ಜೆಡಿಎಸ್ ನವರಿಗೆ ಹೆದರಿ ಸಿದ್ದರಾಮಯ್ಯ ಪ್ರಚಾರ: ಸುಮಲತಾ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಮಂಡ್ಯ ಅಖಾಡದಲ್ಲಿ ಪ್ರಚಾರ ಕಾವು ಜೋರಾಗಿ ನಡೆದಿದೆ. ನಿನ್ನೆ ಮಂಡ್ಯದಲ್ಲಿ ಸಿದ್ದರಾಮಯ್ಯ ನಿಖಿಲ್ ಪರ ಪ್ರಚಾರ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ, ‘ಜೆಡಿಎಸ್ ನವರ ಬಲವಂತಕ್ಕೆ ಹೆದರಿ ಸಿದ್ದರಾಮಯ್ಯ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಮಳವಳ್ಳಿಯ ದಳವಾಯಿ ಕೋಡಿಯಲ್ಲಿ ಶನಿವಾರ ಪ್ರಚಾರ ಮಾಡಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದ್ದಿಷ್ಟು…

‘ಮಂಡ್ಯದಲ್ಲಿ ಮೋಸದ ರಾಜಕಾರಣ, ಕುತಂತ್ರ ರಾಜಕರಣ ಮಾಡಲಾಗುತ್ತಿದೆ. ನಮ್ಮ ದೇಶದ ಸೈನಿಕರ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ನಿಮ್ಮ ಊರಿನ ರೈತನ ಮಗಳಾದ ಲಕ್ಷ್ಮಿ ಅಶ್ವಿನ್ ಗೆ ಮೋಸ ಮಾಡಿದ್ದಾರೆ. ಅಲ್ಲಿ ಅಧಿಕಾರ ಕೆಳದುಕೊಂಡು ಇಲ್ಲಿ ರಾಜಕೀಯ ಭವಿಷ್ಯ ಕೂಡ ಕಳೆದುಕೊಂಡಿದ್ದಾರೆ. ಬರೀ ಕುಟುಂಬ ರಾಜಕಾರಣ ಅಷ್ಟೇ. ಮೂವರು ಸಚಿವರು ಮಾಡದ ಅಭಿವೃದ್ಧಿಯನ್ನು ಈಗ ಅವರ ಮಗ ಮಾಡ್ತಾರಂತೆ. ಸ್ವಾರ್ಥ ರಾಜಕಾರಣ ಮಾಡದೆ ಇರೋ ರಾಜಕಾರಣಿ ಅಂದರೆ ಅಂಬರೀಷ್​ ಮಾತ್ರ.

ಮಂಡ್ಯಕ್ಕೆ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಿಕೊಂಡು ಕರೆದುಕೊಂಡು ಬಂದಿದ್ದಾರೆ. ಅವರು ಮನಪೂರ್ವಕವಾಗಿ ಒಪ್ಪಿ ಜೆಡಿಎಸ್​ ಪರ ಪ್ರಚಾರಕ್ಕೆ ಬಂದಿಲ್ಲ. ಜೆಡಿಎಸ್​ನವರ ಬ್ಲಾಕ್ ಮೇಲ್ ತಂತ್ರಕ್ಕೆ ಹೆದರಿ ಸಿದ್ದರಾಮಯ್ಯ ಇಲ್ಲಿಗೆ ಬಂದಿದ್ದಾರೆ. ಅವರು ಪಕ್ಷೇತರ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ಮುಕ್ತ ಮನಸ್ಸಿನಿಂದ ಹೇಳಿಲ್ಲ. ಬದಲಾಗಿ ಜೆಡಿಎಸ್‌ನವರ ಬ್ಲಾಕ್ ಮೇಲ್ ಗೆ ಹೆದರಿ ಅವರ ಪರ ಪ್ರಚಾರ ಮಾಡ್ತಿದ್ದಾರೆ. ಮೈಸೂರಲ್ಲಿ ಆಮೇಲೆ ಏನು ಆಗುತ್ತೋ ಎಂಬ ಭಯದಿಂದ ಅವರು ಇವತ್ತು ಇಲ್ಲಿ ಪ್ರಚಾರಕ್ಕೆ ಬಂದಿದ್ದಾರೆ ಅಷ್ಟೇ. ಅವರ ಮನದಾಳದ ಮಾತು ಅಲ್ಲ.

ಹೈಕಮಾಂಡ್​ಗೆ ಇವರು ದೂರು ಕೊಟ್ಟು ಸಿದ್ದರಾಮಯ್ಯಗೆ ಒತ್ತಡ ಹಾಕಿ ಕರೆ ತಂದಿದ್ದಾರೆ. ಅವರನ್ನು ಕೈ ಕಟ್ಟಿ ಹಾಕಿ, ಬ್ಲಾಕ್​ಮೇಲ್​ ಮಾಡಿ ಕರೆದುಕೊಂಡು ಬಂದಿದ್ದಾರೆ.’

Leave a Reply