ಸೋಲಿಲ್ಲದ ಸರದಾರ ಖರ್ಗೆಗೆ ಸೋಲಿನ ಭೀತಿ..!?

ಡಿಜಿಟಲ್ ಕನ್ನಡ ಟೀಮ್:

ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಪಡೆದಿರುವ ಕಾಂಗ್ರೆಸ್​ ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ಎದುರಾಗಿದ್ಯಾ? ಹೀಗೊಂದು ಪ್ರಶ್ನೆ ಸದ್ಯ ರಾಜ್ಯ ರಾಜಕೀಯದಲ್ಲಿ ಹುಟ್ಟುಕೊಂಡಿದೆ. ಚಿಂಚೋಳಿ ಕಾಂಗ್ರೆಸ್​ ಶಾಸಕರಾಗಿದ್ದ ಉಮೇಶ್​ ಜಾಧವ್​ ಅವರನ್ನು ಅಪರೇಷನ್​ ಕಮಲದ ಮೂಲಕ ಸೆಳೆದ ಬಿಜೆಪಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆಗೆ ಎದುರಾಳಿಯನ್ನಾಗಿ ಮಾಡಿದೆ. ಶಿಷ್ಯನಾಗಿ ಕಾಂಗ್ರೆಸ್​​ಗೆ ಪಾದಾರ್ಪಣೆ ಮಾಡಿದ ಉಮೇಶ್​ ಜಾಧವ್​, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಬಲ ಪೈಪೋಟಿ ಕೊಡ್ತಿದ್ದು, ಇನ್ನಿಬ್ಬರು ಶಿಷ್ಯಂದಿರಾದ ಬಾಬುರಾವ್​ ಚಿಂಚನಸೂರ ಹಾಗೂ ಮಾಲಿಕಯ್ಯ ಗುತ್ತೇದಾರ್​ ಉಮೇಶ್​ ಜಾಧವ್​ ಪರವಾಗಿ ನಿಂತಿರೋದು ಸೋಲಿಲ್ಲದ ಸರದಾರನಾಗಿರುವ ಖರ್ಗೆಗೆ ಮೊದಲ ಸೋಲಿನ ರುಚಿ ತೋರಿಸಲಾಗುತ್ತದೆಯೇ ಎಂಬ ಅನುಮಾನ ಶುರುವಾಗಿದೆ. ಹೀಗಾಗಿ ಗೆಲುವಿನ ರಣತಂತ್ರ ರೂಪಿಸಲು ಮುಂದಾಗಿರುವ ಮಲ್ಲಿಕಾರ್ಜುನ ಖರ್ಗೆ, ಬದ್ಧ ವೈರಿಯನ್ನೇ ಭೇಟಿ ಮಾಡಿದ್ದಾರೆ.

ಹೌದು, ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲಾ ದ್ವೇಷವನ್ನು ಮರೆತು 35 ವರ್ಷಗಳಿಂದ ರಾಜಕೀಯ ಎದುರಾಳಿಯಾಗಿದ್ದ ಗುರುಮಠ್ಕಲ್​ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಮನೆಗೆ  ಭೇಟಿ ನೀಡಿ ತಮ್ಮ ಪರವಾಗಿ ಪ್ರಚಾರ ನಡೆಸುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​ ಜೆಡಿಎಸ್​ ಮೈತ್ರಿ ಮಾಡಿಕೊಂಡಿದ್ದರೂ ನಾಗನಗೌಡ ಕಂದಕೂರ, ಪ್ರಚಾರದಲ್ಲಿ ತೊಡಗಿಸಿಕೊಂಡಿರಲಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ನೇರವಾಗಿಯೇ ಬಂದು ಆಹ್ವಾನ ನೀಡಿದ್ದಾರೆ. ಮನೆಗೆ ಬಂದ ರಾಜಕೀಯ ಎದುರಾಳಿಯನ್ನು ಪರಸ್ಪರ ನಗುಮೊಗದಿಂದಲೇ ಸ್ವಾಗತಿಸಿದ ಜೆಡಿಎಸ್​ ಶಾಸಕ ಪ್ರಚಾರ ಮಾಡುವ ಭರವಸೆ ನೀಡಿದ್ದಾರೆ. ಕೆಲವು ಗಂಟೆಗಳ ಕಾಲ ಉಭಯ ನಾಯಕರ ಚರ್ಚೆ ನಡೆಸಿದ್ದು, ಬಿಜೆಪಿಯ ಎದುರಾಳಿ ಅಭ್ಯರ್ಥಿಯನ್ನು ಸೋಲಿಸುವ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

9 ಬಾರಿ ಗುರುಮಠ್ಕಲ್ ಕ್ಷೇತ್ರದಿಂದಲೇ ಮಲ್ಲಿಕಾರ್ಜುನ ಖರ್ಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಖರ್ಗೆಗೆ ಪ್ರತಿಸ್ಪರ್ಧಿಯಾಗಿ ಅಂದಿನಿಂದಲೂ ಪ್ರಬಲ ಪೈಪೋಟಿ ನೀಡಿದ್ದು ಎಂದರೆ ನಾಗನಗೌಡ ಕಂದಕೂರು ಹಾಗೂ ಕುಟುಂಬದ ಮೇಲೆ ಹಲವಾರು ಕೇಸು ಹಾಕಿಸಿದ್ರು, ಚುನಾವಣೆಯಲ್ಲಿ ಸೋಲಿಸಿದವರು ಎಂಬ ನೋವು ನಾಗನಗೌಡ ಕುಟುಂಬವನ್ನು ಕಾಡ್ತಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಮೇಲೆ ಇಡೀ ಕುಟುಂಬಕ್ಕೆ ಕೋಪವೂ ಇದೆ. ಆದ್ರೆ ರಾಜ್ಯದಲ್ಲಿ ಪಾಲನೆ ಆಗ್ತಿರುವ ಮೈತ್ರಿ ಧರ್ಮ ಪಾಲನೆಗಾಗಿ ನಾಗನಗೌಡ ಕಂದಕೂರ ಕುಟುಂಬ, ಖರ್ಗೆ ಬೆಂಬಲಿಸಲು ನಿರ್ಧಾರ ಮಾಡಿದ್ದು, ಮಲ್ಲಿಕಾರ್ಜುನ ಖರ್ಗೆಗೆ ಆನೆ ಬಲ ಬಂದಂತಾಗಿದೆ. ಖರ್ಗೆ ಜೊತೆಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಕೆ.ಬಿ.ಶಾಣಪ್ಪ, ಕೆ.ಸಿ.ಕೊಂಡಯ್ಯ ಮೊದಲಾದ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ. ಖರ್ಗೆ ಸೋಲಿನ ಭೀತಿಯಿಂದ ರಾಜಕೀಯ ಬದ್ದ ವೈರಿ ಮನೆಗೆ ಇದೇ ಮೊದಲ ಬಾರಿ ಭೇಡಿ ನೀಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಮುಖಂಡರು ಟೀಕೆ ಮಾಡಿದ್ದಾರೆ.

Leave a Reply