ರಾಫೆಲ್ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು! ಕೇಂದ್ರಕ್ಕೆ ಹಿನ್ನಡೆ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿರುವ ರಾಫೆಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ವಿಚಾರಣೆ ರದ್ದುಗೊಳಿಸುವ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಇದು ಬಿಜೆಪಿ ಹಾಗೂ ಕೇಂದ್ರಕ್ಕೆ ಹಿನ್ನಡೆಯಾಗಿದೆ.

ರಫೇಲ್​ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ಇಂದು ಕೇಂದ್ರ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ರಫೇಲ್​ ಒಪ್ಪಂದ ಕುರಿತು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇಂದು ಸುಪ್ರೀಂ ವಜಾಗೊಳಿಸಿದೆ.

ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೋಯ್​ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಬುಧವಾರ ಕೇಂದ್ರ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೆ ರಫೇಲ್​ ಒಪ್ಪಂದದ ರಹಸ್ಯ ಕಡತಗಳ ಪರಿಶೀಲನೆ ನಡೆಸಲು ಒಪ್ಪಿಗೆ ನೀಡಿದೆ.

ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇರುವಂತೆ ಈ ತೀರ್ಪು ಹೊರಬಂದಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಯುದ್ಧ ವಿಮಾನ ಪ್ರಕರಣ ಸಂಬಂಧ ಈ ಮೊದಲು ರಕ್ಷಣಾ ಸಚಿವರು ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದರು. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ಸೂಕ್ಷ್ಮ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸುವುದು ಸೂಕ್ತವಲ್ಲ ಎಂದು ಅಫಿಡವಿಟ್​ನಲ್ಲಿ ವಿವರಿಸಿದ್ದರು.

ಅಟಾರ್ನಿ ಜನರಲ್​ ಕೆ.ಕೆ.ವೇಣುಗೋಪಾಲ್ ಕೇಂದ್ರದ ಪರ ವಾದ ಮಂಡಿಸಿದರೆ , ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗಳ ಪರ ಪ್ರಶಾಂತ್ ಭೂಷಣ್ ವಾದ ಮಾಡಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಮಾರ್ಚ್​ 14ರಂದು ಆದೇಶವನ್ನು ಕಾಯ್ದಿರಿಸಿ ಇಂದು ಪ್ರಕಟಿಸಿದೆ.

Leave a Reply