ಜೀನ್ಸ್ ನೋಡಿ ಟಿಕೆಟ್ ಕೊಡಲು ಆಗಲ್ಲ! ತೇಜಸ್ವಿನಿ ಬಗ್ಗೆ ಸಂತೋಷ್ ಮಾತಿನ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್:

ಜೀನ್ಸ್ ನೋಡಿ ಟಿಕೆಟ್ ನೀಡಲು ಆಗಲ್ಲ. ಹಾಗೆ ಟಿಕೆಟ್ ಕೊಟ್ಟರೆ ಅದಕ್ಕೆ ಬೆಲೆ ಇರೋದಿಲ್ಲ… ಇದು ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಆರ್ ಎಸ್ಎಸ್ ಮುಖಂಡ ಬಿಎಲ್ ಸಂತೋಷ್ ನೀಡಿರುವ ಸ್ಪಷ್ಟನೆ.

ಹೌದು, ತೇಜಸ್ವಿನಿ ಅವರ ಬದಲಿಗೆ ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿದ್ದು, ಇದರ ಹಿಂದೆ ಸಂತೋಷ್ ಅವರ ಲಾಭಿ ಇದೆ ಎಂಬ ಚರ್ಚೆ ವ್ಯಾಪಕವಾಗಿ ನಡೆದಿತ್ತು. ಈ ವಿಚಾರದ ಬಗ್ಗೆ ಈಗ ಸಂತೋಷ್ ತಮ್ಮ ವಾದ ಮಂಡಿಸಿದ್ದಾರೆ. ಚಾಮರಾಜನಗರದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ನಿರ್ಧಾರವನ್ನು ಸಮರ್ಥಿಕೊಂಡಿದ್ದು ಹೀಗೆ…

‘ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಕಟ್ಟಿದವರಲ್ಲಿ ದಿವಂಗತ ಅನಂತ್‍ಕುಮಾರ್ ಕೂಡ ಒಬ್ಬರು. ಹೀಗಾಗಿ ಅವರಿಗೆ ಏನು ಕ್ರೆಡಿಟ್ ಕೊಡಬೇಕೋ ಅದನ್ನು ಸಂಘ ಪರಿವಾರ ಹಿಂದಿನಿಂದಲೂ ಕೊಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಕೊಡುತ್ತದೆ. ಆದರೆ ಅದೇ ಕ್ರೆಡಿಟ್ ಅನ್ನು ಅವರ ಹೆಂಡತಿ ತೇಜಸ್ವಿನಿಗೂ ನೀಡಬೇಕು ಎಂದರೆ ಹೇಗೆ?.

20-30 ವರ್ಷ ಪಾರ್ಟಿ ರಾಜಕಾರಣದಲ್ಲಿ ಮುಂದುವರಿಯಲು ಸಾಮರ್ಥ್ಯ ಇರುವವರಿಗೆ ಟಿಕೆಟ್ ಕೊಟ್ಟಿದ್ದೇವೆ. ಸದ್ಯ ಟಿಕೆಟ್ ಪಡೆದವರು ತಮ್ಮ ಸಾಮರ್ಥ್ಯವನ್ನು ಮುಂದಿನ ಐದು ವರ್ಷಗಳಲ್ಲಿ ಸಾಬೀತು ಮಾಡಬೇಕಾಗುತ್ತದೆ. ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಹೇಳುವುದು ಸರಿಯಲ್ಲ. ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿಸಲು ಯಾರಿಗೂ ಅಗೌರವ ಸೂಚಿಸದೇ ಯುವಕರಿಗೆ ಟಿಕೆಟ್ ನೀಡಲಾಗಿದೆ. ಜೀನ್ಸ್, ಡಿಎನ್‍ಎ ಆಧಾರದ ಮೇಲೆ ಟಿಕೆಟ್ ನೀಡಿ ಎಂದು ಎಲ್ಲರೂ ಕೇಳಿದರೆ ಪಾರ್ಟಿಯ ಮೆಂಬರ್ ಶಿಪ್ ರಶೀದಿಗೆ ಬೆಲೆ ಇರಲ್ಲ. ಹಾಗಾಗಿ ಪಕ್ಷ ಎಲ್ಲರನ್ನೂ ಗೌರವದಿಂದ ನೋಡಿ ಸೂಕ್ತ ಸ್ಥಾನಮಾನಗಳನ್ನು ನೀಡುತ್ತಿದೆ.

ಸದ್ಯ ತೇಜಸ್ವಿನಿ ಅವರ ಗೌರವ ಮತ್ತು ಸಾಮರ್ಥ್ಯ ಲೆಕ್ಕ ಹಾಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನೀಡಿರುವ ಅವಕಾಶ ಬಳಸಿಕೊಂಡು ತಮ್ಮನ್ನು ತಾವು ಪಕ್ಷದಲ್ಲಿ ಗುರುತಿಸಿಕೊಳ್ಳಬಹುದು. ಟಿಕೆಟ್ ನೀಡಿದ್ರೆ ಗೌರವ, ನೀಡಲ್ಲ ಅಂದ್ರೆ ಅಗೌರವ ಎಂದು ಹೇಳೋದು ತಪ್ಪಾಗುತ್ತದೆ. ಈ ರೀತಿ ಟಿಕೆಟ್ ನೀಡುವುದು ಪಕ್ಷಕ್ಕೆ ತುಂಬಾನೇ ಅಪಾಯಕಾರಿ. ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ಪಕ್ಷದಲ್ಲಿ ಅವರು ಬೆಳೆಯಬಹುದು.

Leave a Reply