ಸುಮಲತಾ ಬಿಜೆಪಿ ಸೇರೋದು ಪಕ್ಕಾನಾ..?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಬಿಜೆಪಿ ಸೇರೋದು ಪಕ್ಕಾ ಅನ್ನೋ ಮಾತು ಮಂಡ್ಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಸಿ.ಎಸ್​ ಪುಟ್ಟರಾಜು, ಬಿಜೆಪಿ ನಾಯಕರ ಜೊತೆ ಈಗಾಗಲೇ ಸುಮಲತಾ ಚರ್ಚೆ ಮಾಡಿದ್ದಾರೆ. ಯಾವ ಹೋಟೆಲ್​ನಲ್ಲಿ ಈ ಬಗ್ಗೆ ಮಾತುಕತೆಯಾಗಿದೆ ಅನ್ನೋದು ಗೊತ್ತಿದ್ದು, ಈ ಬಗ್ಗೆ ವಿಡಿಯೋ ಸಾಕ್ಷಿ ಬಿಡುಗಡೆ ಮಾಡ್ತೇವೆ ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್​ ಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಜೆಡಿಎಸ್​ ನಾಯಕರು ಸುಮಲತಾ ಬಗ್ಗೆ ಇದೇ ವಿಚಾರ ಪ್ರಸ್ತಾಪ ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಕದೇ ಇರುವ ಬಗ್ಗೆ ಯಡಿಯೂರಪ್ಪ ಸ್ವಗ್ರಾಮ ಬೂಕನಕೆರೆಯಲ್ಲೇ ಜನ ಟೀಕೆ ಮಾಡ್ತಾರೆ. ಆದ್ರೆ ಸುಮಲತಾ ರಾತ್ರಿ ಹೊತ್ತು ಹೋಗಿ ಯಡಿಯೂರಪ್ಪ ಅವರನ್ನು ಮೀಟ್​ ಮಾಡಿ ಆಶಿರ್ವಾದ ಪಡೆಯುತ್ತಾರೆ. ಎಸ್​.ಎಂ ಕೃಷ್ಣ ಅವರ ಮನೆಗೂ ಹೋಗಿ ಬರ್ತಾರೆ. ಆದ್ರೆ ಬಿಜೆಪಿ ನಾಯಕರು ಪ್ರಚಾರಕ್ಕೆ ಬಂದ್ರೆ ಮುಸ್ಲಿಂ ಸಮುದಾಯದ ವೋಟ್ ಕೈ ತಪ್ಪುತ್ತೆ ಅನ್ನೋ ಕಾರಣಕ್ಕೆ ಈ ಸಂಚು ಮಾಡಿದ್ದಾರೆ ಎಂದು ಸಚಿವ ಪುಟ್ಟರಾಜು ಟೀಕಿಸಿದ್ದಾರೆ.

ಜೆಡಿಎಸ್​ ರಾಜ್ಯಾಧ್ಯಕ್ಷ ವಿಶ್ವನಾಥ್ ಮಾತನಾಡಿ, ದೇಶದ ಚುನಾವಣೆಯನ್ನು ಜಗತ್ತು ನೋಡ್ತಿದೆ. 2 ತತ್ವಗಳ ನಡುವೆ ಚುನಾವಣೆ ನಡೀತಾ ಇದ್ದು, ಮೋದಿಯನ್ನ ಹೊಗಳುವವರು ರಾಷ್ಟ್ರಪ್ರೇಮಿಗಳು. ತೆಗಳುವವರು ರಾಷ್ಟ್ರದ್ರೋಹಿಗಳು ಎಂದು ಬಿಂಬಿಸಲಾಗ್ತಿದೆ. ಸುಮಲತಾ ಅವರನ್ನ ಬಿಜೆಪಿ ಅಭ್ಯರ್ಥಿಯನ್ನಾಗಿ ಹಿಂಬಾಗಿಲಿನಿಂದ ಬಿಟ್ಟಿದ್ದಾರೆ. ಸುಮಲತಾ ಪಕ್ಷೇತರ ಅಭ್ಯರ್ಥಿ ಅಲ್ಲ ಅಂದ್ರು.

ಸಮಾವೇಶದಲ್ಲಿ ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ಮಾತನಾಡಿ, ಸುಮಲತಾ ಪಕ್ಷೇತರ ಅಭ್ಯರ್ಥಿ ಅಲ್ಲ, ಅವರು ಬಿಜೆಪಿ ಅಭ್ಯರ್ಥಿ. ಸುಮಲತಾ ಗೆದ್ದರೆ ಅವರು ಬಿಜೆಪಿಗೆ ಹೋಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಆದ್ರೆ ಸುಮಲತಾ ಬಿಜೆಪಿಗೆ ಹೋಗ್ತಾರೆ ಅಂದ್ರೆ ಮುಸ್ಲಿಂ ಸಮುದಾಯದ ಮತಗಳು ಒಟ್ಟಾಗಿ ಜೆಡಿಎಸ್​ಗೆ ಬೀಳುತ್ತವೆ ಅನ್ನೋದಕ್ಕೆ ಈ ರೀತಿ ಹೇಳ್ತಿದ್ದಾರಾ ಅನ್ನೋ ಅನುಮಾನ ಮೂಡಿಸಿದೆ. ಆದ್ರೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಮಾತುಗಳನ್ನು ನೋಡಿದ್ರೆ ಸುಮಲತಾ ಬಿಜೆಪಿ ಹೋಗ್ತಾರೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಂತಾಗಿದೆ. ಜೊತೆಗೆ ಸುಮಲತಾ ಕೂಡ ಗೆಲುವಿನ ಬಳಿಕ ಈ ಬಗ್ಗೆ ನೋಡೋಣ ಎಂದು ಅಡ್ಡಗೋಡೆ ಮೇಲೆ ಮಾತು ನಿಲ್ಲಿಸಿದ್ದಾರೆ.

Leave a Reply