ಬಿಜೆಪಿ ಪ್ಲಾನ್ ನಂತೆ ರಮೇಶ್ ಸಿಡಿಸಿರೋ ಬಾಂಬ್ ಗೆ ಸಿಗುತ್ತಾ ಸಕ್ಸಸ್!?

ಡಿಜಿಟಲ್ ಕನ್ನಡ ಟೀಮ್:

ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇನ್ನೇನಿದ್ದರು ಮುಂದಿನ ತಿಂಗಳ ತನಕ ಫಲಿತಾಂಶಕ್ಕಾಗಿ ಕಾಯುವುದಷ್ಟೇ ಕೆಲಸ. ಆದ್ರೆ ಈ ನಡುವೆ ರಾಜ್ಯ ಸರ್ಕಾರ ಉಳಿಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಬಂದಿದ್ದರು. ನಿನ್ನೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಗೋಕಾಕ್‌ನ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡೋದು ಖಚಿತ. ಆದ್ರೆ ಯಾವಾಗ ರಾಜೀನಾಮೆ ನೀಡ್ತೆನೆ ಅನ್ನೋ ಬಗ್ಗೆ ಶೀಘ್ರವಾಗಿ ತಿಳಿಸುತ್ತೇನೆ ಎಂದು ಹೇಳಿದ ಮಾತು, ಮತ್ತೆ ಸರ್ಕಾರಕ್ಕೆ ಸಂಕಷ್ಟ ಎನ್ನುವ ಮಾತಿಗೆ ಪುಷ್ಟಿ ನೀಡಿದೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕರು, ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲ ಇನ್ನೂ ಸಾಕಷ್ಟು ಜೆಡಿಎಸ್ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದು ಮೇ 23 ರಂದು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸರ್ಕಾರ ಬಿದ್ದು ಹೋಗಲಿದೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಹೇಳಿಕೆ ಹಿಂದೆ ಬಿಜೆಪಿಯ ಮಾಸ್ಟರ್ ಮೈಂಡ್ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆದ್ರೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಾತ್ರ ಬಿಜೆಪಿಯ ಅಧಿಕಾರ ಉತ್ಸಾಹಕ್ಕೆ ತಣ್ಣೀರು ಸುರಿಯುವ ಕೆಲಸ ಮಾಡಿದ್ದು, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡ್ತಾರೆ ಅಂತಾ ತುಂಬಾ ದಿನಗಳಿಂದ ಗೊತ್ತಿದ್ದ ವಿಚಾರ, ಇದರಲ್ಲಿ ಹೊಸತೇನು ಇಲ್ಲ ಎಂದಿದ್ದಾರೆ. ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ಸರ್ಕಾರ ಬೀಳಿಸಲು ಬಿಜೆಪಿ ನಾಯಕರು ಕಸರತ್ತು ಮಾಡ್ತಿದ್ದಾರೆ. ಆದ್ರೆ ಸರ್ಕಾರ ಅಷ್ಟು ಸುಲಭವಾಗಿ ಬೀಳೋದಿಲ್ಲ ಎಂದಿದ್ದಾರೆ. ಜೊತೆಗೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವ ವಿಚಾರದ ಬಗ್ಗೆ ಮಾತನಾಡಿ,‌ ಈ ಸುದ್ದಿ ಹೊಸದಲ್ಲ, ಎಲ್ಲರನ್ನೂ ವಿಶ್ವಾಸ ಪಡೆಯೋ ಕೆಲಸ ಮಾಡಲಾಗುವುದು. ಸರ್ಕಾರ ಬೀಳಿಸಲು ಬಿಜೆಪಿಯ ಎಲ್ಲಾ ನಾಯಕರು ಕಾಯುತ್ತಿದ್ದಾರೆ. ನಮ್ಮ ಶಾಸಕರನ್ನು ಉಳಿಸಿಕೊಳ್ಳೋ ಕೆಲಸ ನಾವು ಮಾಡುತ್ತೇವೆ. ನನ್ನ ಆಡಳಿತದ ಬಗ್ಗೆ ಶಾಸಕರು ಮುನಿಸಿಕೊಂಡಿದ್ದಾರೆ ಎಂದು ಯಡಿಯೂರಪ್ಪಗೆ ಯಾರು ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿಯವರು ಮೇ 23 ರ ನಂತರ ಸರಕಾರ ಬೀಳಲಿದೆ ಎಂದು ಗಡುವು ಕೊಟ್ಟಿದ್ದಾರೆ. ಯಾರು ಏನು ಹೇಳಿದ್ದಾರೆ ಅನ್ನೋದು ಮುಖ್ಯವಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರು ಸೇರಿ ಸರ್ಕಾರವನ್ನು ಸುಭದ್ರವಾಗಿ ನಡೆಸಬೇಕಿದೆ. ನಾನು ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ‌‌.

ಡ್ರಾಮ ಮಾಡುವವರನ್ನು ನಾನು ಹಿಡಿದುಕೊಳ್ಳಲು ಆಗಲ್ಲ ಎಂದಿದ್ದಾರೆ. ಜೊತೆಗೆ ಸರಕಾರ ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಯವರು ನಡೆಸುವ ಹೈಡ್ರಾಮ ನೋಡಿ‌ ಖುಷಿಪಡುವೆ ಎಂದು ಟಾಂಗ್ ಕೊಟ್ಟಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮಾತನಾಡಿ, ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಅವರಿಗೆ ವೈಯಕ್ತಿಕ ಸ್ವಾತಂತ್ರ್ಯವಿದೆ. ಅವರು ಏನ್ ತೀರ್ಮಾನ ತೆಗೆದುಕೊಳ್ತಾರೋ ತೆಗೆದುಕೊಳ್ಳಲಿ. ರಮೇಶ್ ಜಾರಕಿಹೊಳಿ ಇವತ್ತೊಂದು ಹೇಳಿಕೆ ಕೊಡ್ತಾರೆ, ನಾಳೆ ಮತ್ತೊಂದು ಹೇಳಿಕೆ ಕೊಡ್ತಾರೆ.‌ ದಿನಕ್ಕೊಂದು ಹೇಳಿಕೆ ಕೊಡ್ತಾರೆ. ನಾವು ಸಾಕಷ್ಟು ಬಾರಿ ಅವ್ರನ್ನ ಭೇಟಿ ಮಾಡಲು ಪ್ರಯತ್ನ ಮಾಡಿದೆವು. ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬಳಿಕ ಕ್ರಮದ ಬಗ್ಗೆ ನಿರ್ಧಾರ ಮಾಡ್ತೇವೆ. ತಕ್ಷಣ ಏನು ತೀರ್ಮಾನ ತೆಗದುಕೊಳ್ಳೋದಕ್ಕೆ ಆಗಲ್ಲ. ಜತೆಗೆ ಅವರು ಏನು ತೀರ್ಮಾನ ತೆಗದುಕೊಳ್ಳುತ್ತಾರೆ ನೋಡೋಣ. ನಮ್ಮ ಮುಂದೆ ಇನ್ನು ಎರಡು ಕ್ಷೇತ್ರಗಳ ಉಪಚುನಾವಣೆ ಇದೆ ಆ ಬಳಿಕ ನಿರ್ಧಾರ ಎಂದಿದ್ದಾರೆ. ಜೊತೆಗೆ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲೂ ಇದ್ದು, ಒಂದು ವೇಳೆ ಆಪರೇಷನ್ ಕಮಲ ನಡೆದರೆ ರಿವರ್ಸ್ ಆಪರೇಷನ್ ಆದರೂ ಆಗಬಹುದು ಎಂದು ಎಚ್ಚರಿಸಿದ್ದಾರೆ.

ರಮೇಶ್ ಜಾರಕಿಹೊಳಿ ಹೇಳಿಕೆಗೂ ಬಿಜೆಪಿಗೂ ಏನು ಸಂಬಂಧ ಎನ್ನುವ ಬಗ್ಗೆ ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು‌‌. ಹೌದು ಕಾಂಗ್ರೆಸ್ ಶಾಸಕನ ರಾಜೀನಾಮೆ ವಿಚಾರಕ್ಕೂ ಬಿಜೆಪಿಗೂ ಏನು ಸಂಬಂಧ ಎನ್ನಬಹುದು. ಆದ್ರೆ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗಲು ಸಿದ್ಧರಾಗಿದ್ದಾರೆ ಅನ್ನೋದು ಹಳೇ ಸುದ್ದಿ. ಆದ್ರೆ ಮತದಾನದ ಬಳಿಕ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ.

ಮತದಾನ ಆರಂಭವಾದ ಸ್ವಲ್ಪ ಹೊತ್ತಿನ ನಂತ್ರ ರಮೇಶ್ ಜಾರಕಿಹೊಳಿ ಸಿಡಿಸಿದ ಬಾಂಬ್ ಎಲ್ಲಾ ಮಾಧ್ಯಮಗಳಲ್ಲೂ ಜಾತ್ರೆಯ ಹಾಗೆ ಆವರಿಸಿಕೊಳ್ತು. ರಾಜೀನಾಮೆ ಎನ್ನುತ್ತಿದ್ದ ಹಾಗೆ ರಾಜ್ಯ ಸರ್ಕಾರ ಬೀಳುತ್ತಾ..? ರಾಜ್ಯ ಸರ್ಕಾರಕ್ಕೆ ಡೆಡ್‌ಲೈನ್ ಅನ್ನೋ ಹೇಳಿಕೆಗಳೆಲ್ಲಾ ಮಾಧ್ಯಮಗಳಲ್ಲಿ ಆವರಿಸಿಕೊಳ್ತು. ಇದರಿಂದ ಬಿಜೆಪಿಗೆ ಹೋಗುವ ಮತಗಳ ಸಂಖ್ಯೆ ಹೆಚ್ಚಾಗುತ್ತದೆ ಅನ್ನೋ ಲೆಕ್ಕಾಚಾರ ಇದೆ ಎನ್ನಲಾಗ್ತಿದೆ.‌ ಉತ್ತರ ಕರ್ನಾಟಕದಲ್ಲಿ ಬಹುತೇಕ ಬಿಜೆಪಿಗೆ ಭಾರೀ ಬೆಂವಲವಿದೆ.‌ ಅದರಲ್ಲಿ ಕೆಲವು ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಡ ಹಿಡಿತ ಸಾಧಿಸಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದರೆ ಕಾಂಗ್ರೆಸ್‌ಗೆ ಮತ ಹಾಕುವ ಜನ ಕೂಡ ಬಿದ್ದೋಗು ಸರ್ಕಾರ ಬೆಂಬಲಿಸುವ ಬದಲು ಬಿಜೆಪಿಗೆ ಹಾಕೋಣ ಎನ್ನುವ ನಿರ್ಧಾರ ಮಾಡ್ತಾರೆ. ಈ ರೀತಿ ಒಂದೆರಡು ಪರ್ಸೆಂಟ್ ಮತಗಳು ಬದಲಾದರೂ ಗೆಲುವು ದಕ್ಕುತ್ತದೆ. ಅದೇ ಕಾರಣಕ್ಕೆ ಬಿಜೆಪಿಯವರು ರಮೇಶ್ ಕಾರಕಿಹೊಳಿಯನ್ನು ದಾಳವಾಗಿ ಬಳಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಆದ್ರೆ ಜನ ಮಾಧ್ಯಮ ನೋಡಿ ರಮೇಶ್ ಜಾರಕಿಹೊಳಿ‌ ಮಾತಿನಿಂದ ಬದಲಾಗ್ತಾರಾ ಅನ್ನೋ ಅಚ್ಚರಿ ಮೂಡಿದೆ. ಈ ಯೋಜನೆ ರೂಪಿಸಿದೆ ಎನ್ನಲಾದ ಬಿಜೆಪಿಗೆ ಯಶಸ್ಸು ಸಿಗುತ್ತಾ ಅನ್ನೋದು ಮೇ 23ಕ್ಕೆ ಗೊತ್ತಾಗುತ್ತದೆ.

Leave a Reply