ಮಂಡ್ಯ ಜನರ ಮತದಲ್ಲಿ ರಾಜ್ಯ ಸರ್ಕಾರದ ಭವಿಷ್ಯ..?

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್​ ಕಮಲ ಮಾಡಲು ಯತ್ನಿಸಿದ ಬಿಜೆಪಿ ನಾಯಕರಿಗೆ ಸಕ್ಸಸ್ ಸಿಕ್ಕಿರಲಿಲ್ಲ. ಆದ್ರೀಗ ರಾಜ್ಯ ಸರ್ಕಾರದ ಭವಿಷ್ಯ ಅಡ್ಡಕತ್ತರಿಗೆ ಬಂದು ಸಿಲುಕಿದೆ. ಮಂಡ್ಯ ಜನರ ಅಭೂತಪೂರ್ವ ಬೆಂಬದಿಂದಲೇ ಮುಖ್ಯಮಂತ್ರಿ ಆಗಿರುವ ಸಿಎಂ ಕುಮಾರಸ್ವಾಮಿ, ಇದೀಗ ರಾಜ್ಯ ಸರ್ಕಾರದ ಭವಿಷ್ಯವನ್ನು ಮಂಡ್ಯ ಜನರ ಕೈಯ್ಯಲ್ಲೇ ಇಟ್ಟಿದ್ದಾರೆ.

ಮಂಡ್ಯದಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಗೆಲುವು ತಂದುಕೊಡದಿದ್ದರೆ, ಬಿಜೆಪಿ ಅಧಿಕಾರದ ಸನಿಹಕ್ಕೆ ಬಂದು ನಿಲ್ಲುವ ಪರಿಸ್ಥಿತಿ ಎದುರಾಗುತ್ತಿತ್ತು. ಆದ್ರೆ ಕುಮಾರಸ್ವಾಮಿ ಸಿಎಂ ಅಗಲೇಬೇಕು ಅನ್ನೋ ಕಾರಣಕ್ಕೆ ಒಕ್ಕಲಿಗರೇ ಹೆಚ್ಚಿರುವ ಮಂಡ್ಯ ಜಿಲ್ಲೆಯಲ್ಲಿ ಸರಿಸುಮಾರು 50 ಸಾವಿರ ಮತಗಳ ಲೀಡ್​ ಕೊಟ್ಟು ಮಂಡ್ಯ ಜನ ಜೆಡಿಎಸ್​ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಕೇವಲ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೂ ಮಂಡ್ಯ ಜನರ ಆಸೆಯಂತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಆದ್ರೀಗ ಮತ್ತೆ ಮುಖ್ಯಮಂತ್ರಿ ಸ್ಥಾನ ಅಲುಗಾಡುತ್ತಿದ್ದು, ಮಂಡ್ಯ ಜನರ ಕೈಯಲ್ಲಿ ರಾಜ್ಯ ಸರ್ಕಾರದ ಭವಿಷ್ಯ ನಿಂತಿದೆ.

ಮಂಡ್ಯದಲ್ಲಿ ಎಲ್ಲಾ ಲೆಕ್ಕಾಚಾರಗಳು ಅಂತಿಮ ಘಟ್ಟಕ್ಕೆ ಬಂದು ನಿಂತಿತ್ತು. ಇನ್ನುಳಿದ ಮೂರು ದಿನದಲ್ಲಿ ಜನರ ಮನಸ್ಸನ್ನು ಯಾರು ಸೆಳೆಯುತ್ತಾರೆ ಅನ್ನೋದು ಈಗಿರುವ ಕುತೂಹಲ. ಕಾಂಗ್ರೆಸ್​ ನಾಯಕರು ಜೆಡಿಎಸ್​ ಬೆಂಬಲ ಕೊಡದೆ ಪಕ್ಷೇತರ ಅಭ್ಯರ್ಥಿ ಆಗಿರುವ ಸುಮಲತಾ ಅವರನ್ನು ಬೆಂಬಲಿಸಿದ್ದಾರೆ.

ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದ ನಾಯಕರು ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ರಾಹುಲ್​ ಗಾಂಧಿ ಕಾರ್ಯಕ್ರಮಕ್ಕೂ ಹಾಜರಾಗದೆ ಬಂಡಾಯ ಸಾರಿದ್ದಾರೆ. ಸ್ವತಃ ಹೈಕಮಾಂಡ್​ ಬಂಡಾಯ ಶಮನ ಮಾಡಲು ಸಿದ್ದರಾಮಯ್ಯ ಅವರನ್ನು ಕಳುಹಿಸಿದರೂ ಬಂಡಾಯ ಶಮನವಾಗಲಿಲ್ಲ. ಇದೀಗ ಸಿದ್ದರಾಮಯ್ಯ ಸ್ವತಃ ನಿಖಿಲ್​ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಆದರೂ ಸಿದ್ದರಾಮಯ್ಯ ಸುಮಲತಾಗೆ ಸಪೋರ್ಟ್​ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.

ಸ್ವತಃ ಸುಮಲತಾ, ಸಿದ್ದರಾಮಯ್ಯ ಅವರನ್ನು ಬ್ಲಾಕ್​ ಮೇಲ್​ ಮಾಡಿ ಕರೆದುಕೊಂಡು ಬಂದಿದ್ದಾರೆ. ಜೆಡಿಎಸ್​ ಬೆಂಬಲಿಸಲು ಸಿದ್ದರಾಮಯ್ಯ ಮನಪೂರ್ವಕವಾಗಿ ಹೇಳಿಲ್ಲ ಎಂದಿದ್ದರು. ಒಂದು ವೇಳೆ ಕಾಂಗ್ರೆಸ್​ ನಾಯಕರ ಒಳ ಸಂಚಿನ ಆಧಾರದಲ್ಲಿ ನಿಖಿಲ್​ಗೆ ಹಿನ್ನಡೆಯಾಗಿ ಸುಮಲತಾ ಜಯಭೇರಿ ಬಾರಿಸಿದ್ರೆ ಸರ್ಕಾರ ಉಳಿಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.

ಮಂಡ್ಯದಲ್ಲಿ ಬೆಂಬಲ ನೀಡದಿದ್ದರೆ ಮೈಸೂರು ಮರೆತುಬಿಡಿ ಎಂದು ಸ್ವತಃ ಸಚಿವ ಸಾ ರಾ ಮಹೇಶ್​ ನೇರವಾಗಿಯೇ ಸವಾಲು ಹಾಕಿದ್ದರು. ಆದ್ರೆ ಅದೆಲ್ಲವನ್ನು ಮರೆತು, ಜಿ.ಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿ ಪ್ರಚಾರ ಮಾಡುವ ಮೂಲಕ ಹಳೇ ದುಷ್ಮನಿಗೆ ಇತಿಶ್ರೀ ಹಾಡಿದ್ರು. ಆದರೂ ಸಿದ್ದರಾಮಯ್ಯ ಸ್ವತಃ ತಮ್ಮ ಶಿಷ್ಯರನ್ನು ಪ್ರಚಾರಕ್ಕೆ ಕರೆತರಲಾಗದೆ, ನಿಖಿಲ್​ ಸೋಲಿಗೆ ಕಾರಣವಾದರು ಅನ್ನೋ ಅಪಖ್ಯಾತಿಗೆ ಒಳಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗವಾಗಿ, ಒಂದು ವೇಳೆ ಸಮನ್ವಯ ಸಮಿತಿ ಅಧ್ಯಕ್ಷರೇ ಸೋಲಿಗೆ ಕಾರಣವಾದರು ಎನ್ನುವ ಆರೋಪ ಬಂದರೆ ನೇರವಾಗಿ ಕಾಂಗ್ರೆಸ್​ ಹೈಕಮಾಂಡ್​ ಅಂಗಳಕ್ಕೆ ಪ್ರಕರಣ ಬಂದು ನಿಲ್ಲಲಿದೆ.

ಶಿಸ್ತುಕ್ರಮವಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಸಿದ್ದರಾಮಯ್ಯರನ್ನು ತೆರವು ಮಾಡಿದ್ರೆ, ರಾಜ್ಯ ಸರ್ಕಾರ ಕ್ಷಣಮಾತ್ರದಲ್ಲೂ ಇರಲು ಸಿದ್ದರಾಮಯ್ಯ ಬಿಡುವುದಿಲ್ಲ. ಕಾಂಗ್ರೆಸ್​ನಿಂದ ತಮ್ಮ ಸಹಚರರ ಜೊತೆ ಜಾಗ ಖಾಲಿ ಮಾಡ್ತಾರೆ ಎನ್ನಲಾಗ್ತಿದೆ. ಅಥವಾ ಒಂದು ವೇಳೆ ಕಾಂಗ್ರೆಸ್​ ಜೆಡಿಎಸ್​ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ತಾವು ಅಂದುಕೊಂಡಷ್ಟು ಸ್ಥಾನಗಳು ಬರದಿದ್ದರೆ, ನೇರವಾಗಿ ಸ್ವತಃ ಸಿದ್ದರಾಮಯ್ಯ, ವಿರೋಧ ಪಕ್ಷದಲ್ಲಿ ಇದ್ದು, ಪಕ್ಷ ಸಂಘಟನೆ ಮಾಡೋಣ ಎನ್ನುವ ಪ್ರಸ್ತಾಪ ಮುಂದಿಟ್ಟು ಸರ್ಕಾರದಿಂದ ಹೊರಬರುವ ನಿರ್ಧಾರ ಪ್ರಕರಟ ಮಾಡಿದರೂ ಮಾಡಬಹುದು. ಒಟ್ಟಾರೆ, ಮಂಡ್ಯ ಕ್ಷೇತ್ರದ ಫಲಿತಾಂಶ ರಾಜ್ಯ ಸರ್ಕಾರದ ಭವಿಷ್ಯವನ್ನು ನಿರ್ಧಾರ ಮಾಡಲಿದೆ ಅಂದ್ರೆ ತಪ್ಪಲ್ಲ.

Leave a Reply