ಖಾಕಿ ಚಡ್ಡಿ ಬಗ್ಗೆ ಅಜಂ ಖಾನ್ ನೀಚ ಹೇಳಿಕೆ! ಜಯಪ್ರದಾ ಕೊಟ್ಟ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್:

ಚುನಾವಣೆಯಲ್ಲಿ ಎದುರಾಳಿಗಳನ್ನು ಟೀಕಿಸುವ ಭರದಲ್ಲಿ ನಾಯಕರುಗಳು ಆಡುವ ಮಾತುಗಳು ಅತ್ಯಂತ ಕೀಳುಮಟ್ಟದ್ದಾಗಿರುತ್ತದೆ. ಸದ್ಯ ಮಂಡ್ಯದಲ್ಲಿ ಇಂತಹ ಅನಗತ್ಯ ಪಾಗೂ ಬೇಜಾವಾಬ್ದಾರಿಯುತ ಮಾತುಗಳು ಆಗಾಗ್ಗೆ ವಿವಾದದ ಕಿಡಿ ಹೊತ್ತಿಸುತ್ತಲೇ ಇವೆ. ಆದ್ರೆ ಸೋಮವಾರ ಉತ್ತರ ಪ್ರದೇಶದಲ್ಲಿ ರಾಂಪುರದಿಂದ ಸ್ಪರ್ಧೆ ಮಾಡಿರುವ ಸಮಾಜವಾದಿ ಮುಖಂಡ ಅಜಂ ಖಾನ್, ಬಿಜೆಪಿ ಅಭ್ಯರ್ಥಿ ಬಾಲಿವುಡ್ ನಟಿ ಜಯಪ್ರದಾ ಬಗ್ಗೆ ಮಾನಹಾನಿ ಹೇಳಿಕೆ ನೀಡಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದ್ದಾರೆ.

ಹೌದು, ಜಯಪ್ರದಾ ಅವರ ಬಿಜೆಪಿಯಿಂದ ಸ್ಪರ್ಧೆಯನ್ನು ಟೀಕಿಸುವ ಭರದಲ್ಲಿ ಅಜಂ ಖಾನ್, ‘ಕಳೆದ 17 ವರ್ಷದಿಂದ ನೀವು ಜಯಪ್ರದಾ ಅವರನ್ನು ನೋಡಿದರೂ ನಿಮಗೆ ಗೊತ್ತಾಗಿಲ್ಲ. ಆದ್ರೆ ಕಳೆದ 17 ದಿನದಲ್ಲಿ ನಾನು ನೋಡಿದ್ದೀನಿ. ಆಕೆ ಹಾಕೋದು ಖಾಕಿ ಚಡ್ಡಿ (ಅಂಡರ್ವೇರ್)’ ಎಂದು ಹೇಳಿಕೆ ನೀಡಿದ್ದಾರೆ.

ಅಜಂ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿರುವ ನಟಿ ಜಯಪ್ರದಾ, ‘ಈ ಸ್ಥಿತಿಯಲ್ಲಿ ನಾನು ಏನನ್ನು ಹೇಳೋದಿಲ್ಲ. ನನಗೆ ತುಂಬಾ ಬೇಸರವಾಗಿದೆ. ಎಸ್ಪಿ ಅಭ್ಯರ್ಥಿ ಲಕ್ಷ್ಮಣ ರೇಖೆ ದಾಟಿದ್ದಾರೆ. ನನಗೆ ಯಾರು ಅಣ್ಣ ಇಲ್ಲ. ಅವರನ್ನೇ ನಾನು ಅಣ್ಣ ಅಂತಾ ತಿಳಿದುಕೊಂಡಿದ್ದೆ. ಆದ್ರೆ ಈಗ ಅವರ ಮೇಲೆ ಇದ್ದ ನಂಬಿಕೆ ಕಳೆದು ಹೋಗಿದೆ. ಈಗ ರಾಂಪುರ ಜನರು ನಿರ್ಧಾರ ಮಾಡ್ಬೇಕು. ಇಂತಹ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸೋಕೆ ಅರ್ಹತೆ ಇಲ್ಲ. ನಾನು ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇನೆ. ಅಖಿಲೇಶ್ ಯಾದವ್‌ಗೆ ಹೇಳೋಕೆ ಇಷ್ಟ ಪಡ್ತೀನಿ ಇಂತಹ ಹೇಳಿಕೆ ಕೊಟ್ಟಿರೋ ವ್ಯಕ್ತಿಯನ್ನ ನಿಮ್ಮ ಪಕ್ಷದಲ್ಲಿ ಯಾಕೆ ಇಟ್ಟುಕೊಂಡಿದ್ದೀರಾ’ ಎಂದು ಕಣ್ಣೀರು ಹಾಕಿದ್ದಾರೆ.

ತಮ್ಮ ಪಕ್ಷದ ನಾಯಕನ ಹೇಳಿಕೆ ಪಕ್ಷಕ್ಕೆ ಭಾರಿ ಹೊಡೆತ ಕೊಡುವ ಸೂಚನೆ ಅರಿತ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ’ಮಹಿಳೆಯ ಬಗ್ಗೆ ಯಾರೂ ಕೂಡ ಈ ಬಗ್ಗೆ ಮಾತನಾಡಬಾರದು. ಇದು ತಪ್ಪು’ ಎಂದು ಹೇಳಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ ಕೂಡಲೇ ಜಯಪ್ರದಾ ಅವರ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ದಾರೆ. ಇನ್ನು ಕೇಂದ್ರ ಮಹಿಳಾ ಆಯೋಗವೇ ಸ್ವತಃ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಹಿಳೆ ಬಗ್ಗೆ ಇಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದೆ.

ಆದ್ರೆ ತನ್ನ ಮಾತನ್ನು ಸಮರ್ಥಿಸಿಕೊಂಡಿರುವ ಅಜಂಖಾನ್, ಟನಾನು ರಾಂಪುರದಲ್ಲಿ ಚುನಾವಣೆ ಎದುರುಸುತ್ತಿದ್ದೇನೆ. ಆರ್ಎಸ್ಎಸ್ ಹಾಗೂ ಬಿಜೆಪಿಯನ್ನ ಸೋಲಿಸುವುದೇ ನನ್ನ ಗುರಿ. ಆದ್ರೆ ನಾನು ಯಾರ ಹೆಸರು ಬಳಸಿಲ್ಲ. ಅವರ ಹೆಸರಿಗೆ ನಾನು ಏನು ಧಕ್ಕೆ ತಂದಿಲ್ಲ. ರಾಂಪುರದಲ್ಲಿ 9 ಬಾರಿ ಎಲೆಕ್ಷನ್‌ಗೆ ನಿಂತಿದ್ದೇನೆ. ಏನ್ ಮಾತನಾಡಬೇಕು ಅಂತಾ ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಹೇಳಿಕೆಯನ್ನ ತಿರುಚಲಾಗಿದೆ. ನಾನು ಏನಾದ್ರು ಆ ರೀತಿ ಹೇಳಿಕೆ ನೀಡಿದ್ರೆ ಎಲೆಕ್ಷನ್‌ ಕಣದಿಂದ ಹೊರಕ್ಕೆ ಹೋಗ್ತೇನೆ’ ಎಂದು ಸವಾಲು ಹಾಕಿದ್ದಾರೆ.

Leave a Reply