ದೇವೇಗೌಡರ ಕುಟುಂಬವನ್ನು ಕಾಡ್ತಿರೋ ಐಟಿ..!

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಮೋದಿ ಸರ್ಕಾರ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಭರ್ಜರಿಯಾಗಿಯೇ ಟಾರ್ಗೆಟ್ ಮಾಡಿದಂತಿದೆ. ಚುನಾವಣೆ ಘೋಷಣೆಯಾದ ಬಳಿಕ ಹಾಸನ, ಮಂಡ್ಯ ಸೇರಿದಂತೆ ದೇವೇಗೌಡರ ಕುಟುಂಬಸ್ಥರು ಹಾಗೂ ಜೆಡಿಎಸ್ ನಾಯಕರು, ಅಭ್ಯರ್ಥಿಗಳ ಆಪ್ತರು, ಹಿತೈಷಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಿಟ್ಟು ಬಿಡದಂತೆ ಕಾಡುತ್ತಿದ್ದಾರೆ.

ಚುನಾವಣಾ ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಹಾಸನ, ಮಂಡ್ಯದ ವಿವಿಧ ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನದ ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ಐಟಿ ಅಧಿಕಾರಿಗಳಿಂದ ತಪಾಸಣೆ ನಡೆಯುತ್ತಿದೆ. ದೇವೇಗೌಡರ ತಮ್ಮನ ಮಗ ಪಾಪಣ್ಣಿ ಎಂಬುವವರ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಐಟಿ ದಾಳಿ ನಡೆಸಿದ್ದು, ಹಲವು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡಿದ್ದು, ರೇವಣ್ಣ ಸೋದರ ಸಂಬಂಧಿ ಮನೆಗಳಲ್ಲಿ ಹಣ ಶೇಖರಣೆ ಮಾಡಿರಬಹುದು ಅನ್ನೋ ಗುಮಾನಿಯಲ್ಲಿ ಐಟಿ ದಾಳಿ ನಡೆದಿದೆ.

ಸಚಿವ ರೇವಣ್ಣ ಆಪ್ತರ ಮನೆ ಮೇಲೆ ದಾಳಿ ಮಾಡಿದ್ದು, ಮೂರು ಇನ್ನೋವಾ ಕಾರಿನಲ್ಲಿ ಬಂದಿರುವ 15 ಜನರ ತಂಡ ಬೆಳಗ್ಗೆ 7 ಗಂಟೆ 15 ನಿಮಿಷಕ್ಕೆ ಪಾಪಣ್ಣಿ ಮನೆಗೆ ಬಂದಿದ್ದಾರೆ. ಪಾಪಣ್ಣಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾಗಿದ್ದು, ಸದ್ಯ ಜೆಡಿಎಸ್ ಬೆಂಬಲಿಗರಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಹಾಸನದ ವಿದ್ಯಾನಗರದಲ್ಲಿಯೂ ಐಟಿ ದಾಳಿ ನಡೆದಿದ್ದು, ಗುತ್ತಿಗೆದಾರ ಇಂದ್ರೇಶ್ ಎಂಬುವರ ಮನೆಯ ಮೇಲೆ‌ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಆರು ಮಂದಿ ಅಧಿಕಾರಿಗಳ ತಂಡ ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನೂ ಗೌಡರ ಮತ್ತೋರ್ವ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿರುವ ಮಂಡ್ಯದಲ್ಲೂ ಮತ್ತೆ ಐಟಿ ದಾಳಿ ಮುಂದುವರಿದಿದೆ. ಜೆಡಿಎಸ್ ಮುಖಂಡನ ಕಂಪನಿ ಮೇಲೆ ಐಟಿ ದಾಳಿ ನಡೆದಿದೆ. ಮದ್ದೂರು ಸಮೀಪದ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಸೋಮೇಶ್ವರ ಫರ್ಟಿಲೈಸರ್ ಕಂಪನಿ ಮೇಲೆ ದಾಳಿ ನಡೆದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ಅವರಿ ಪತಿ ಸ್ವಾಮಿಗೆ ಸೇರಿದ ಕಂಪನಿ ಇದಾಗಿದೆ.

ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಚಿವ ಡಿ.ಸಿ ತಮ್ಮಣ್ಣಗೆ ಆಪ್ತರಾಗಿರುವ ಸಾದೊಳಲು ಸ್ವಾಮಿ ಅವರನ್ನು ಮೈಸೂರು ವಲಯದ ಜೆಡಿಎಸ್ ವೀಕ್ಷಕರಾಗಿ ಕೂಡ ನೇಮಿಸಲಾಗಿದ್ದು, ಹಣ ವಹಿವಾಟು ನಡೆಸು ಗುಮಾನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಸಚಿವ ಸಿ.ಎಸ್.ಪುಟ್ಟರಾಜು ಆತ್ಮೀಯ ಸ್ನೇಹಿತ ಜೆಡಿಎಸ್ ಜಿಲ್ಲಾ ಪಂಚಾಯ್ತಿ ಸದಸ್ಯ ಶಾಮಿಲ್ ತಿಮ್ಮೇಗೌಡ ನಿವಾಸ ಹಾಗೂ ಶಾಮಿಲ್‌ ಮೇಲೂ ಐಟಿ ದಾಳಿ ನಡೆದಿದೆ. ಇಂದು ಮುಂಜಾನೆ 6 ಗಂಟೆಗೆ ಬೆಂಗಳೂರಿನಿಂದ ಇನೋವಾ ಕಾರಿನಿಂದ ಬಂದಿಳಿದ 8 ಮಂದಿ ಬೆಂಗಳೂರು ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ..ಚುನಾವಣೆಗೆ ಹಣ ಸಂಗ್ರಹ ಹಾಗೂ ಮುಂದಾಳತ್ವ ಮತ್ತು ಅಕ್ರಮ ಚುನಾವಣೆ ನಡೆಸುವ ಶಂಕೆ ಮೇಲೆ ದಾಳಿ ನಡೆದಿದೆ.. ಜೆಡಿಎಸ್ ಜಿ.ಪಂ ಸದಸ್ಯರಾಗಿರುವ ತಿಮ್ಮೇಗೌಡರಿಗೆ ಸೇರಿದ ಪೆಟ್ರೋಲ್ ಬಂಕ್, ನಿವಾಸ ಹಾಗೂ ಶಾಮಿಲ್‌ಗೂ ಐಟಿ ದಾಳಿ ಬಿಸಿ ತಟ್ಟಿದೆ.

ಮಂಡ್ಯದಲ್ಲಿ ಐಟಿ ದಾಳಿಯನ್ನು ಖಚಿತಪಡಿಸಿರುವ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು, ದಾಳಿ  ನಡೆಸಿರೋದು ನಿಜ, ಬೆಳಗ್ಗೆ 5.30ಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ರೆ ಇಲಾಖೆಗೆ ಗೌರವ ಕೊಡಲಿ. ಬಿಜೆಪಿಯವರ ಮಾತು ಕೇಳಿ ಮಾನ ಮರ್ಯಾದೆಯನ್ನು 3 ಪಾಲು ಮಾಡಿದ್ದಾರೆ. ರಾಜಕಾರಣದಲ್ಲಿ ಇಷ್ಟು ಕೆಳಮಟ್ಟಕ್ಕೆ ಹೋಗಬಾರದಿತ್ತು. ನಮ್ಮ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯನ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾತ್ರಿ ಸಿಎಂ ಜೊತೆ ಮೆರವಣಿಗೆಯಲ್ಲಿ ಬಂದಿದ್ದರು. ಬೆಳಗ್ಗೆ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹೀಗೇ ದಾಳಿ ಮಾಡ್ತಿದ್ರೆ ಐಟಿ ಅಧಿಕಾರಿಗಳನ್ನು ಹಿಡಿದು ಜನರೇ ಕಟ್ಟಿ ಹಾಕ್ತಾರೆ ಎಂದು ಎಚ್ಚರಿಸಿದ್ದಾರೆ.

Leave a Reply