ಬಳ್ಳಾರಿಯಲ್ಲಿ ಮತ್ತೇ ವರ್ಕೌಟ್ ಆಗಿದೆ ಡಿಕೆಶಿ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್:

ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಗೆ ಈ ಬಾರಿ ಆಂತರಿಕ ನಾಯಕರ ಮುನಿಸು ಸವಾಲಾಗಿದೆ. ಇದು ಪಕ್ಷಕ್ಕೆ ಹೊಡೆತ ನೀಡಲಿದೆ ಎಂಬ ಚರ್ಚೆ ಆರಂಭವಾಗುತ್ತಿರುವಾಗಲೇ ಜಿಲ್ಲೆ ಉಸ್ತುವಾರಿ ಹೊತ್ತಿರುವ ಸಚಿವ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಅನ್ನು ಪ್ರಯೋಗಿಸಿದ್ದಾರೆ.

ಹೌದು, ಒಂದೆಡೆ ಶಾಸಕ ನಾಗೇಂದ್ರ ಅತೃಪ್ತಿ, ಮತ್ತೊಂದೆಡೆ ಆನಂದ್ ಸಿಂಗ್ ಹಾಗೂ ಗಣೇಶ್ ಕಿತ್ತಾಟ, ಸಚಿವ ಸ್ಥಾನ ಸಿಗದ ಮುನಿಸು… ಹೀಗೆ ಅನೇಕ ವಿಚಾರಗಳು ಬಳ್ಳಾರಿ ಕಾಂಗ್ರೆಸ್ ಅನ್ನು ಕಾಡುತ್ತಿವೆ. ಇವೆಲ್ಲವನ್ನೂ ನಿಭಾಯಿಸಿಕೊಂಡು, ಮೈತ್ರಿ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಅವರನ್ನು ಗೆಲ್ಲಿಸಿಕೊಂಡು ಬರುವ ಮಹತ್ತರ ಜವಾಬ್ದಾರಿ ಡಿಕೆ ಶಿವಕುಮಾರ್ ಅವರ ಮೇಲಿದೆ.

ಸದ್ಯ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಡಿಕೆ ಶಿವಕುಮಾರ್ ಪ್ರಯೋಗಿಸಿರುವ ಅಸ್ತ್ರ ಸಚಿವ ಸ್ಥಾನದ ರೋಟೇಶನ್. ಹೌದು, ಈಗಾಗಲೇ ತುಕಾರಂ, ಪಿ.ಟಿ.ಪರಮೇಶ್ವರ್ ನಾಯಕ್ ಅವರಿಗೆ ಸಚಿವ ಸ್ಥಾನವನ್ನೇನೋ ನೀಡಿದ್ದಾರೆ. ಆದರೆ, ಇದು ಶಾಶ್ವತವಲ್ಲ ಎನ್ನುವುದನ್ನು ಪ್ರಚಾರ ಸಭೆಗಳಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ.

ಈ ಸಚಿವರುಗಳು ತಮ್ಮ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗೆ ಹೆಚ್ಚು ಲೀಡ್ ತರಬೇಕು ಎಂಬ ಟಾಸ್ಕ್ ನೀಡಿದ್ದಾರೆ.

ಇನ್ನೇನು ಸಚಿವ ಸ್ಥಾನ ಸಿಕ್ಕಿದೆಯಲ್ಲ ಎಂದು ನಿರ್ಲಕ್ಷಿಸಿದರೆ ಸಚಿವ ಸ್ಥಾನಕ್ಕೆ ಧಕ್ಕೆಯಾಗುವ ಎಚ್ಚರಿಕೆ ರವಾನಿಸಿದ್ದಾರೆ. ಈ ಕುರಿತು ಹಡಗಲಿ ಪ್ರಚಾರ ಸಭೆಯಲ್ಲಿ ಸಚಿವ ಪಿ.ಟಿ.ಪರಮೇಶ್ವರ್ ಮುಂದೆಯೇ ಸೂಕ್ಷ್ಮವಾಗಿ ಮಾತನಾಡಿರುವ ಡಿಕೆಶಿ, ಪರಮೇಶ್ವರ್ ನಾಯಕ್ ಕ್ಷೇತ್ರದಾದ್ಯಂತ ಓಡಾಡಿ ಹೆಚ್ಚು ಲೀಡ್ ತರಬೇಕು ಎಂದು ಹೇಳಿದ್ದಾರೆ.

‘ಬಳ್ಳಾರಿ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ರೊಟೇಷನ್ ರೀತಿ ಕೊಡಲಾಗುವುದು’ ಎಂದು ಸಂಡೂರು ಸಭೆಯಲ್ಲಿ ಡಿಕೆಶಿ ಹೇಳಿರುವ ಮಾತು, ಸಚಿವಾಕಾಂಕ್ಷಿ ಕೈ ಶಾಸಕರಿಗೆ ಹೊಸ ಭರವಸೆ ಮೂಡಿಸಿದೆ. ತಮಗೆ ಸಚಿವ ಸ್ಥಾನದ ಮತ್ತೊಂದು ಚಾನ್ಸ್ ಸಿಗುವ ಸಾಧ್ಯತೆಗಳನ್ನು ಅರಿತಿರುವ ಶಾಸಕರುಗಳು ಚುರುಕಾಗಿದ್ದಾರೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ್, ಡಿಕೆಶಿ ನೀಡಿರುವ ಟಾಸ್ಕ್ ಗೆ ಒಪ್ಪಿಗೆ ಸೂಚಿಸಿದ್ದಾರೆ.

ಶಾಸಕ ಭೀಮಾನಾಯ್ಕ್ ಹಾಗೂ ನಾಗೇಂದ್ರ ಅವರನ್ನು ಡಿ.ಕೆ.ಶಿವಕುಮಾರ್ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ರೆಸಾರ್ಟ್‍ನಲ್ಲಿನ ಬಡಿದಾಟ ಪ್ರಕರಣದ ಕೈ ಶಾಸಕರಾದ ಆನಂದ್‍ಸಿಂಗ್ ಸಹ ಹೊಸಪೇಟೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಬಳ್ಳಾರಿಯ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕೈ ಶಾಸಕರ ಬಂಡಾಯ, ಅಸಮಾಧಾನಗಳಿಗೆ ಬ್ರೇಕ್ ಹಾಕಿ ಚುನಾವಣೆಯಲ್ಲಿ ಶಾಸಕರು ಶ್ರಮಿಸುವಂತೆ ಮಾಡುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.

Leave a Reply