ದೋಸ್ತಿಗಳಿಗೆ ‘ಕೈ’ ಕೊಡುವ ಸೂಚನೆ ಕೊಟ್ಟ ರಮೇಶ್ ಜಾರಕಿಹೊಳಿ

ಡಿಜಿಟಲ್ ಕನ್ನಡ ಟೀಮ್:

‘ನಾನು ತಾಂತ್ರಿಕವಾಗಿ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ…’ ಎಂದು ಹೇಳುವ ಮೂಲಕ ಕಾಂಗ್ರೆಸ್ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಶೀಘ್ರದಲ್ಲೇ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ.

ಗೋಕಾಕ್ ನಲ್ಲಿ ಮಂಗಳವಾರ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದ್ದು ಇಷ್ಟು…

‘ಕಾಂಗ್ರೆಸ್ ಪಕ್ಷಕ್ಕೆ ನಾನು ಇನ್ನೂ ರಾಜೀನಾಮೆ ಕೊಟ್ಟಿಲ್ಲ, ರಾಜೀನಾಮೆ ಕೊಟ್ಟ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. 1999ರ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ಇದೀಗ ಗುಂಪುಗಾರಿಕೆ ಮಿತಿ‌ಮೀರಿದೆ. ನಾನು ತಾಂತ್ರಿಕವಾಗಿ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಕತ್ತಿ ಟಿಕೆಟ್ ವಂಚಿತರಾದಾಗ ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿ‌ ಮಾತುಕತೆ ಮೂಲಕ‌ ಬಿಕ್ಕಟ್ಟನ್ನು‌ ಶಮನಗೊಳಿಸಿದ್ದರು. ಆದರೆ, ಕಾಂಗ್ರೆಸ್ ಪಕ್ಷದಿಂದ ಯಾರೂ ತಮ್ಮನ್ನು‌ ಸಂಪರ್ಕಿಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಪರಿಗಣನೆಗೆ ತೆಗೆದುಕೊಳ್ಳುವ ಪರಿಸ್ಥಿತಿಯೇ ಇಲ್ಲ.

ಇಂಥ ವಾತಾವರಣದಲ್ಲಿ ಕಾಂಗ್ರೆಸ್‌ನಲ್ಲಿ ಮುಂದುವರಿಯುವುದು ಅಸಾಧ್ಯ. ಹಾಗಾಗಿ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ‌‌ ಕೊಟ್ಟು ಬೇರೆ ಪಕ್ಷ ಸೇರ್ಪಡೆ ಬಗ್ಗೆ ತೀರ್ಮಾನ ಮಾಡುತ್ತೇನೆ.

ಇದೇ ಸಂದರ್ಭ ಸಹೋದರ ಲಖನ್ ಜಾರಕಿಹೊಳಿ ಸ್ಪರ್ಧೆ ಕುರಿತಂತೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿಗೆ ತಲೆ ಕೆಟ್ಟಿ ಹೋಗಿದೆ. ಈಗಾಗಲೇ ಸಹೋದರನೊಬ್ಬನನ್ನು ಹಾಳು ಮಾಡಿದ್ದಾರೆ. ಲಖನ್ ಜಾರಿಕಿಹೊಳಿ ಗೋಕಾಕ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾದರೆ ನಾನು ಅತ್ಯಂತ ಖುಷಿ ಪಡುತ್ತೇನೆ. ಬೇರೆಡೆಯಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ.

Leave a Reply