ಮೋದಿ ತವರಲ್ಲಿ ಹಾರ್ದಿಕ್ ಪಟೇಲ್ ಗೆ ಬಿತ್ತು ಗೂಸಾ, ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್‌ನಲ್ಲಿ ಪಾಟಿದಾರ್ ಮೀಸಲಾತಿ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಚುನಾವಣಾ ಸಮಾವೇಶದಲ್ಲಿ ಭಾಷಣ ಮಾಡುವಾಗ ಏಕಾಏಕಿ ವೇದಿಕೆ ಹತ್ತಿದ ವ್ಯಕ್ತಿಯೊಬ್ಬ ಹಾರ್ದಿಕ್ ಪಟೇಲ್ ಕೆನ್ನೆಗೆ ಬಾರಿಸಿದ್ದಾನೆ.‌ ಈ ಘಟನೆ ನಡೆಯುತ್ತಿದ್ದಂತೆ ವೇದಿಕೆ ಮೇಲೆ ನುಗ್ಗಿದ ಕಾರ್ಯಕರ್ತರು, ಕೆನ್ನೆಗೆ ಬಾರಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಬಾರಿಸಿದ್ದಾರೆ‌ ನೆಲಕ್ಕೆ ಹಾಕಿ ಮನಸೋಇಚ್ಛೆ ತುಳಿದಿದ್ದಾರೆ. ದೊಣ್ಣೆಯಿಂದ ಬಾರಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕನ ಕೆನ್ನೆಗೆ ಬಹಿರಂಗವಾಗಿ ಬಾರಿಸಿ, ಕಾರ್ಯಕರ್ತರಿಂದ ಹಿಗ್ಗಾಮುಗ್ಗಾ ಗೂಸಾ ತಿಂದು ಖಾಕಿ ವಶದಲ್ಲಿರುವ ವ್ಯಕ್ತಿಯನ್ನು ಪೊಲೀಸ್ರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಈತ ತನ್ನನ್ನು ತರುಣ್​ ಗುಜ್ಜಾರ್ ಎಂದು ಪರಿಚಯಿಸಿಕೊಂಡಿದ್ದು, ಕಳೆದ ವರ್ಷ ಪಾಟೀದಾರ್ ಸಮುದಾಯಕ್ಕೆ ಮೀಸಲಾತಿ ಕೊಡುವಂತೆ ಆಗ್ರಹಿಸಿ ಹಾರ್ದಿಕ್ ಪಟೇಲ್ ಹೋರಾಟ ಮಾಡುವಾಗ, ನನ್ನ ಪತ್ನಿ ಗರ್ಭಿಣಿಯಾಗಿದ್ದಳು, ಆಸ್ಪತ್ರೆಗೆ ದಾಖಲಿಸುವಾಗ ಹಾಗೂ ಮಗುವಿಗೆ ಅನಾರೋಗ್ಯ ಉಂಟಾದಾಗ ಪಾಟಿದಾರ್​ ಆಂದೋಲನದಿಂದ ಸಕಾಲದಲ್ಲಿ ಔಷಧಿ ತಂದುಕೊಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಾಟಿದಾರ್​ ಆಂದೋಲನದ ನೇತೃತ್ವ ವಹಿಸಿದ್ದ ಹಾರ್ದಿಕ್​ ಪಟೇಲ್‌ಗೆ ಹೊಡೆಯಬೇಕೆಂದು ಅಂದೇ ನಿರ್ಧರಿಸಿದ್ದೆ. ಇದೀಗ ಅವಕಾಶ ಸಿಕ್ಕಿದ್ದರಿಂದ, ಆತನಿಗೆ ಹೊಡೆದೆ ಎಂದು ಹೇಳಿದ್ದಾರೆ.

ಗುಜರಾತ್‌ನ ಸುರೇಂದ್ರನಗರದಲ್ಲಿ ಶುಕ್ರವಾರ ಬೆಳಗ್ಗೆ ಚುನಾವಣಾ ಪ್ರಚಾರ ನಡೆಸುವಾಗ ವೇದಿಕೆ ಮೇಲೇದಿದ್ದ ತರುಣ್, ಹಾರ್ದಿಕ್​ ಪಟೇಲ್​‌ ಕೆನ್ನೆಗೆ ಬಾರಿಸಿದ್ದ.‌ ಪ್ರತಿಭಟನೆ ನಡೆಸುವಾಗ ಔಷಧಿ ಅಂಗಡಿಗಳು ಬಂದ್ ಆಗಿದ್ದವು ಹಾಗಾಗಿ ಕೋಪ ಹೆಚ್ಚಾಗಿತ್ತು ಎಂದು ಕೂಡ ಹೇಳಿಕೆ ಕೊಟ್ಟಿದ್ದಾನೆ. ಪೊಲೀಸ್ರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ವಿಚಾರಣೆ ನಡೆಸಲಿದ್ದಾರೆ.

Leave a Reply