ಪ್ರಧಾನಿ ಮೋದಿ ತಂದ ಬಾಕ್ಸ್‌ನಲ್ಲಿ ಏನಿತ್ತು?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಕಳೆದ ಏಪ್ರಿಲ್ 9 ರಂದು ಚಿತ್ರದುರ್ಗಕ್ಕೆ ಆಗಮಿಸಿದ್ರು. ಏರ್‌ಫೋರ್ಸ್ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಕೆಳಕ್ಕೆ ಇಳಿಯುವ ಮೊದಲು ಹೆಲಿಕಾಪ್ಟರ್‌ನಿಂದ ದೊಡ್ಡ ಬಾಕ್ಸ್​ವೊಂದನ್ನು ಕೆಳಕ್ಕೆ ಇಳಿಸಲಾಯ್ತು. ಸಾಕಷ್ಟು ತುರಾತುರಿಯಲ್ಲಿ ಯುವಕರಿಬ್ಬರು ಆ ಬಾಕ್ಸ್ ಅನ್ನು ಇನ್ನೊವಾ ಕಾರಿಗೆ ಶಿಫ್ಟ್ ಮಾಡಲಾಯ್ತು. ಇಷ್ಟೆಲ್ಲಾ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಕಲ್ಪಿಸುವ ಎಸ್‌ಪಿಜಿ ಅಧಿಕಾರಿಗಳ ಸಮ್ಮುಖದಲ್ಲಿ ಅನ್ನೋದು ವಿಶೇಷ.‌

ಎನ್​​ಎಸ್​ಜಿ ಭದ್ರತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬರುವಾಗ ಯಾವುದೇ ವ್ಯಕ್ತಿ ಭದ್ರತಾ ವಲಯದ ಒಳಕ್ಕೆ ಪ್ರವೇಶ ಮಾಡಲು ಅವಕಾಶ ಇರುವುದಿಲ್ಲ. ಹಾಗಿದ್ದರೂ ಬಾಕ್ಸ್​ ಶಿಫ್ಟ್​ ಮಾಡಲು ಎಸ್‌ಪಿಜಿ ಅಧಿಕಾರಿಗಳೇ ಇಬ್ಬರು ಚಿತ್ರದುರ್ಗದ ಯುವಕರನ್ನು ಬಳಕೆ ಮಾಡಿದ್ದಾರೆ. ಇನ್ನೋವಾ ಕಾರಿಗೆ ಬಾಕ್ಸ್​ ಶಿಫ್ಟ್​ ಆಗ್ತಿದ್ದಂತೆ ಯುವಕರು ಕ್ಷಣಾರ್ಧದಲ್ಲಿ ಎಸ್ಕೇಪ್​ ಆಗಿದ್ದಾರೆ. ಇನ್ನೋವಾ ಕಾರಿನಲ್ಲಿ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ಇರಲಿಲ್ಲ. ಅಷ್ಟೊಂದು ತುರಾತುರಿಯಲ್ಲಿ ಶಿಫ್ಟ್ ಮಾಡಿದ ಆ ಬಾಕ್ಸ್​ನಲ್ಲಿ ಏನಿತ್ತು ಅನ್ನೋದು ಕುತೂಹಲ ಮೂಡಿಸಿದೆ. ಅದೊಂದು ಪ್ರಧಾನಿ ಮೋದಿ ಅವರಿಗೆ ಸಂಬಂಧಿಸಿದ ಬಾಕ್ಸ್ ಆಗಿದ್ದರೆ ಅಷ್ಟೊಂದು ತುರಾತುರಿಯಲ್ಲಿ ಶಿಫ್ಟ್​ ಮಾಡಿದ್ದು ಯಾಕೆ ಅನ್ನೋದು ಕೂಡ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.

ರಾಜಕಾರಣಿಗಳು ವಿಶೇಷ ವಿಮಾನಗಳಲ್ಲಿ ಚಲಿಸುವಾಗ ಹಣ ಶಿಫ್ಟ್ ಮಾಡ್ತಾರೆ ಅನ್ನೋದು ಸಾಮಾನ್ಯ ಆರೋಪ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಹಣ ಸಾಗಾಟ ಮಾಡಿದ್ದಾರೆ ಅಂದ್ರೆ ನಂಬಲು ಕಷ್ಟ ಸಾಧ್ಯ. ಹಾಗಿದ್ರೆ ಸಾಗಿಸಿದ್ದು ಏನು ಅನ್ನೋದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿಯ ಅವರ ವಿಶೇಷ ವಿಮಾನದಲ್ಲಿ ಹಣ ಸಾಗಿದ್ದಾರೆ ಎಂಬ ಆರೋಪದ ಬಗ್ಗೆ ರಾಜ್ಯ ಚುನಾವಣಾ ಆಯೋಗ ಅಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದು, ‘ಹಣ ಸಾಗಿಸಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಆದ್ರೆ ಆ ಬಾಕ್ಸ್‌ನಲ್ಲಿ ಏನಿತ್ತು ಎಂಬ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಚಿತ್ರದುರ್ಗ ಎಸ್‌ಪಿ ಡಾ.ಕೆ.ಅರುಣ್, ಚಿತ್ರದುರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದ ವೇಳೆ ಇನೋವಾ ಕಾರಿನಲ್ಲಿ ಶಿಫ್ಟ್ ಆದ ಸೀಕ್ರೆಟ್ ಬಾಕ್ಸ್ ಬಗ್ಗೆ ಭದ್ರತಾ ಏಜನ್ಸಿಯಿಂದ ಮಾಹಿತಿ‌ ಪಡೆದಿದ್ದು, ಅವರ ಮಾಹಿತಿ ಪ್ರಕಾರ ಅದೊಂದು ಮೋದಿ ಅವರ ಭದ್ರತೆಗೆ ಸಂಬಂಧಿಸಿದ್ದು, ಆ ಬಾಕ್ಸ್ ತುಂಬಿಕೊಂಡು ತೆರಳಿದ ವಾಹನ ಪ್ರಧಾನಿ ಕಾನ್ವೆಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೆ ಅದು ಪ್ರಧಾನಿ ಕಾನ್ವೆಗೆ ಸೇರಿದ ಬಾಕ್ಸ್ ಆಗಿದ್ದರೆ, ಎಸ್‌ಪಿಜಿ ಅಧಿಕಾರಿಗಳೇ ಅದನ್ನು ಶಿಫ್ಟ್ ಮಾಡಬೇಕಿತ್ತು. ಖಾಸಗಿ ಯುವಕರನ್ನು ಕರೆಸಿದ್ದು ಯಾಕೆ..? ಹಾಗೂ ಕಾನ್ವೆಗೆ ಸೇರಿದ ಬಾಕ್ಸ್ ಆಗಿದ್ದರೆ ಅಷ್ಟೊಂದು ಆತುರಾತುರವಾಗಿ ಶಿಫ್ಟ್ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ. ಒಟ್ಟಾರೆ ಈ ಬಗ್ಗೆ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ನಾಳೆಯಿಂದ ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗುದರಲ್ಲಿ ಸಂಶಯವಿಲ್ಲ.

Leave a Reply