದೇ ಕಾರಣಕ್ಕೆ ಮೊನ್ನೆ ನಡೆದ ಸಭೆಯಲ್ಲಿ ಪಕ್ಷದ ವಿರುದ್ಧವಾಗಿ ನಡೆಯುವುದಾದರೆ ಪಕ್ಷ ಬಿಡಿ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

ಮಂಡ್ಯ ಸಮಸ್ಯೆ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಒಂದೆಡೆ ಮೈತ್ರಿ ಧರ್ಮ ಪಾಲಿಸಿ ನಿಖಿಲ್ ಗೆಲ್ಲಿಸುವುದು ಮತ್ತೊಂದೆಡೆ ಜೆಡಿಎಸ್ ವಿರುದ್ಧ ಮುನಿಸಿಕೊಂಡು ಸುಮಲತಾಗೆ ಜೈಕಾರ ಹಾಕುತ್ತಿರುವ ತಮ್ಮ ಪಕ್ಷದ ಸ್ಥಳೀಯ ನಾಯಕರ ಮನವೋಲೈಸುವುದು ಅಗತ್ಯವಾಗಿದೆ. ಮಂಡ್ಯದಲ್ಲಿ ಈಗಾಗಲೇ ಜೆಡಿಎಸ್ ಪ್ರಾಬಲ್ಯ ಸಾಧಿಸಿದೆ. ಈ ವೇಳೆ ಸ್ಥಳೀಯ ನಾಯಕರನ್ನು ಕಳೆದುಕೊಂಡರೆ ಮಂಡ್ಯದಲ್ಲಿ ಕಾಂಗ್ರೆಸ್ ನಿಯಂತ್ರಣ ಸಂಪೂರ್ಣ ಕೈತಪ್ಪುವ ಆತಂಕ ಎದುರಾಗಿದೆ. ಸ್ಥಳೀಯ ನಾಯಕರನ್ನು ಸಮಾಧಾನ ಪಡಿಸದಿದ್ದರೆ ಮೈತ್ರಿ ಧರ್ಮ ಪಾಲನೆ ಮಾಡದ ಅಪವಾದ ಹೊರಬೇಕಾಗುತ್ತದೆ. ಹೀಗಾಗಿ ಕಾಂಗ್ರೆಸ್ ಗೆ ಇದು ಧರ್ಮ ಸಂಕಟವಾಗಿ ಪರಿಣಮಿಸಿದ್ದು, ಇದನ್ನು ಸಿದ್ದರಾಮಯ್ಯ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Leave a Reply