ಡಿ.ಕೆ. ಬ್ರದರ್ಸ್ ಯಶಸ್ವಿ ಪ್ಲಾನ್; ಯಡಿಯೂರಪ್ಪ ಫುಲ್ ಟೆನ್ಷನ್!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಗ್ಗೆ ಸಿಕ್ಕಿರುವ ಚುನಾವಣೋತ್ತರ ಆಂತರಿಕ ಸಮಾಲೋಚನೆ ಮಾಹಿತಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಮತ್ತವರ ಪುತ್ರ ಬಿ.ವೈ. ರಾಘವೇಂದ್ರ ಕಂಗಾಲಾಗಿದ್ದಾರೆ. ಈ ಬಾರಿ ಮತದಾರರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಹೆಚ್ಚು ಒಲವು ತೋರಿದ್ದಾರೆ ಎಂಬ ಮಾಹಿತಿ ಅಪ್ಪ-ಮಗನ ಚಿಂತೆಗೆ ಕಾರಣವಾಗಿದೆ.

ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕ ಬುಧವಾರ ರಾತ್ರಿ ನಡೆಸಿದ ವಿಧಾನಸಭೆ ಹಾಗೂ ಮತಗಟ್ಟೆವಾರು ಮತದಾನ ಪ್ರಮಾಣ ಕುರಿತ ಸಮಾಲೋಚನೆಯಲ್ಲಿ ಈ ಬಾರಿ ರಾಘವೇಂದ್ರ ಅವರಿಗೆ ಗೆಲುವು ಅಷ್ಟು ಸುಲಭವಲ್ಲ ಎಂಬ ಸಂಗತಿಯನ್ನು ಹೊರಹಾಕಿದೆ. ಈ ಬಾರಿ ದಾಖಲೆ ಪ್ರಮಾಣದ ಶೇಕಡಾ 76 ರಷ್ಟು ಮತದಾನವಾಗಿದೆ. ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಭದ್ರಾವತಿ, ತೀರ್ಥಹಳ್ಳಿ, ಸೊರಬ, ಸಾಗರದ ಜತೆಗೆ ಶಿವಮೊಗ್ಗ ಗ್ರಾಮಾಂತರದಲ್ಲೂ ದೋಸ್ತಿ ಅಭ್ಯರ್ಥಿ ಪರ ಮತಗಳು ವಾಲಿವೆ. ಜತೆಗೆ ಶಿಕಾರಿಪುರದಲ್ಲಿ ರಾಘವೇಂದ್ರ ಅವರಿಗೆ ಹಿಂದೆ ದಕ್ಕಿದ್ದ ಮತಗಳ ಅಂತರ ಈ ಬಾರಿ ಕಡಿಮೆ ಆಗುವ ಸಂಭವವಿದೆ ಎಂಬ ಮಾಹಿತಿ ಚರ್ಚೆ ಸಂದರ್ಭದಲ್ಲಿ ವ್ಯಕ್ತವಾಗಿದೆ.

ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ದೋಸ್ತಿ ಅಭ್ಯರ್ಥಿ ಡಿ.ಕೆ. ಸುರೇಶ್ ಕಡೇಕ್ಷಣದಲ್ಲಿ ಶಿವಮೊಗ್ಗಕ್ಕೆ ಬಂದು ಹೆಣೆದ ರಾಜಕೀಯ ತಂತ್ರಗಳೇ ಇದಕ್ಕೆ ಕಾರಣ. ಎಲ್ಲಕ್ಕಿಂಥ ಮಿಗಿಲಾಗಿ ಭದ್ರಾವತಿಯಲ್ಲಿ ದಶಕಗಳಿಂದಲೂ ಹಾವು-ಮುಂಗುಸಿಯಂತಿದ್ದ ಸಂಗಮೇಶ್ ಹಾಗೂ ಅಪ್ಪಾಜಿ ಅವರ ನಡುವೆ ಡಿ.ಕೆ. ಶಿವಕುಮಾರ್ ಅವರು ರಾಜೀ ಸಂಧಾನ ಏರ್ಪಡಿಸಿದ್ದು, ಸಖತ್ತಾಗಿಯೇ ಕೆಲಸ ಮಾಡಿದೆ. ದೋಸ್ತಿ ಅಭ್ಯರ್ಥಿಗೆ ಪೂರಕವಾಗಿ ಕೆಲಸ ಮಾಡಿದೆ ಎಂಬ ವಿಷಯವೂ ಸಮಾಲೋಚನೆ ಸಂದರ್ಭದಲ್ಲಿ ಬಂದಿದೆ ಎಂದು ಗೊತ್ತಾಗಿದೆ.

ಈ ಹಿಂದೆ ವಿಧಾನಸಭೆ ಚುನಾವಣೆಗಳಲ್ಲಿ ಭದ್ರಾವತಿಯಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿಗೆ ಸಿಗುತ್ತಿದ್ದ ಲೀಡ್ ಲೋಕಸಭೆ ಚುನಾವಣೆ ಬಂದಾಗ ಮಾತ್ರ ಕಡಿಮೆ ಆಗುತ್ತಿತ್ತು. ಇದಕ್ಕೆ ‘ಮ್ಯಾಚ್ ಫಿಕ್ಸಿಂಗ್’ ಕಾರಣ ಎಂಬ ಆರೋಪವಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಲಹೆ ಮೇರೆಗೆ ಆ ಬಾರಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಚುನಾವಣೆ ಬಗ್ಗೆ ಡಿ.ಕೆ. ಶಿವಕುಮಾರ್ ಮತ್ತು ಸುರೇಶ್ ಅವರು ವಿಶೇಷ ಕಾಳಜಿ ವಹಿಸಿದ್ದರು. ಈ ಮ್ಯಾಚ್ ಫಿಕ್ಸಿಂಗ್ ಮುಂದುವರಿದರೆ ನಾಯಕರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಕಳೆದ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಉಂಟಾಗಿದ್ದ ಸೋಲು ಅವರ ಬಗ್ಗೆ ಮತ್ತಷ್ಟು ಅನುಕಂಪ ತರಿಸಿತ್ತು. ಜತೆಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಜಿಲ್ಲೆಗೆ ಮಾಡಿರುವ ಕೆಲಸಗಳ ಋಣ ತೀರಿಸಲು ಜನರಿಗೆ ಇದೊಂದು ಅವಕಾಶ ಎಂದೂ ಪ್ರಚಾರ ಸಂದರ್ಭದಲ್ಲಿ ಮನವಿ ಮಾಡಲಾಗಿತ್ತು.

2014 ರ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ 3.63 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಆಗ ಯಡಿಯೂರಪ್ಪ ಸ್ಪರ್ಧಿಸಿದ್ದರು. ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಡಿಯೂರಪ್ಪ ತೆರವು ಮಾಡಿದ ಈ ಕ್ಷೇತ್ರಕ್ಕೆ ಬಿ.ವೈ. ರಾಘವೇಂದ್ರ ಅಭ್ಯರ್ಥಿಯಾಗಿದ್ದರು. ರಾಘವೇಂದ್ರ ಗೆದ್ದರಾದರೂ ಅಂತರ 50 ಸಾವಿರಕ್ಕೆ ಕುಸಿದಿತ್ತು. ಈ ಬಾರಿ ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಬಿಜೆಪಿಯ ಚುನಾವಣೋತ್ತರ ಆಂತರಿಕ ಸಮೀಕ್ಷೆ ಯಡಿಯೂರಪ್ಪ ಮತ್ತು ರಾಘವೇಂದ್ರ ಅವರಿಗೆ ಆತಂಕ ತಂದಿದೆ.

Leave a Reply