ನನ್ನ ಹೆಸರು ಹೇಳಿ ಬೇರೆಯವರು ಮತ ಕೇಳಿದರೆ ಮಂಗಳಾರತಿ ಎತ್ತಿ! ಸಿದ್ದು ಖಡಕ್ ವಾರ್ನ್!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ರಾಜಕಾರಣ ಸದ್ಯ ಎಲ್ಲರ ಗಮನವನ್ನು ಸೆಳೆದಿದೆ. ಸ್ಥಳೀಯ ನಾಯಕರ ಬಂಡಾಯದ ಹಿನ್ನೆಲೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರೇ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ್ದು, ‘ಕೆಲವರು ನನ್ನ ಹೆಸರು ಹೇಳಿ ಬೇರೆಯವರಿಗೆ ಮತ ಹಾಕುವಂತೆ ಕೇಳುತ್ತಿದ್ದಾರೆ. ಅಂತಹವರಿಗೆ ನೀವೇ ಮಂಗಳಾರತಿ ಎತ್ತಿ’ ಹೇಳಿದ್ದಾರೆ.

ಶುಕ್ರವಾರ ನಾಗಮಂಗಲದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜತೆ ಜಂಟಿ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಕಿಡಿ ಕಾರುವುದರ ಜತೆಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಸೋಲಿಗೆ ಕರೆ ನೀಡಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಹೇಳಿದ್ದಿಷ್ಟು… ‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 45 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದೇವೆ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದೆಯೇ?

ಕಾವೇರಿ ವಿಚಾರದಲ್ಲಿ ದೇವೇಗೌಡರು ಉಪವಾಸ ಮಾಡಲು ಮುಂದಾದರು. ಆಗ ನಾನು ಅವರ ಮನೆಗೆ ಹೋಗಿ ನಿಮಗೆ ವಯಸ್ಸಾಗಿದೆ ಉಪವಾಸ ಮಾಡಬೇಡಿ ಎಂದರೂ ಕೇಳದೆ ನಮ್ಮನ್ನು ಕರೆದು ಸತ್ಯಾಗ್ರಹಕ್ಕೆ ಕೂತರು. ರೈತರಿಗೆ ಸಮಸ್ಯೆಯಾಗಿದೆ ಎಂದಾಗ ಮೋದಿ, ಯಡಿಯೂರಪ್ಪ ಹೋರಾಟಕ್ಕೆ ಬರುತ್ತಾರಾ? ನಿಮಗಾಗಿ ಕೆಲಸ ಮಾಡುವವರಿಗೆ ನೀವು ಮತ ನೀಡಿ.

ಕೆಲವರು ನನ್ನ ಹೆಸರು ಹೇಳಿ ಬೇರೆ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡುತ್ತಿರುವ ವಿಚಾರ ತಿಳಿದು ಬಂದಿದೆ. ಒಂದು ವೇಳೆ ನಿಖಿಲ್ ಬಿಟ್ಟು ಬೇರೆಯವರಿಗೆ ಮತ ಕೇಳಲು ನನ್ನ ಹೆಸರು ಬಳಸಿಕೊಂಡರೆ ಅವರಿಗೆ ನೀವೇ ಮಂಗಳಾರತಿ ಎತ್ತಿ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಹಾಕದೆ ಮೈತ್ರಿ ಅಭ್ಯರ್ಥಿಗೆ ಮತ ನೀಡಿ. ಈ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡಲಿದೆ. ಇನ್ನು ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಸುರೇಶ್ ಗೌಡ ಹಾಗೂ ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ. ಕೆರೆಗೆ ನೀರು ತುಂಬಿಸುತ್ತೇವೆ.’

Leave a Reply