ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿಸಿಯೇ ತೀರುತ್ತೇನೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ಸಿನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಏಕಾಂಗಿಯಾಗಿದ್ದಾರೆ.
ತಮ್ಮ ಜತೆ ನಾಲ್ಕೈದು ಶಾಸಕರು ಬರಬಹುದು ಎಂಬ ನಂಬಿಕೆಯೊಂದಿಗೆ ರಮೇಶ್ ಅವರು ಮೊನ್ನೆ ಮತದಾನ ಮಾಡಿದ ನಂತರ ಶಾಸನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮಾತಾಡಿದ್ದರು. ಆದರೆ ಅವರು ನಂಬಿದ್ದ ಶಾಸಕರಾದ ಮಹೇಶ್ ಕುಮಟಳ್ಳಿ, ಬಿ. ನಾಗೇಂದ್ರ, ಶ್ರೀಮಂತರಾವ್ ಪಾಟೀಲ್, ಸುಧಾಕರ್ ಮತ್ತಿತರರು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಪರಿಸ್ಥಿತಿ ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಂಡ ಮಂಗನಂತಾಗಿದೆ.
ಮತದಾನದ ದಿನ ಆಕಾಶ-ಮುಗಿಲು ಒಂದು ಮಾಡುವಂತೆ ಕಾಂಗ್ರೆಸ್ ನಾಯಕರು ಮತ್ತು ತಮ್ಮ ಸಹೋದರ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕೂಗಾಡಿದ್ದ ರಮೇಶ್ ಜಾರಕಿಹೊಳಿ ಈಗ ಬಾಲ ಸುಟ್ಟ ಬೆಕ್ಕಿನಂತಾಗಿದ್ದಾರೆ. ಕಾಂಗ್ರೆಸ್ ಬಿಡೋದು ಖಂಡಿತ ಎಂದು ಹೇಳಿದ್ದ ಅವರೀಗ ವರಸೆ ಬದಲಿಸಿದ್ದು, ಒಬ್ಬರೇ ಹೋಗಲ್ಲ, ಜತೆಗೆ ಒಂದಷ್ಟು ಜನರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳುವ ಮೂಲಕ ಮುಖ ಉಳಿಸಿಕೊಳ್ಳುವ ವಿಫಲ ಪ್ರಯತ್ನ ಮಾಡಿದ್ದಾರೆ.
ಮೊನ್ನೆ ರಮೇಶ್ ಮಾತಾಡಿದ್ದ ಶೈಲಿ ಅವರು ಇನ್ನೇನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡೇ ಬಿಟ್ಟರು ಎನ್ನುವಂತಿತ್ತು. ಕಾಂಗ್ರೆಸ್ಸಿನಲ್ಲಿ ತಮ್ಮಂಥವರಿಗೆ ಮರ್ಯಾದೆ ಇಲ್ಲ, ಬಿಜೆಪಿಯಲ್ಲಿ ಬಂಡಾಯ ಎದ್ದವರನ್ನು ಕೆಲವೇ ಗಂಟೆಗಳಲ್ಲಿ ಯಡಿಯೂರಪ್ಪ ಸಮಾಧಾನ ಮಾಡಿದ್ದರು. ಆದರೆ ತಮ್ಮ ಸಮಸ್ಯೆ ಕೇಳದೆ ಮೂಲೆಗುಂಪು ಮಾಡಲಾಗಿದೆ. ಹೀಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರೋದು ಗ್ಯಾರಂಟಿ ಅಂದಿದ್ದರು. ಆದರೆ ಅವರ ಈ ಮಾತಿಗೆ ಪಕ್ಷದ ನಾಯಕರಾರು ಕ್ಯಾರೆ ಅನ್ನಲಿಲ್ಲ. ಅವರಿಗೆ ಹೇಳಿ ಸಾಕಾಗಿದೆ, ಹೋದರೆ ಹೋಗಲಿ ಎನ್ನುವ ನಿರ್ಲಕ್ಷ್ಯ ಮೆರೆದರು. ಇದಕ್ಕಿಂತ ರಮೇಶ್ ಅವರಿಗೆ ಹೆಚ್ಚು ಮರ್ಮಾಘಾತ ಉಂಟು ಮಾಡಿದ್ದು ಅವರ ಸಹೋದರರಾದ ಸತೀಶ್ ಹಾಗೂ ಲಖನ್ ಜಾರಕಿಹೊಳಿ ರಮೇಶ್ ಅವರಿಗೆ ತಿರುಗೇಟು ಕೊಟ್ಟದ್ದು. ರಮೇಶ್ ಮೊದಲಿಂದಲೂ ಬ್ಲಾಕ್ ಮೇಲ್ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮಂತ್ರಿ ಮಾಡಲಾಗಿತ್ತು. ಜಿಲ್ಲೆ ಉಸ್ತುವಾರಿ ಕೊಡಲಾಗಿತ್ತು. ನಾಯಕತ್ವ ಮೆರೆಯುವ ಬದಲು ಪಕ್ಷವಿರೋಧಿ ಚಟುವಟಿಕೆ ಮಾಡಿದ ರಮೇಶ್ ಗೆ ಕಿರೀಟ ಹಾಕಬೇಕಿತ್ತಾ ಎಂದು ಲೇವಡಿ ಮಾಡಿದರು.
ಇದಕ್ಕೂ ಮಿಗಿಲಾಗಿ ರಮೇಶ್ ಅವರಿಗೆ ತೀವ್ರ ನಿರಾಶೆ ಮಾಡಿರೋದು ಅವರ ನಂಬಿದ್ದ ಶಾಸಕರು ಕೈಕೊಟ್ಟದ್ದು. ಬಳ್ಳಾರಿಯ ಬಿ. ನಾಗೇಂದ್ರ ಮೊದಲು ರಮೇಶ್ ಜತೆ ಗುರುತಿಸಿಕೊಂಡಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಅವರ ಸಹೋದರ ವೆಂಕಟೇಶ್ ಪ್ರಸಾದ್ ಬದಲು ತಮ್ಮ ಭಾವನ ತಂದೆ ದೇವೇಂದ್ರಪ್ಪ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಲು ರಮೇಶ್ ಒತ್ತಡ ಹಾಕಿದ್ದು ನಾಗೇಂದ್ರ ಅವರಿಗೆ ಬೇಸರ ತರಿಸಿತ್ತು. Blood is thicker than water (ರಕ್ತ ಸಂಬಂಧದ ಮುಂದೆ ಉಳಿದ ಸಂಬಂಧಗಳು ನಗಣ್ಯ) ಎನ್ನುವುದನ್ನು ರಮೇಶ್ ಕೂಡ ಸಾಬೀತು ಮಾಡಿದರು ಎಂದು ನಾಗೇಂದ್ರ ಈಗ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಇನ್ನು ಮಹೇಶ್ ಕುಮಟಳ್ಳಿ, ಶ್ರೀಮಂತರಾವ್ ಪಾಟೀಲ್, ಸುಧಾಕರ್ ಮತ್ತಿತರಿಗೆ ರಮೇಶ್ ಜಾರಕಿಹೊಳಿ ಪ್ರತಿಷ್ಠೆಗೆ ತಾವು ಬಲಿಯಾಗುತ್ತೇವೆ ಎಂಬುದು ಮನವರಿಕೆ ಆಗಿ ಹೋಗಿದೆ. ತಾವು ಪಕ್ಷ ಬಿಟ್ಟು ಹೋಗುವುದರಿಂದ ಹೆಚ್ಚೆಂದರೆ ದೋಸ್ತಿ ಸರಕಾರ ಉರುಳಬಹುದೇ ಹೊರತು ಹೊಸ ಸರಕಾರವೂ ಬರುವುದಿಲ್ಲ, ತಮಗೆ ಅಧಿಕಾರವೂ ಸಿಗುವುದಿಲ್ಲ. ವಿಧಾನಸಭೆ ವಿಸರ್ಜನೆ ಆಗಿ ಹೊಸದಾಗಿ ಚುನಾವಣೆಗೆ ಹೋಗಬಹುದು. ಮತ್ತೆ ಚುನಾವಣೆ ಎದುರಿಸಲು, ಇರುವ ಅಧಿಕಾರ ಕಳೆದುಕೊಳ್ಳಲು ತಾವೇಕೆ ಬಲಿಪಶು ಆಗಬೇಕು ಎನ್ನುವ ತರ್ಕ ಅವರದು. ಹೀಗಾಗಿ“ಗೊತ್ತಿಲ್ಲದ ದೈವಕ್ಕಿಂಥ, ಗೊತ್ತಿರುವ ದೆವ್ವವೇ ಮೇಲು’’ ಎನ್ನುವಂತೆ ಅವರು ರಮೇಶ್ ಜಾರಕಿಹೊಳಿ ಅವರಿಗೆ ಟಾಟಾ ಹೇಳಿ ತಮ್ಮ ಪಾಡಿಗೆ ತಾವಿದ್ದಾರೆ.
ಬೆಳಗಾವಿಯ ಕಾಗವಾಡದ ಶಾಸಕ ಶ್ರೀಮಂತರಾವ್ ಪಾಟೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ‘ತಾವು ಕಾಂಗ್ರೆಸ್ ಬಿಡಲು ಯಾವುದೇ ಕಾರಣಗಳು ಇಲ್ಲ. ಈ ಬಗ್ಗೆ ಯಾರು ಏನೇ ಹೇಳಿದರೂ ಅದು ಕೇವಲ ಊಹಾಪೋಹ’ ಎಂದು ಹೇಳಿದ್ದಾರೆ. ಮಹೇಶ್ ಕುಮಟಳ್ಳಿ ಬುಧವಾರವೇ ಈ ಮಾತು ಹೇಳಿದ್ದರು. ಸುಧಾಕರ್, ಬಿ.ಸಿ. ಪಾಟೀಲ್ ಇದ್ಯಾಕೋ ಸರಿ ಹೋಗುತ್ತಿಲ್ಲ ಎಂದು ಮೌನಕ್ಕೆ ಶರಣಾಗಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಕಾಂಗ್ರೆಸ್ ತೊರೆಯುವುದಾಗಿ ಬಹಿರಂಗವಾಗಿಯೇ ಹೇಳಿರುವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ವರಿಷ್ಠ ಮಟ್ಟದಲ್ಲಿ ಚರ್ಚೆ ನಡೆದಿದೆ. ಇದೆಲ್ಲದರ ಪರಿಣಾಮವೇ ಇದೀಗ ರಮೇಶ್ ಜಾರಕಿಹೊಳಿ ಏಕಾಂಗಿ.