ಲಿಂಗಾಯತ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧ: ಎಂಬಿಪಿಗೆ ಡಿಕೆಶಿ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

‘ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ನನ್ನ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಅದಕ್ಕೆ ನಾನು ಬದ್ಧನಾಗಿದ್ದೇನೆ…’ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಗೃಹ ಸಚಿವ ಎಂ.ಬಿ ಪಾಟೀಲ್ ಅವರ ಆಕ್ಷೇಪಕ್ಕೆ ತಿರುಗೇಟು ನೀಡಿದ್ದಾರೆ.

ಶನಿವಾರ ಎಂ.ಬಿ ಪಾಟೀಲ್ ಅವರ ಆಕ್ರೋಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ‘ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಬೇಡ ಎಂಬ ಹೇಳಿಕೆ ನನ್ನ ವೈಯಕ್ತಿಕ ಅಭಿಪ್ರಾಯ. ನಾನು ಅದಕ್ಕೆ ಬದ್ಧನಾಗಿದ್ದೇನೆ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನನ್ನ ಅಭಿಪ್ರಾಯ ಬದಲಿಸುವುದಿಲ್ಲ’ ಎಂದು ಸ್ಪಷ್ಟ ಪಡಿಸಿದ್ದಾರೆ.

ಲಿಂಗಾಯತ ಧರ್ಮದ ವಿಚಾರ ಸದ್ಯ ಕಾಂಗ್ರೆಸ್​​ ನಾಯಕರ ನಡುವೇ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿದ್ದು, ‘ಲಿಂಗಾಯತ ಧರ್ಮದ ವಿಚಾರದಲ್ಲಿ ನಮ್ಮ ಸರ್ಕಾರ ದೊಡ್ಡ ತಪ್ಪು ಮಾಡಿದೆ. ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ’ ಎಂಬ ಡಿಕೆಶಿ ಅವರ ಹೇಳಿಕೆಗೆ ಪಾಟೀಲ್ ಮನಿಸಿಕೊಂಡಿದ್ದಾರೆ.

ಡಿಕೆಶಿ ಅವರ ಹೇಳಿಕೆ ಪಾಟೀಲ್ ಅವರಿಗೆ ತೀವ್ರ ಇರಿಸು-ಮುರುಸು ಉಂಟು ಮಾಡಿದೆ. ಈ ವಿಚಾರಕ್ಕೆ ಕೆಂಡಮಂಡಲ ಆಗಿರುವ ಸಚಿವ ಎಂ.ಬಿ ಪಾಟೀಲ್​​ ಅವರು ನಿನ್ನೆ ದೂರವಾಣಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ದೂರಿದ್ದಾರೆ. “ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಕ್ಷಮೆ ಕೇಳೋಕೆ ಅವನ್ಯಾರು? ಅವನೇನು ಮೇಲಿಂದ ಬಿದ್ದವ್ನಾ? ಇದೇ ಮೊದಲಲ್ಲ. ಹಿಂದೆಯೂ ಹೀಗೆ ಮಾಡಿದ್ದಾನೆ. ನಮ್ಮ ಧರ್ಮದ ವಿಷಯದಲ್ಲಿ ಅವನದೇನು ಕಿರಿಕಿರಿ, ಮೊದಲು ಅವನನ್ನು ಸುಧಾರಣೆ ಮಾಡಿ, ಆಮೇಲೆ ನಮ್ಮನ್ನು ಸುಧಾರಿಸುವಂತ್ರಿ ಎಂದು ಪಾಟೀಲ್ ಅವರು ದಿನೇಶ್ ಗುಂಡೂರಾವ್ ಅವರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು.

Leave a Reply