ಸರ್ಕಾರ ಬೀಳಿಸಲು ಎಲ್ಲರೂ ಒಂದಾಗಿ ಪಿತೂರಿ ಮಾಡಿದ್ದಾರೆ! ಮಂಡ್ಯದಲ್ಲಿ ಸಿಎಂ ಆರೋಪ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ಮೂಲಕ ನಮ್ಮನ್ನು ಸೋಲಿಸಿ ಅತಂತ್ರ ಮಾಡಲು ಪಿತೂರಿ ನಡೆದಿದ್ದು, ಜತೆಗೆ ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಎಲ್ಲರೂ ಒಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಗೆಜ್ಜಲಗೆರೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು ಹೇಳಿದ್ದಿಷ್ಟು…

‘ನಿಖಿಲ್ ಸೋಲಿಸಬೇಕು ಮತ್ತು ಸರ್ಕಾರ ತೆಗೆಯಬೇಕೆಂದು ಎಲ್ಲ ಪಕ್ಷಗಳೂ ಒಗ್ಗೂಡಿವೆ. ತಮಗೆ ಕುತಂತ್ರ ರಾಜಕಾರಣ ಮಾಡುವ ಅಗತ್ಯವಿಲ್ಲ. ನಾವು ಯಾರನ್ನೂ ಹೆದರಿಸಿ ಚುನಾವಣೆ ಮಾಡುವುದಿಲ್ಲ. ಚುನಾವಣೆಯಲ್ಲಿ ಅನುಕಂಪ ಪಡೆಯಲು ಅವರವರೇ ಕಲ್ಲು ಹೊಡೆದುಕೊಂಡು ಆಸ್ಪತ್ರೆಗೆ ದಾಖಲಾಗಿ ನಮ್ಮ ವಿರುದ್ಧವೇ ಕುತಂತ್ರ ನಡೆಸಲು ಮುಂದಾಗಿದ್ದಾರೆ.

ಅವರ ಬಳಿ ಇದ್ದ ಅಸ್ತ್ರಗಳೆಲ್ಲ ಮುಗಿದುಹೋಗಿವೆ. ಹೀಗಾಗಿ ಇಂತಹ ಕುತಂತ್ರ ಮಾಡುತ್ತಿದ್ದು, ಮತದಾರರು ಕಿವಿಗೊಡಬಾರದು. ಎಲ್ಲ ಪಕ್ಷಗಳೂ ಒಟ್ಟಾಗಿ ನಮ್ಮ ವಿರುದ್ಧ ಕೆಲಸ ಮಾಡುತ್ತಿವೆ. ಎದುರಾಳಿಯ ಮನೆಯಲ್ಲಿ ಕೆಲಸ ಮಾಡುವವರಿಗೆ ನಾವು ಆಮಿಷವೊಡ್ಡಿದ್ದೇವೆ ಎಂಬ ಆರೋಪ ಮಾಡಲಾಗಿದೆ. ಅಂತಹ ಆಮಿಷವೊಡ್ಡಿಲ್ಲ.

ನಮ್ಮ ಕಡೆಯವರನ್ನು ಸೆಳೆದು ಸಿಂಗಾಪುರಕ್ಕೆ ಕಳುಹಿಸುತ್ತಾರೆ ಎಂಬ ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದ್ದು, ಅಂತಹ ಕೀಳುಮಟ್ಟದ ರಾಜಕೀಯವನ್ನು ಇದುವರೆಗೆ ಮಾಡಿಲ್ಲ.

ಪಕ್ಷೇತರ ಅಭ್ಯರ್ಥಿ ಒಂದು ಮುಖ ನೋಡಿದ್ದೀರ. ಇನ್ನೊಂದು ಮುಖವನ್ನು ನೋಡಬೇಕಾಗುತ್ತದೆ. ನಮ್ಮ ತಾಯಂದಿರು ಅವರು ಪ್ರಚಾರಕ್ಕೆ ಬಂದಾಗ ಇನ್ನೊಂದು ಮುಖ ತೋರಿಸುವಂತೆ ಕೇಳಬೇಕು.

ಬಿಜೆಪಿ ಬೆಂಬಲ ಪಡೆದು ಪಕ್ಷೇತರ ಅಭ್ಯರ್ಥಿ ಮತ ಯಾಚಿಸಲು ಬಂದಿದ್ದಾರೆ. ರೈತರಿಗೆ ಕಷ್ಟ ಬಂದಾಗ ಅವರು ಬಂದಿದ್ದರೇ? ಸದಾ ನಿಮ್ಮ ಜತೆ ಇದ್ದು ರೈತರು ಆತ್ಮಹತ್ಯೆಗೆ ಶರಣಾದಾಗ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮ ಕಷ್ಟಗಳಿಗೆ ನಾವು ಸ್ಪಂದಿಸಿದ್ದೇವೆ.

ಕಾವೇರಿ ಹೋರಾಟದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಸಚಿವ ಡಿ.ಸಿ.ತಮ್ಮಣ್ಣ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ರೈತರ ಸಾಲಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಈ ಎಲ್ಲ ಹಿನ್ನೆಲೆಯಲ್ಲಿ ನಮ್ಮನ್ನು ಕೈ ಹಿಡಿಯುತ್ತೀರೋ, ಬಿಡುತ್ತೀರೋ ಎಂಬುದನ್ನು ಯೋಚನೆ ಮಾಡಿ.

ಶಾಸಕರಿಗೆ ಕೋಟಿ ಕೋಟಿ ರೂ. ಆಮಿಷವೊಡ್ಡಿ ಸರ್ಕಾರ ತೆಗೆಯಲು ಪ್ರಯತ್ನ ಮಾಡಿದರು. ಅದು ಸಾಧ್ಯವಾಗಲಿಲ್ಲ. ಸರ್ಕಾರ ಅವಧಿ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಯಾರು ದುಡಿಮೆ ಮಾಡುತ್ತಾರೋ ಅವರಿಗೆ ಆಶೀರ್ವಾದ ಮಾಡಿ. ತಾವು ನೇರವಾಗಿ ಜನರಿಂದ ಆಯ್ಕೆಯಾಗಿ ಬಂದವರೇ ಹೊರತು ಕುತಂತ್ರ ರಾಜಕೀಯ ಮಾಡಿ ಗೊತ್ತಿಲ್ಲ. ರಾಮನಗರದ ಜನರು ರಾಜಕೀಯವಾಗಿ ಜನ್ಮ ನೀಡಿದ್ದಾರೆ. ಮಂಡ್ಯದ ಜನರೂ ಕೂಡ ಬೆಳೆಸಿದ್ದಾರೆ.

ನೀವು ತಮಗೆ ಆಶೀರ್ವಾದ ಮಾಡಿರುವ ಋಣ ತೀರಿಸಲು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ನಿಖಿಲ್ ಗೆಲ್ಲಿಸಬೇಕೆಂಬ ಉದ್ದೇಶದಿಂದ ಅಲ್ಲ.

ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ಅಂದುಕೊಂಡಿರಲಿಲ್ಲ. ಆದರೆ, ಇಲ್ಲಿನ ಶಾಸಕರ ಒತ್ತಾಯಕ್ಕೆ ಮಣಿದು ಚುನಾವಣೆಗೆ ನಿಲ್ಲಿಸಬೇಕಾಯಿತು. ಮೈ ಶುಗರ್ ಕಾರ್ಖಾನೆಯನ್ನು ಉಳಿಸಲು 450 ಕೋಟಿ ರೂ. ಹಣ ನೀಡಲು ತೀರ್ಮಾನಿಸಲಾಗಿದೆ. ಕಾಲುವೆಗಳ ಆಧುನೀಕರಣಕ್ಕಾಗಿ ಕಾವೇರಿ ನಿಗಮಕ್ಕೆ 6 ಸಾವಿರ ಕೋಟಿ ರೂ. ನೀಡಲಾಗಿದೆ.’

Leave a Reply