ಡಿಜಿಟಲ್ ಕನ್ನಡ ಟೀಮ್:
ದೇಶದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಾಗೂ ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ಗುರುವಾರ ನಡೆಯುತ್ತಿದೆ.
ಪ್ರಜಾಪ್ರಭುತ್ವದ ಹಬ್ಬ ಎಂದೇ ಬಿಂಬಿಸುವ ಚುನಾವಣೆಯಲ್ಲಿ ಇಂದು ರಾಜಕೀಯ ನಾಯಕರು, ಸಿನಿಮಾ ಸೆಲೆಬ್ರಿಟಿಗಳು ಮತದಾನ ಮಾಡಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ನೆರೆಯ ತಮಿಳುನಾಡಿನಲ್ಲೂ ಮತದಾನ ನಡೆಯುತ್ತಿದ್ದು, ಗಣ್ಯರು ಮತದಾನ ಮಾಡಿ ತಮ್ಮ ಅಭಿಮಾನಿಗಳಿಗೂ ಮತದಾನ ಮಾಡುವಂತೆ ಕರೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಅವರು ಪತ್ನಿ ಉಷಾ ಶಿವಕುಮಾರ್ ಮತ್ತು ಪುತ್ರಿ ಐಶ್ವರ್ಯ ಅವರ ಜತೆ ಮತ ಚಲಾಯಿಸಿದರು.
ಇನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅವರ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಮನಗರದ ಕೇತಗಾನಹಳ್ಳಿಯಲ್ಲಿ ಗುರುವಾರ ಮತ ಚಲಾಯಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ. ಸುರೇಶ್ ಮತದಾನ ಕೇಂದ್ರದ ಬಳಿ ಜತೆಗಿದ್ದರು.
ಇನ್ನು ರಾಜ್ಯದ ಸೆಲೆಬ್ರಿಟಿಗಳ ಪೈಕಿ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಜಗ್ಗೇಶ್, ನಟಿ ರಾಗಿಣಿ, ಚಂದನ್ ಶೆಟ್ಟಿ, ನಟ ಅರ್ಜುನ್ ಸರ್ಜಾ, ಉಪೇಂದ್ರ, ಶರಣ್, ಹರ್ಷಿಕಾ ಪೂಣಚ್ಚ ಮತದಾನ ಮಾಡಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಕಮಲ್ ಹಾಸನ್, ರಜನಿಕಾಂತ್, ವಿಜಯ್, ಶ್ರುತಿ ಹಾಸನ್, ಸೂರ್ಯ ಹಾಗೂ ಜ್ಯೋತಿಕಾ ಸೇರಿದಂತೆ ಕಾಲಿವುಡ್ ಸೆಲೆಬ್ರಿಟಿಗಳು ಮತದಾನ ಮಾಡಿದ್ದಾರೆ. ಈ ಎಲ್ಲ ಸೆಲೆಬ್ರಿಟಿಗಳು ಮತದಾನ ಮಾಡಿ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ…