ಪ್ರಧಾನಿ ಮೋದಿಯೇ ಆರ್​ಎಸ್​ಎಸ್​ ಕಣ್ಣಿಗೆ ವಿಲನ್ ಆಗಿ ಕಾಣುತ್ತಿದ್ದಾರಾ!?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ಮೋದಿ ವಾಗ್ಮಿ, ಯಾವುದೇ ವಿಚಾರನ್ನು ಹೇಳಿದರು ಅದನ್ನು ಜನರಿಗೆ ಮನ ಮುಟ್ಟುವಂತೆ ಹೇಳ್ತಾರೆ. ಪ್ರಧಾನಿ ಮೋದಿ ಜನರನ್ನು ಮಾತುಗಳಲ್ಲೆ ಕಟ್ಟಿಹಾಕುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದ್ರೆ ಬಿಜೆಪಿ ಮಾತೃ ಸಂಸ್ಥೆ ಆರ್​ಎಸ್​ಎಸ್​ ಮಾತ್ರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಿರುಗಿ ಬಿದ್ದಿದೆ.

ಹೌದು, ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮುಖ ನೋಡಿಕೊಂಡು ಮತಕೊಡಿ, ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡ್ತಿದ್ದಾರೆ. ನಿಮ್ಮ ಕ್ಷೇತ್ರದ ಅಭ್ಯರ್ಥಿ ಮುಖ್ಯವಲ್ಲ ಪ್ರಧಾನಿ ಮೋದಿಯೇ ಅಭ್ಯರ್ಥಿ ಎಂಬ ಭಾವನೆಯಲ್ಲಿ ಮತ ನೀಡಿ ಎಂದು ಕರೆ ನೀಡುತ್ತಿದ್ದಾರೆ. ನಿನ್ನೆ ಶಿವಮೊಗ್ಗದಲ್ಲಿ ರಾಘವೇಂದ್ರ ಪರ ಮತಯಾಚನೆ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಕೂಡ, ರಾಘವೇಂದ್ರ ನಿಮ್ಮ ಅಭ್ಯರ್ಥಿಯಲ್ಲ, ಪ್ರಧಾನಿ ನರೇಂದ್ರ ಮೋದಿಯೇ ನಿಮ್ಮ ಅಭ್ಯರ್ಥಿ ಎಂದು ಬಿಜೆಪಿಯ ಕಮಲಕ್ಕೆ ಮತನೀಡಿ ಎಂದು ಕರೆ ಕೊಟ್ಟಿದ್ದರು. ಆದ್ರೆ ಬಿಜೆಪಿಯ ಪ್ರಚಾರ ತಂತ್ರಕ್ಕೆ ಆರ್​ಎಸ್​ಎಸ್​ ಚಾಟಿ ಬೀಸಿದೆ.

ಏಕವ್ಯಕ್ತಿ ಪೂಜೆ ಆರ್​ಎಸ್​ಎಸ್​ನಲ್ಲಿ ಸಲ್ಲದು!

ಸಂಘದಲ್ಲಿ ವ್ಯಕ್ತಿ ಪೂಜೆ ಸಲ್ಲ, ಸಂಘ ಒಬ್ಬ ವ್ಯಕ್ತಿಗಾಗಿ ಇಲ್ಲ ಎಂದು ಆರ್​ಎಸ್​ಎಸ್​ ನೇರವಾಗಿ ಹೇಳಿದೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಚುನಾವಣೆ ಸ್ಪರ್ಧೆ ಸಲ್ಲದು ಎಂದು ಆರ್​ಎಸ್​ಎಸ್​ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಚಾಟಿ ಬೀಸಿದ್ದಾರೆ. ಒಬ್ಬ ವ್ಯಕ್ತಿಯನ್ನು ತೋರಿಸಿ ಮತ ಕೇಳುವುದು ಭಾರತ ದೇಶದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶನಿವಾರ ಮಡಿಕೇರಿಯಲ್ಲಿ ಹೇಳಿದ್ದಾರೆ. ಜೊತೆಗೆ ದೇಶದಲ್ಲಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಚುನಾವಣೆ ನಡೆಯಬೇಕಿದೆ ಎಂದು RSS ನಾಯಕ ಪ್ರಭಾಕರ್ ಭಟ್ ಹೇಳಿದ್ದಾರೆ. ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ಅಂತ ನರೇಂದ್ರ ಮೋದಿ ಇದ್ದಾರೆ. ಬೇರೆ ಪಕ್ಷಗಳಲ್ಲಿ ಪ್ರಧಾನಿ ಅಭ್ಯರ್ಥಿ ಅಂತ ಯಾರೂ ಇಲ್ಲ ಎಂದಿರುವ ಕಲ್ಲಡ್ಕ ಪ್ರಭಾಕರ್​ ಭಟ್​, ಮೋದಿ ಪ್ರಧಾನಿ ಅಭ್ಯರ್ಥಿ ಆಗಿದ್ದಾರೆ ಎನ್ನುವ ಕಾರಣಕ್ಕೆ ಒಬ್ಬ ವ್ಯಕ್ತಿಯ ಹಿಂದೆ ಹೋಗೋದು ಸರಿಯಲ್ಲ ಎಂದು ಬಿಜೆಪಿಯ ಪ್ರಚಾರದ ವಿರುದ್ಧ ಗುಡುಗಿದ್ದಾರೆ.

ಮೋದಿಗೆ ಆರ್​ಎಸ್​ಎಸ್​ ಟಾಂಗ್​ ಯಾಕೆ ಗೊತ್ತಾ..?

ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲು ಆರ್​ಎಸ್​ಎಸ್​ ಮುಖ್ಯಸ್ಥರಾದ ಮೋಹನ್​ ಭಾಗವತ್​, ಈ ಬಾರಿ ಚುನಾವಣೆ ರಾಮಮಂದಿರ ವಿಚಾರದ ಮೇಲೆ ನಡೆಯಬೇಕು. ಯಾವ ಪಕ್ಷ ರಾಮಮಂದಿರ ನಿರ್ಮಾಣ ಮಾಡಲು ಸಿದ್ಧವಾಗಿದ್ಯೋ ಆ ಪಕ್ಷಕ್ಕೆ ಹಿಂದೂಗಳು ಮತ ನೀಡ್ಬೇಕು ಎಂದು ಕರೆ ಕೊಟ್ಟಿದ್ದರು. ಆದ್ರೆ ಜಾಣ್ಮೆ ಪ್ರದರ್ಶನ ಮಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ, ರಾಮಮಂದಿರ ಸೇರಿದಂತೆ ಯಾವುದೇ ವಿಚಾರಗಳು ಚುನಾವಣಾ ವಸ್ತುವಾಗದಂತೆ ನೋಡಿಕೊಂಡು, ದೇಶಪ್ರೇಮ, ಪಾಕಿಸ್ತಾನದ ಮೇಲಿನ ಸೇಡು ಎನ್ನುವ ವಿಚಾರಗಳ ಮೇಲೆ ಚುನಾವಣೆ ನಡೆಯುವಂತೆ ನೋಡಿಕೊಂಡ್ರು. ಇದ್ರಿಂದ ಕೋಪಕೊಂಡಿರುವ ಬಿಜೆಪಿ ಮಾತೃ ಸಂಸ್ಥೆ ಆರ್​ಎಸ್​ಎಸ್​, ಮೋದಿ ವಿರುದ್ಧವೇ ತಿರುಗಿಬಿದ್ದಿದೆ ಎನ್ನಲಾಗಿದೆ. ಈ ಬಾರಿ ಸ್ವಲ್ಪ ಏರುಪೇರಾದರೂ ಪ್ರಧಾನಿಯಾಗಿ ನರೇಂದ್ರ ಮೋದಿಯವರನ್ನು ಆರ್​ಎಸ್​ಎಸ್​ ಆಯ್ಕೆ ಮಾಡೋದಿಲ್ಲ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

Leave a Reply