ಮಂಡ್ಯದಲ್ಲಿ ಮುಗಿತು ಸಮರ, ಈಗ ಗೆಲ್ಲೊರ್ಯಾರು? ಎಂಬುದೇ ಕುತೂಹಲ

ಡಿಜಿಟಲ್ ಕನ್ನಡ ಟೀಮ್:

ನಿಗಿ ನಿಗಿ ಕೆಂಡದಂತಾಗಿದ್ದ ಮಂಡ್ಯ ಲೋಕಸಭೆ ಚುನಾವಣೆ ಕ್ಷೇತ್ರ ಮತದಾನ ಮುಕ್ತಾಯವಾದ ಬಳಿಕ ತಣ್ಣಗಾಗಿದ್ದು, ಈಗ ಎಲ್ಲರ ಮನದಲ್ಲಿ ಕಾಡುತ್ತಿರುವುದು ಮೇ 23ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ಯಾರು ಗೆಲ್ತಾರೆ? ಎಂಬುದು. ಮಂಡ್ಯದಲ್ಲಿ ಮಾತ್ರವಲ್ಲ, ರಾಜ್ಯದ ಇತರೆ ಕ್ಷೇತ್ರ ಸೇರಿದಂತೆ ಎಲ್ಲೆಡೆ ಇದೇ ಮಾತು ಜನಜನಿತವಾಗಿದೆ.

ಮತದಾರ ತನ್ನ ಹಕ್ಕನ್ನು ಚಲಾಯಿಸಿದ್ದು, ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್​ ರೂಮಿನಲ್ಲಿ ಭದ್ರವಾಗಿದೆ. ಆದ್ರೆ ಫಲಿತಾಂಶ ಹೊರಬೀಳಲು ಇನ್ನೂ ಒಂದು ತಿಂಗಳು ಕಾಯಬೇಕಿದ್ದು, ಜನರ ನಾಡಿ ಮಿಡಿತ ಜೋರಾಗುತ್ತಿದೆ. ಜೆಡಿಎಸ್​ ಬೆಂಬಲಿಗರು ನಿಖಿಲ್​ ಕುಮಾರಸ್ವಾಮಿ ಗೆಲ್ತಾನೆ ಎಂದು ಘಂಟಾಘೋಷವಾಗಿ ಹೇಳ್ತಿದ್ದಾರೆ. ಆದ್ರೆ ಸುಮಲತಾ ಕಡೆಯವರು ಹೇಳ್ತಿರೋದು ಮಾತ್ರ ಫಿಫ್ಟಿ – 50 ಚಾನ್ಸ್​ ಇದ್ದು ಫಲಿತಾಂಶ ಏನು ಬೇಕಾದರೂ ಆಗಬಹುದು ಎನ್ನುತ್ತಿದ್ದಾರೆ. ಈ ಕುತೂಹಲದಿಂದಲೇ ಈಗ ಮಂಡ್ಯದಲ್ಲಿ ಬೆಟ್ಟಿಂಗ್ ಹವಾ ಜೋರಾಗಿದೆ.

ಮಂಡ್ಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದ್ದು, ದೇಶಾದ್ಯಂತ ಆಕರ್ಷಣೆಯ ಕ್ಷೇತ್ರವಾಗಿದೆ. ಮಂಡ್ಯದ ಜನ ಸ್ವಾಭಿಮಾನಕ್ಕೆ ಜಯವನ್ನು ತಂದು ಕೊಡ್ತಾರೆ ಎಂಬುದು ಸುಮಲತಾ ಪಡೆಯ ವಾದವಾದರೆ, ಅತ್ತ ಜೆಡಿಎಸ್​ ಅಭಿವೃದ್ಧಿಗಾಗಿ ಮತ ಚಲಾಯಿಸಿ, ಮಂಡ್ಯದ ಜನರಿಂದಲೇ ಜೆಡಿಎಸ್​-ಕಾಂಗ್ರೆಸ್​ ಸರ್ಕಾರದ ಅಸ್ತಿತ್ವಕ್ಕೆ ಬಂದಿದೆ. ಇದೀಗ ಮಂಡ್ಯದ ಜನರೇ ಸರ್ಕಾರಕ್ಕೆ ಶಕ್ತಿ ತುಂಬಬೇಕು. ಸಂಸತ್​ ಚುನಾವಣೆಯಲ್ಲೂ ಜೆಡಿಎಸ್​ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಸರ್ಕಾರಕ್ಕೆ ಜೆಡಿಎಸ್​ ಭದ್ರಕೋಟೆ ಅನ್ನೋದನ್ನು ಸಾಬೀತು ಮಾಡ್ಬೇಕು ಎಂದು ಮತಯಾಚನೆ ಮಾಡಿದ್ರು.

ಆದ್ರೆ ಸುಮಲತಾ ಬೆಂಬಲಿಗರೇ ಹೇಳುವ ಪ್ರಕಾರ, ಪ್ರಚಾರದಲ್ಲಿ ಸುಮಲತಾ ಪರ ಇದ್ದವರೂ ಮತದಾನದ ದಿನದ ವೇಳೆಗೆ ಜೆಡಿಎಸ್​ ಪರ ವಾಲಿದ್ದರು ಎನ್ನುವ ಮಾತುಗಳು ಮಂಡ್ಯ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ಮಂಡ್ಯದಲ್ಲಿ ಸುಮಲತಾ ಹಾಗೂ ನಿಖಿಲ್​ ಪರ ವಿರುದ್ಧವಾಗಿ ಲಕ್ಷ ಲಕ್ಷ ಬೆಟ್ಟಿಂಗ್​ ಕೂಡ ನಡೆಯುತ್ತಿದೆ. ಈ ನಡುವೆ ಜೆಡಿಎಸ್​ ಅಭಿಮಾನಿಗಳು ಸುಮಲತಾ ಸೋಲಿಗೆ ಸಾಲು ಸಾಲು ಕಾರಣಗಳನ್ನೂ ಕೊಡ್ತಿದ್ದಾರೆ. ಅವುಗಳು ಈಗಿವೆ…

  • ಸುಮಲತಾ ತಿರಸ್ಕೃತರ ಜೊತೆ ಸೇರಿ ಸಂಚು ಮಾಡಿದ್ರು: ಜೆಡಿಎಸ್​ ಪಕ್ಷಕ್ಕೆ ದ್ರೋಹ ಮಾಡಿ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕುವ ಮೂಲಕ ಜೆಡಿಎಸ್​ ಪಕ್ಷಕ್ಕೆ ದ್ರೋಹ ಮಾಡಿದ್ರು ಅನ್ನೋ ಕಾರಣಕ್ಕೆ ಮಂಡ್ಯದ ಜನ ಜನ ಚಲುವರಾಯಸ್ವಾಮಿ ಹಾಗೂ ರಮೇಶ್​ ಬಂಡಿಸಿದ್ದೇಗೌಡರನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಣಿಸಿದ್ರು. ಆದ್ರೆ ಸುಮಲತಾ ಈ ತಿರಸ್ಕೃತ ನಾಯಕರ ಜೊತೆ ಸೇರಿ ಜೆಡಿಎಸ್​ ವಿರುದ್ಧ ಮಸಲತ್ತು ಮಾಡಿದ್ರು ಅನ್ನೋ ಮಾತುಗಳು ಕೇಳಿ ಬಂದಿವೆ.
  • ಜನಸೇವೆ ಮುಖ್ಯವಾಗಿರಲಿಲ್ಲ, ಸೇಡಿಗಾಗಿ ಸ್ಪರ್ಧೆ: ಸುಮಲತಾ ಬಿಜೆಪಿ, ರೈತಸಂಘದ ಬೆಂಬಲ ಪಡೆದು ಚುನಾವಣೆ ನಡೆಸಿದ್ರು. ಆದ್ರೆ ಬೆನ್ನೆಲುಬಾಗಿ ಕೆಲಸ ಮಾಡಿದ್ದು ಕಾಂಗ್ರೆಸ್​ ಕಾರ್ಯಕರ್ತರು. ಆದ್ರೆ ಸುಮಲತಾ ಹೇಳಿಕೆ ನೀಡಿದ್ದು, ಮಂಡ್ಯ ಜನರ ಸೇವೆ ಮಾಡಲು ಬಂದಿದ್ದೇನೆ ಎಂದು. ಕಾಂಗ್ರೆಸ್​ನಿಂದ ಟಿಕೆಟ್​ ಸಿಗೋದಿಲ್ಲ ಎಂದು ಗೊತ್ತಿದ್ದರೂ ಕಾಂಗ್ರೆಸ್​ ನಾಯಕರ ಬಳಿ ಟಿಕೆಟ್​ ಕೇಳಿ ಸಿಂಪತಿ ಗಿಟ್ಟಿಸುವ ಕೆಲಸ ಮಾಡಿದ್ರು. ಆದ್ರೆ ಜೆಡಿಎಸ್​ ಮೊದಲಿನಿಂದಲೂ ನಮ್ಮ ಪಕ್ಷದಿಂದಲೇ ಅಭ್ಯರ್ಥಿ ನಿಲ್ಲಿಸ್ತೀವಿ, ಬೇಕಿದ್ರೆ ಸುಮಲತಾ ನಮ್ಮ ಪಕ್ಷದಿಂದ ಸ್ಪರ್ಧೆ ಮಾಡಿದ್ರೂ ಅವರನ್ನು ಗೆಲ್ಲಿಸುವ ಕೆಲಸ ಮಾಡ್ತೀವಿ ಎಂದು ಸ್ವತಃ ಜೆಡಿಎಸ್​ ನಾಯಕರು ಹೇಳಿದರೂ ಸುಮಲತಾ ಸೌಜನ್ಯಕ್ಕೂ ಮಾತನಾಡುವ ಕೆಲಸ ಮಾಡಲಿಲ್ಲ. ಜೆಡಿಎಸ್​ ಅಭ್ಯರ್ಥಿ ಹಾಕಿದಾಗ ಅವರಿಗೆ ಸಂಕಷ್ಟ ತಂದೊಡ್ಡುವ ಕೆಲಸ ಮಾಡ್ಬೇಕು ಎನ್ನುವ ಕಾರಣದಿಂದಲೇ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ರು ಅನ್ನೋ ಮಾತು ಕೂಡ ಮಂಡ್ಯ ತುಂಬಾ ಹರಿದಾಡ್ತಿದೆ.
  • ವಾಸ್ತವ್ಯ ಮಾಡಿಲ್ಲ:​ ನಟರು ಮಂಡ್ಯದ ಹೆಸರಲ್ಲಿ ಸಿನಿಮಾ ಮಾಡಿರಬಹುದು ಆದ್ರೆ, ಮಂಡ್ಯ ಜನರಿಗೆ ಮೂರು ಕಾಸಿನ ಸಹಾಯ ಮಾಡಿಲ್ಲ ಆದರೂ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬಂದು ಮನಸೋ ಇಚ್ಛೆ ಟೀಕೆ ಮಾಡಿದ್ದು, ಸ್ವಾಭಿಮಾನ ಎಂದು ಹೇಳುತ್ತಲೇ, ಮಂಡ್ಯ ಜನ ಮುಗ್ದರು, ಮೂರ್ಖರಲ್ಲ ಎನ್ನುವ ಮೂಲಕ ಮತಕ್ಕಾಗಿ ಜನರನ್ನು ತೀಕ್ಷ್ಣವಾಗಿ ಎಳೆದು ತಂದಿದ್ದಾರೆ. ನಾನು ಮಂಡ್ಯ ಜನರ ಸೇವೆಗಾಗಿ ಮಂಡ್ಯಕ್ಕೆ ಬಂದಿದ್ದೇನೆ ಎಂದು ಪ್ರಚಾರ ಮಾಡಿದ ಸುಮಲತಾ, ಪ್ರಚಾರದ ದಿನಗಳಲ್ಲಿ ಒಂದೇ ಒಂದು ದಿನವೂ ಮಂಡ್ಯದಲ್ಲಿ ವಾಸ್ತವ್ಯ ಮಾಡಲಿಲ್ಲ, ಕೇವಲ ಮೈಸೂರಿನ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಆದ್ರೆ ಗೆದ್ದ ಮೇಲೆ ಮಂಡ್ಯದಲ್ಲಿ ಉಳಿಯುತ್ತಾರೆ ಅನ್ನೋ ಮಾತನ್ನು ನಂಬುವುದಾದರೂ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ?

Leave a Reply