ಮಂಡ್ಯ ಕಾಂಗ್ರೆಸ್​ ನಾಯಕರ ಚಿತ್ತ ಕಮಲದತ್ತ..!?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಕಾಂಗ್ರೆಸ್​ ನಾಯಕರು ಹೈಕಮಾಂಡ್​ಗೆ ರೆಬೆಲ್ ಆಗಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ಮಾಡಿ ಎಂದು ಹಿರಿಯ ನಾಯಕರು ಎಷ್ಟೇ ಹೇಳಿದರೂ ಇಲ್ಲೀ ತನಕ ನಿಖಿಲ್​ ಪರವಾಗಿ ಅಖಾಡಕ್ಕೆ ಇಳಿದಿಲ್ಲ. ಪಕ್ಷದ ಹಿರಿಯ ನಾಯಕರ ಮಾತಿಗೆ ಕಿಂಚಿತ್ತೂ ಬೆಲೆ ನೀಡದ ಮಂಡ್ಯ ಕಾಂಗ್ರೆಸ್ ನಾಯಕರ ನಡೆ ನೋಡುತ್ತಿದ್ದರೆ, ಅವರಿಗೆ ಬಿಜೆಪಿ ಮೇಲಿನ ವ್ಯಾಮೋಹವಿರುವುದು ಸ್ಪಷ್ಟವಾಗುತ್ತಿದೆ.

ಅತ್ತ ಮೈಸೂರಿನಲ್ಲಿ ಎಲ್ಲಾ ಜೆಡಿಎಸ್​ ನಾಯಕರು ದುಷ್ಮನಿ ಮರೆತು ಕಾಂಗ್ರೆಸ್​ ಅಭ್ಯರ್ಥಿ ವಿಜಯ್​ ಶಂಕರ್​ ಅವರನ್ನು ಬೆಂಬಲಿಸುತ್ತಿದ್ದಾರೆ. ಆದ್ರೆ ಮಂಡ್ಯದಲ್ಲಿ ಮಾತ್ರ ಸ್ವತಃ ಸಿದ್ದರಾಮಯ್ಯ ಬಂಡಾಯ ಶಮನಕ್ಕೆ ಯತ್ನ ಮಾಡಿದ್ರೂ ಚಲುವರಾಯಸ್ವಾಮಿ ಅಂಡ್​ ಟೀಂ, ಪ್ರಚಾರಕ್ಕೆ ಬರಲಿಲ್ಲ. ರಾಹುಲ್​ ಗಾಂಧಿ ಒಮ್ಮತದಿಂದ ಜೆಡಿಎಸ್​ ಅಭ್ಯರ್ಥಿ ಗೆಲ್ಲಿಸಿ ಎಂದು ಸೂಚನೆ ಕೊಟ್ಟರೂ ಚಲುವರಾಯಸ್ವಾಮಿ ಅಂಡ್​ ಟೀಂ, ಡೋಂಟ್​ ಕೇರ್​ ವರ್ತನೆ ತೋರುತ್ತಿದೆ. ನಿನ್ನೆ ನಡೆದ ರಾಹುಲ್​ ಸಮಾವೇಶಕ್ಕೂ ಗೈರಾಗುವ ಮೂಲಕ ಮಂಡ್ಯ ನಾಯಕರು ಕಾಂಗ್ರೆಸ್​ ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಿದೆ.

ಸಿದ್ದರಾಮಯ್ಯ ಮಾತಿಗೂ ಸೊಪ್ಪು ಹಾಕದ ನಾಯಕರಿಗೆ ಸಿದ್ದರಾಮಯ್ಯ ಕಡೆಯ ವಾರ್ನಿಂಗ್​ ಮಾಡಿದ್ದಾರೆ ಎನ್ನಲಾಗಿದ್ದು, ಹೈಕಮಾಂಡ್​ ಒಮ್ಮತದಿಂದ ನಿಖಿಲ್​ ಗೆಲ್ಲಿಸುವಂತೆ ಸೂಚನೆ ರವಾನಿಸಿದೆ. ನಾನೂ ಅದೆ ಕಾರಣಕ್ಕಾಗಿ ಎಲ್ಲಾ ನೋವುಗಳನ್ನು ಮರೆತು ಜೆಡಿಎಸ್​ ಪರವಾಗಿ ಪ್ರಚಾರ ಮಾಡ್ತಿದ್ದೇನೆ. ಜೆಡಿಎಸ್​ ಜೊತೆ ಅಧಿಕಾರ ಹಂಚಿಕೆಗೂ ಸಮ್ಮತಿ ಸೂಚಿಸಿದ್ದೇನೆ. ಕಾಂಗ್ರೆಸ್​ನಲ್ಲಿ ಹೈಕಮಾಂಡ್​ ಹೇಳಿದ್ದು ವೇದವಾಕ್ಯ, ಮುಂದಿನ ದಿನಗಳನ್ನು ನನ್ನನ್ನು ದೂರಬೇಡಿ ಎಂದಿದ್ದಾರೆ ಎನ್ನಲಾಗಿದೆ. ಅಂದರೆ ಮುಂದಿನ ವಿಧಾನಸಭಾ ಚುನಾವಭೆಯಲ್ಲಿ ಟಿಕೆಟ್​ ಸಿಗದೇ ಹೋದಲ್ಲಿ ನೀವು ನನ್ನನ್ನು ದೂರುವಂತಿಲ್ಲ. ಈ ಬಾರಿ ನನ್ನ ಮಾತನ್ನು ನೀವು ಪಾಲಿಸದಿದ್ದರೆ, ನಾನು ನಿಮ್ಮ ಪರವಾಗಿ ಕಾಂಗ್ರೆಸ್​ ಹೈಕಮಾಂಡ್​ ಬಳಿ ಮಾತನಾಡಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿದರೂ ಚಲುವರಾಯಸ್ವಾಮಿ ಅಂಡ್​ ಟೀಂ, ಮುಂದೇನಾಗುತ್ತೋ ನೋಡೋಣ ಬಿಡಿ ಸಾರ್​ ಎಂದಿದ್ದಾರಂತೆ. ಕಾಂಗ್ರೆಸ್​ನಲ್ಲಿ ಮುಚ್ಚಿದ ಲಕೋಟೆಯಲ್ಲಿ ಟಿಕೆಟ್​ ಬರುತ್ತದೆ. ಅದರಲ್ಲಿ ಹೈಕಮಾಂಡ್​ಗೆ ಸೆಡ್ಡು ಹೊಡೆದಿರುವ ಈ ಬಂಡಾಯ ನಾಯಕರಿಗೆ ಟಿಕೆಟ್​ ಸಿಗುತ್ತೆ ಅನ್ನೋದು ದೂರದ ಮಾತು. ಅದೇ ಕಾರಣಕ್ಕಾಗಿ ಬಿಜೆಪಿಯತ್ತ ಚಿತ್ತ ಹರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಈಗಾಗಲೇ ಸುಮಲತಾ ಬೆಂಬಲಿಸಿರುವ ಬಿಜೆಪಿ ನಾಯಕರು ಮಂಡ್ಯದಲ್ಲಿ ಭದ್ರ ಬುನಾದಿ ಹಾಕಲು ಚಿಂತನೆ ನಡೆಸಿದ್ದಾರೆ. ಚಲುವರಾಸ್ವಾಮಿ ಅಂಡ್​ ಟೀಂ ಬಿಜೆಪಿ ಸೆರ್ಪಡೆಯಾದರೆ ನೆಲೆಯಿಲ್ಲದ ಮಂಡ್ಯದಲ್ಲಿ ಸ್ವಲ್ಪ ಶಕ್ತಿ ಬರುವುದು ಖಚಿತ. ಆದ್ರೆ ನಾಯಕರು ಬಂದಾಕ್ಷಣ ಕಾರ್ಯಕರ್ತರು ಬೆಂಬಲಿಸ್ತಾರಾ ಅನ್ನೋ ಅನುಮಾನ ಕಾಡುತ್ತಿದೆ. ಈಗಾಗಲೇ ಬಿಜೆಪಿ ನಾಯಕರ ಜೊತೆ ಒಂದು ಸುತ್ತು ಮಾತುಕತೆ ನಡೆದಿದೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೋದಾಗ ಎದುರಾಗಬಹುದಾದ ಅಡ್ಡಿ ಆತಂಕಗಳು, ಜನಬೆಂಬಲದ ಬಗ್ಗೆ ಚಿಂತನ ಮಂಥನ ನಡೆಸುತ್ತಿದ್ದಾರೆ.

ಅದರಲ್ಲೂ ಬಿಜೆಪಿ ಪಕ್ಷವನ್ನು ಒಕ್ಕಲಿಗ ಜನಾಂಗ ಬೆಂಬಲಿಸಿದ ಇತಿಹಾಸವೂ ಇಲ್ಲ. ಹೀಗಾಗಿ ಈ ಭಾಗದ ಜನರು ಬೆಂಬಲಿಸ್ತಾರಾ..? ಬಿಜೆಪಿಗೆ ಹೋದರೆ ರಾಜಕೀಯ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಾ ಅನ್ನೋ ಬಗ್ಗೆಯೂ ಚಿಂತನೆ ನಡೆದಿದೆ. ಒಂದು ವೇಳೆ ಕಾಂಗ್ರೆಸ್​ ಈಗಲೇ ಏಕಾಏಕಿ ಶಿಸ್ತುಕ್ರಮ ಜರುಗಿಸದಿದ್ದರೂ ನಿಖಿಲ್​ಗೆ ಒಂದು ವೇಳೆ ಸೋಲಾದ್ರೆ, ದೇವೇಗೌಡರು ಕಾಂಗ್ರೆಸ್​ ಹೈಕಮಾಂಡ್​ ಮೇಲೆ ಪ್ರಭಾವ ಬೀರಿ ಕ್ರಮ ಆಗುವ ರೀತಿ ಮಾಡ್ತಾರೆ. ಅದಕ್ಕೂ ಮೊದಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರುವುದು ಸೂಕ್ತ ಎನ್ನುವ ಮಾತುಗಳನ್ನು ಚೆಲುವರಾಯಸ್ವಾಮಿ ಆಪ್ತರು ಹೇಳುತ್ತಿದ್ದಾರೆ. ಚುನಾವಣೆಗೂ ಮೊದಲೇ ಅಧಿಕೃತವಾಗಿ ಬಿಜೆಪಿ ಸೇರಿದರೂ ಅಚ್ಚರಿಯಿಲ್ಲ ಎನ್ನುತ್ತಿವೆ ಮಂಡ್ಯದ ಮೂಲಗಳು.

Leave a Reply